ನ್ಯಾಯ ವಿತರಣೆ: ದೇಶದಲ್ಲೇ ರಾಜ್ಯ ಪೊಲೀಸ್‌ ಮೊದಲು

KannadaprabhaNewsNetwork |  
Published : Apr 18, 2026, 02:45 AM IST
ಬೆಳಗಾವಿಯಲ್ಲಿ ಪೊಲೀಸ್‌ ಕಟ್ಟಡಗಳನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ ಉದ್ಘಾಟಿಸಿದರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ನ್ಯಾಯ ವಿತರಣೆಯಲ್ಲಿ ಕರ್ನಾಟಕ ಪೊಲೀಸ್ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.

ನಗರದ ಸಿಟಿ ಲೇನ್ ಪೊಲೀಸ್ ಕ್ವಾರ್ಟರ್ಸ್ ಆವರಣದಲ್ಲಿ ಶುಕ್ರವಾರ ಪೊಲೀಸ್ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತಿ-ಸುವ್ಯವಸ್ಥೆ ಕಾಪಾಡಲು ಹಗಲಿರುಳು ಶ್ರಮಿಸುವ ಪೊಲೀಸರ ಕುಟುಂಬಗಳಿಗೆ ಸುರಕ್ಷಿತ ಹಾಗೂ ಸುಸಜ್ಜಿತ ವಸತಿ ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದರು.

ಬೆಳಗಾವಿ ಜಿಲ್ಲೆಯ ಗೋಕಾಕ, ಕಿತ್ತೂರು, ಕುಲಗೋಡ, ಸಂಕೇಶ್ವರ, ಚಿಕ್ಕೋಡಿ ಸೇರಿದಂತೆ ವಿವಿಧೆಡೆ ₹67.79 ಕೋಟಿ ವೆಚ್ಚದಲ್ಲಿ ಪೊಲೀಸ್ ಕಟ್ಟಡಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ಶಹಾಪುರದಲ್ಲಿ ₹3.92 ಕೋಟಿ ವೆಚ್ಚದಲ್ಲಿ ವಸತಿ ಕಟ್ಟಡ ನಿರ್ಮಾಣವಾಗುತ್ತಿದ್ದು, ಪ್ರತಿ ಮನೆಗೆ ₹38 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಕಳೆದ ವರ್ಷ ₹2000 ಕೋಟಿ ಹಾಗೂ ಈ ವರ್ಷ ₹350 ಕೋಟಿ ವೆಚ್ಚದಲ್ಲಿ ಪೊಲೀಸ್ ವಸತಿ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ ಎಂದು ಹೇಳಿದರು.

ಕಾನೂನು ರಕ್ಷಣೆ ಮಾಡುವ ದೃಷ್ಟಿಯಿಂದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಜ್ಯದ ಪೊಲೀಸ್ ಇಲಾಖೆಗೆ ಸೌಕರ್ಯ ಒದಗಿಸಲು ಸರ್ಕಾರ ಸ್ಪಂದಿಸಿದೆ. ಪೊಲೀಸ್ ಸಿಬ್ಬಂದಿಗೆ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಜನಸೇವೆಗೆ ತಕ್ಷಣ ಸ್ಪಂದಿಸಬೇಕು ಎಂದು ಕರೆ ನೀಡಿದರು.

ದುಶ್ಚಟಗಳಿಂದ ಯುವ ಸಮುದಾಯವನ್ನು ರಕ್ಷಿಸಲು ಕಾಲೇಜುಗಳಿಗೆ ಭೇಟಿ ನೀಡಿ ಮಾದಕ ವಸ್ತು ಸೇವನೆ ಕುರಿತು ಪೊಲೀಸ್ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸೈಬರ್ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ತಂತ್ರಜ್ಞಾನ ಬಳಕೆಯಿಂದ ಅಂತಹ ಪ್ರಕರಣಗಳನ್ನು ಪತ್ತೆಮಾಡಿ ವಂಚಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್(ರಾಜು) ಸೇಠ್ ಮಾತನಾಡಿ, ಪೊಲೀಸ್ ಸಿಬ್ಬಂದಿ ನಿರಂತರ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಹಬ್ಬಗಳು ಬಂದರೆ ರಜೆ ಸಿಗುವುದಿಲ್ಲ. ಸಮಾಜದ ರಕ್ಷಣೆಗೆ ಬಿಡುವಿಲ್ಲದೆ ಶ್ರಮಿಸುತ್ತಾರೆ. ಅವರ ಕುಟುಂಬಗಳ ಅನುಕೂಲಕ್ಕಾಗಿ ವಸತಿ ನಿಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ನಗರ ಪೊಲೀಸ್ ಆಯುಕ್ತ ಭೊರಸೆ ಭೂಷಣ್ ಗುಲಾಬರಾವ್ ಮಾತನಾಡಿ, ಪೊಲೀಸ್ ಸಿಬ್ಬಂದಿಗಳ ಅನುಕೂಲಕ್ಕಾಗಿ ಮತ್ತು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಬರುವವರಿಗೆ ಜಿಪಂನಿಂದ ಸಿಟಿ ಲೇನ್‌ನಲ್ಲಿ ಅಕ್ಕ ಕೆಫೆ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ.ಕೆ.ಎಂ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆರ್.ಹಿತೇಂದ್ರ, ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ.ಚೇತನ್ ಸಿಂಗ್ ರಾಠೋಡ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಪಂ ಸಿಇಒ ರಾಹುಲ್ ಶಿಂಧೆ, ಡಿಸಿಪಿ ನಾರಾಯಣ ಭರಮನಿ ಸೇರಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

---------

ಕೋಟ್‌

ರಾಜ್ಯದಲ್ಲಿ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆಯನ್ನು ಸಮರ್ಥವಾಗಿ ಕಾಪಾಡುತ್ತಿದೆ. ಇತರೆ ರಾಜ್ಯಗಳಿಂದ ಬಂಡವಾಳ ಹೂಡಿಕೆದಾರರು ಬರುತ್ತಾರೆ. ಇದರಿಂದ ರಾಜ್ಯಕ್ಕೆ ಆದಾಯ ಮತ್ತು ಉದ್ಯೋಗವಕಾಶಗಳು ದೊರೆಯುತ್ತಿವೆ. ನಮ್ಮ ಸರ್ಕಾರ ಬಂದ ನಂತರ ಕೋಮು ಗಲಭೆಗಳಿಗೆ ಕಡಿವಾಣ ಹಾಕಿದ್ದು, ರಾಜ್ಯದಲ್ಲಿ ಕೋಮುಗಲಭೆ ನಡೆದಿಲ್ಲ. ನಡೆಯಲೂ ಬಿಡುವುದಿಲ್ಲ. ಯುವಕರಿಗೆ ಮಾದಕ ವಸ್ತುಗಳ ಹಂಚಿಕೆ ಹಾಗೂ ಮಾದಕ ವಸ್ತುಗಳ ಸೇವನೆ ಪ್ರಕರಣಗಳು ಕಂಡು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಮಾದಕ ವಸ್ತುಗಳ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು.

- ಜಿ.ಪರಮೇಶ್ವರ, ಗೃಹ ಸಚಿವ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಬಸವನ ಬಾಗೇವಾಡಿಯಿಂದ ಬಸವಜ್ಯೋತಿ ಪಾದಯಾತ್ರೆ
ಉಕ್ಕು ಸಚಿವಾಲಯದ ಹಿಂದಿ ಸಲಹಾ ಸಮಿತಿಗೆ ಡಾ.ಸುನಿತಾ ಚವ್ಹಾಣ ನೇಮಕ