ಪಂಪನಗೌಡ ಬಾದನಹಟ್ಟಿ
ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಅಚಾನಕಾಗಿ ದುರ್ಘಟನೆ ಸಂಭವಿಸಿದರೆ ಮಕ್ಕಳ ಪರಿಸ್ಥಿತಿ ಊಹಿಸಲು ಅಸಾಧ್ಯ. ಅದಕ್ಕಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಗಣೇಶ ಗುಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1ರಿಂದ 5ನೇ ತರಗತಿಗಳು ನಡೆಯುತ್ತಿವೆ. ಇಲ್ಲಿ ಐದು ಕೊಠಡಿಗಳಿವೆ. ಈ ಪೈಕಿ ಮೂರು ಕೊಠಡಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿವೆ. ಶಾಲೆಯ ಚಾವಣಿಯ ಬಿರುಕು ಬಿಟ್ಟಿದೆ. ಎರಡು ಕೊಠಡಿಗಳ ಪೈಕಿ ಒಂದನ್ನು ಮುಖ್ಯಗುರುಗಳು ಕಚೇರಿಯಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಒಂದು ಕೊಠಡಿಗಳಲ್ಲಿ 42 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕೊಠಡಿ ಶಿಥಿಲಗೊಂಡು ಚಾವಣಿಯ ಪದರು ಕಿತ್ತು ಕಬ್ಬಿಣದ ರಾಡ್‌ಗಳು ಗೋಚರಿಸುತ್ತಿವೆ. ಮಳೆ ಬಂದರೆ ದಿನಪೂರ್ತಿ ಸೋರುತ್ತದೆ. ಯಾವಾಗ ಬೇಕಾದರೂ ಬೀಳುವ ಹಂತದಲ್ಲಿದೆ. ಶಾಲೆ ಮಕ್ಕಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಶಾಲೆಯಲ್ಲಿ ಶುದ್ಧ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಈವರೆಗೆ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳು, ಅಧಿಕಾರಿಗಳು ಇನ್ನಾದರೂ ಗಮನ ಹರಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡುತ್ತಿದ್ದಾರೆ.
ಮಕ್ಕಳ ದಾಖಲಾತಿ ಕುಸಿತ: 2021ರಲ್ಲಿ ಸುಮಾರು 80 ವಿದ್ಯಾರ್ಥಿಗಳು, 2022ರಲ್ಲಿ 60, 2025ರಲ್ಲಿ 55, ಪ್ರಸ್ತುತ ದಾಖಲಾತಿ 42ಕ್ಕೆ ಕುಸಿದಿದೆ. ಶಾಲೆಯಲ್ಲಿ ಅಗತ್ಯ ಸೌಲಭ್ಯ, ಶಿಕ್ಷಕರ ಕೊರತೆಯಿಂದ ಪಾಲಕರು ಖಾಸಗಿ ಶಾಲೆಯತ್ತ ಮುಖ ಮಾಡಿದ್ದಾರೆ. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆ ಮುಂದಿನ ವರ್ಷಕ್ಕೆ ಇನ್ನಷ್ಟು ಇಳಿಕೆ ಭೀತಿ ಇದೆ.ಶಾಲೆಯ ನಾಲ್ಕು ಬೋಧನಾ ಕೊಠಡಿಗಳು ಹಲವಾರು ವರ್ಷಗಳಿಂದ ಶಿಥಿಲಗೊಂಡಿವೆ. ಮಕ್ಕಳು ನಿತ್ಯ ಪ್ರಾಣಭಯದಲ್ಲೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಶೀಘ್ರವೇ ನೂತನ ಶಾಲಾ ಕಟ್ಟಡಗಳನ್ನು ನಿರ್ಮಿಸಬೇಕು ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಭೀಮೇಶ್.
ಕುಡತಿನಿ ಪಟ್ಟಣದ ಗಣೇಶಗುಡಿ ಸರ್ಕಾರಿ ಶಾಲೆಯ ಶಿಥಿಲಗೊಂಡ ಬೋಧನಾ ಕೊಠಡಿಗಳನ್ನು ಶೀಘ್ರವೇ ತೆರವುಗೊಳಿಸಲಾಗುವುದು. ನೂತನ ಕೊಠಡಿಗಳನ್ನು ನಿರ್ಮಿಸಲು ಸೂಕ್ತ ಕ್ರಮ ವಹಿಸಲಾಗುವುದು ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದಲಿಂಗಪ್ಪ.