ಭೀಮಣ್ಣ ಗಜಾಪುರ
ಈ ಬಾರಿಯ ಬೇಸಿಗೆ ಹಿಂದಿಂದಿಗಿಂತಲೂ ಭೀಕರವಾಗಿದೆ. ಗುಡೇಕೋಟೆ, ಹೊಸಹಳ್ಳಿ ಹೋಬಳಿಯ ಕೆಲವು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇದ್ದರೂ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ತಾಲೂಕು ಕಚೇರಿಯಲ್ಲಿ ಉಳ್ಳವರಿಗೆ, ಮದ್ಯವರ್ತಿಗಳಿಗೆ ಮಾತ್ರ ಹೋದ ಕೂಡಲೇ ಕೆಲಸಗಳು ಆಗುತ್ತಿವೆ. ನೇರವಾಗಿ ರೈತರು, ಕೂಲಿಕಾರ್ಮಿಕರು ಹೋದರೆ ಅಲೆದಾಡಿಸುತ್ತಾರೆ. ಕೂಡ್ಲಿಗಿ ತಾಲೂಕಿನಲ್ಲಿ 80 ಕೆರೆಗಳಿಗೆ ನೀರು ತುಂಬಿಸುವ ಅಂದಾಜು ₹800 ಕೋಟಿ ಯೋಜನೆಗೆ ಚಾಲನೆ ನೀಡಿದರೂ ಕೆರೆಗಳಿಗೆ ಇನ್ನೂ ನೀರು ಬಂದಿಲ್ಲ.
ತಾಲೂಕು ಸರ್ಕಾರಿ ಆಸ್ಪತ್ರೆ ಸೇರಿದಂತೆ ತಾಲೂಕಿನ ಬಹುತೇಕ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲ. ಯಾವುದೇ ರೋಗಿಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಜಿಲ್ಲಾಸ್ಪತ್ರೆಗೆ ಕಳುಹಿಸುವುದು ವಾಡಿಕೆಯಾಗಿದೆ. ಕೆಲವು ತಜ್ಞರು ಇದ್ದರೂ ಜೀವದ ಅಳಿವು, ಉಳಿವು ಇದ್ದಾಗಲೂ ನಮಗ್ಯಾಕೆ ರಿಸ್ಕ್ ಎಂದು ಕೂಡ್ಲಿಗಿಯಲ್ಲಿಯೇ ಆಪರೇಷನ್, ಚಿಕಿತ್ಸೆ ಮಾಡುವುದಿದ್ದರೂ ಮಾಡುತ್ತಿಲ್ಲ. ಕೂಡ್ಲಿಗಿಯಲ್ಲಿ ಶಾಸಕರೇ ವೈದ್ಯರಿದ್ದರೂ ಅವರಿಗೆ ಆಸ್ಪತ್ರೆಗಳಿಗೆ ಭೇಟಿ ನೀಡಿ ತಾಲೂಕಿನ ಅತ್ಯಂತ ಕಡುಬಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಆಗುತ್ತಿಲ್ಲ. ಇಲ್ಲಿಯ ಜನತೆ ಹೊಸಪೇಟೆ, ದಾವಣಗೆರೆ, ಮಣಿಪಾಲ್ ಮುಂತಾದ ಕಡೆ ಖಾಸಗಿ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.ಡಕೋಟಾ ಡಿಪೋ: ಸಂಡೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹೂವಿನಹಡಗಲಿ ಡಿಪೋಗಳಲ್ಲಿ ರಾಜಹಂಸ, ಸ್ಲೀಪರ್ ಕೋಚ್ ಬಸ್‌ಗಳಿವೆ. ಆದರೆ ಬಳ್ಳಾರಿ, ಹೊಸಪೇಟೆ ಬಿಟ್ಟರೆ ಅತಿ ಹಳೆಯ ಡಿಪೋ ಎಂಬ ಹೆಗ್ಗಳಿಕೆ ಹೊಂದಿರುವ ಅಖಂಡ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಡಿಪೋದಲ್ಲಿ ಈಗಲೂ ಡಕೋಟ ಬಸ್ಸುಗಳೇ ರಾರಾಜಿಸುತ್ತವೆ. ಬೆಳಿಗ್ಗೆ, ಸಂಜೆಯಾದರೆ ಕೊಟ್ಟೂರು- ಕೂಡ್ಲಿಗಿ ಪಟ್ಟಣಗಳಿಗೆ ಒಂದು ಬಸ್ ಸಹ ಇರುವುದಿಲ್ಲ. ಡಿಪೋದಲ್ಲಿ ಒಂದು ರಾಜಹಂಸ, ಒಂದು ಸ್ಲೀಪರ್ ಕೋಚ್ ಬಸ್ ಸಹ ಇಲ್ಲದಿದ್ದರೂ ನಮ್ಮ ಶಾಸಕರು ಮಾತ್ರ ಈ ಬಗ್ಗೆ ತುಟಿ ಬಿಚ್ಚುವುದಿಲ್ಲ. ಹೀಗಾಗಿ ಅಧಿಕಾರಿಗಳು ಆಡಿದ್ದೇ ಆಟ ಎನ್ನುವಂತಾಗಿದೆ.
ಕೂಡ್ಲಿಗಿ ತಾಲೂಕು ಆಡಳಿತ ಸಂಪೂರ್ಣ ಜನಹಿತ ಮರೆತಿದೆ. ತಾಲೂಕು ಕಚೇರಿಯಲ್ಲಿ ಉಳ್ಳವರಿಗೆ ಮಾತ್ರ ಮಣೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿಯಿಂದ ಕೆಲವು ಕಚೇರಿಗಳು ಜನಸೇವೆ ಮರೆತಿವೆ ಎನ್ನುತ್ತಾರೆ ಸಿಪಿಐಎಂ ಹಿರಿಯ ಮುಖಂಡ ಗುನ್ನಳ್ಳಿ ರಾಘವೇಂದ್ರ.