ಮುಂಡರಗಿ: ಷಟಸ್ಥಲವು ಭಕ್ತನಿಂದ- ಮಹೇಶ- ಪ್ರಸಾದಿ- ಪ್ರಾಣಲಿಂಗಿ- ಶರಣ- ಐಕ್ಯವೆಂದು ಆರು ತರನಾಗಿದೆ. ವೀರಶೈವ ಸಿದ್ಧಾಂತದಲ್ಲಿ ಅಷ್ಟಾವರಣ ಅವಿಭಾಜ್ಯವಾದರೆ, ಪಂಚಾಚಾರಗಳು ಪ್ರಾಣ ಸ್ವರೂಪವನ್ನು ಹೊಂದಿವೆ ಎಂದು ಲಿಂಗನಾಯಕನಹಳ್ಳಿಯ ಚನ್ನವೀರ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಅನ್ನದಾನೀಶ್ವರ ಶಿವಯೋಗಿಗಳ 156ನೇ ಯಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಜರುಗಿದ ಷಟಸ್ಥಲ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಭಕ್ತನಾಗಿ ಗುರು- ಜಂಗಮ ಸೇವಾಸಕ್ತನಾಗಬೇಕು. ಮಹೇಶನು ಗುರುಲಿಂಗದಲ್ಲಿ ಶ್ರದ್ಧೆ- ನಿಷ್ಠೆಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ಪ್ರಸಾದಿಯಾದವನು ಸಾವಧಾನದಿಂದ ಪ್ರಸಾದವನ್ನು ಶಿವಪ್ರಸಾದಗೊಳಿಸಬೇಕು. ಪ್ರಾಣಲಿಂಗಿಯು ವಾಯುಪ್ರಾಣಿಯಾಗದೆ ಲಿಂಗವೇ ಪ್ರಾಣವೆಂದು ಭಾವಿಸುವನು ಎಂದರು.ಡಾ. ಅನ್ನದಾನೀಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶ್ರೀಮಠದ ಉತ್ತರಾಧಿಕಾರಿ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಚನ್ನವೀರಯ್ಯ ಹಿರೇಮಠ, ನಾಗಭೂಷಣ ಹಿರೇಮಠ ಮತ್ತು ಹಾಲಯ್ಯ ಹಿರೇಮಠ ಪೂಜಾ ಕಾರ್ಯ ನಡೆಸಿಕೊಟ್ಟರು. ನಂತರ ರಥೋತ್ಸವದ ಕಳಸಾರೋಹಣ, ಅನ್ನಪೂರ್ಣೆಶ್ವರಿ ಪೂಜೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭದಲ್ಲಿ ಜ.ಅ. ವಿದ್ಯಾರ್ಥಿಗಳ ನಿಲಯ ಉದ್ಘಾಟಿಸಲಾಯಿತು.ಅನ್ನದಾನ ಶಾಸ್ತ್ರಿಗಳು, ಸಂಗಮೇಶ ದೇವರು, ಯಾತ್ರಾ ಮಹೋತ್ಸವದ ಅಧ್ಯಕ್ಷ ಕೈಲಾಸಪತಿ ಹಿರೇಮಠ, ಮಹೇಶ ಜಂತ್ಲಿ, ಆನಂದ ನಾಡಗೌಡ್ರ, ಆರ್.ಆರ್. ಹೆಗ್ಗಡಾಳ, ಡಾ. ಬಿ.ಜಿ. ಜವಳಿ, ಎಂ.ಎಸ್. ಶಿವಶೆಟ್ಟಿ, ಬಸವರಾಜ ಬನ್ನಿಕೊಪ್ಪ, ದೊಡ್ಡಪ್ಪ ಅಂಗಡಿ, ಡಿ.ಸಿ. ಮಠ, ಜಯಣ್ಣ ಗುಜ್ಜರ, ಎನ್.ಎಫ್. ಅಕ್ಕೂರ, ಎಂ.ಜಿ. ಗಚ್ಚಣ್ಣವರ, ವಿ.ಜೆ. ಹಿರೇಮಠ, ಶರಣಪ್ಪ ಬೆಲ್ಲದ, ವೀರೇಶ ಸಜ್ಜನರ, ರಾಜಶೇಖರ ಕಡಿವಾಲರ, ವಿನಯ ಗಂಧದ ಉಪಸ್ಥಿತರಿದ್ದರು.
ಶೀಘ್ರದಲ್ಲೇ ಕಡಲೆ ಖರೀದಿ ಕೇಂದ್ರ ಆರಂಭ
ರೋಣ: ಮಾರುಕಟ್ಟೆಯಲ್ಲಿ ದರ ಕುಸಿತದಿಂದ ಸಂಕಷ್ಟದಲ್ಲಿರುವ ಕಡಲೆ ಬೆಳೆಗಾರರ ನೆರವಿಗೆ ಶೀಘ್ರದಲ್ಲೇ ರೋಣ, ಗಜೇಂದ್ರಗಡದಲ್ಲಿ ಬೆಂಬಲ ಬೆಲೆಯಡಿ ಖರೀದಿ ಕೇಂದ್ರ ಆರಂಭಿಸಲಾಗುತ್ತಿದೆ ಎಂದು ಶಾಸಕ ಜಿ.ಎಸ್. ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರೋಣ ಹಾಗೂ ಗಜೇಂದ್ರಗಡ ತಾಲೂಕಿನ ಪ್ರಮುಖ ದ್ವಿದಳ ಬೆಳೆಗಳಲ್ಲಿ ಕಡಲೆ ಒಂದಾಗಿದೆ. 63860 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು, 718425 ಕ್ವಿಂಟಲ್ ಉತ್ಪಾದನೆ ನಿರೀಕ್ಷಿಸಲಾಗಿದೆ. ಈ ಭಾಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಇದು ಆದಾಯದ ಮೂಲವಾಗಿದೆ. ಅನಿಶ್ಚಿತ ಹವಾಮಾನ ಪರಿಸ್ಥಿತಿ ಬಳಿಕವೂ ಅನೇಕ ತಿಂಗಳ ಕಠಿಣ ಶ್ರಮದ ಮೂಲಕ ಕಡಲೆ ಫಸಲು ರೈತರ ಕೈ ಸೇರಿರುತ್ತದೆ. ಆದರೆ, ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ರೈತರಿಗೆ ಅನ್ಯಾಯವಾಗುತ್ತಿದೆ. ಹೀಗಾಗಿ ಶೀಘ್ರದಲ್ಲಿ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.