ದೇವೇಗೌಡರ ವೇದಿಕೆಗೆ ನುಗ್ಗಿದ್ದ ಕೈ ಕಾರ್ಯಕರ್ತೆಯರಿಗೆ ಸನ್ಮಾನ

KannadaprabhaNewsNetwork | Updated : Apr 22 2024, 01:09 PM IST

ಸಾರಾಂಶ

 ಹಲ್ಲೆಗೆ ಒಳಗಾಗಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಭಾಗದಿಂದ ಅಭಿನಂದಿಸಲಾಯಿತು.

  ತುಮಕೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಗ್ರಾಮೀಣ ಭಾಗದ ತಾಯಂದಿರು ಹಾದಿ ತಪ್ಪುತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಖಂಡಿಸಿ, ಚುನಾವಣಾ ಪ್ರಚಾರದಲ್ಲಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಪ್ರಶ್ನಿಸಲು ತೆರಳಿ, ಬಿಜೆಪಿ ಮತ್ತು ಜೆಡಿಎಸ್ ಮಹಿಳಾ ಕಾರ್ಯಕರ್ತರಿಂದ ಹಲ್ಲೆಗೆ ಒಳಗಾಗಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಭಾಗದಿಂದ ಅಭಿನಂದಿಸಲಾಯಿತು.

ತುರುವೇಕೆರೆ ತಾಲೂಕಿನಲ್ಲಿ ಚುನಾವಣಾ ಪ್ರಚಾರದ ವೇಳೆ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ, ಪ್ರತಿಭಟನೆ ನಡೆಸಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು, ನಗರದ ಕುಂಚಟಿಗ ಭವನದಲ್ಲಿ ಪ್ರಚಾರದಲ್ಲಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರನ್ನು ಪ್ರಶ್ನಿಸಲು ತೆರಳಿದ್ದರು. 

ಈ ವೇಳೆ ಸೌಭಾಗ್ಯ, ವಿಜಯಲಕ್ಷ್ಮಿ ಮತ್ತು ಭಾಗ್ಯ ಎಂಬ ಮಹಿಳೆಯರ ಮೇಲೆ ಬಿಜೆಪಿ ಮತ್ತು ಜೆಡಿಎಸ್ ಮಹಿಳಾ ಘಟಕದ ಕಾರ್ಯಕರ್ತರು ಹಲ್ಲೆ ನಡೆಸಿ ಭವನದಿಂದ ಹೊರದಬ್ಬಿದ್ದರು. ಹಲ್ಲೆಯಿಂದ ಗಾಯಗೊಂಡಿದ್ದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರು ಚಿಕಿತ್ಸೆ ಪಡೆದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ರಾಜವರ್ಧನ್, ಎಸ್ಟಿ ಘಟಕದ ರಾಜ್ಯಾಧ್ಯಕ್ಷ ವಿಜಯಕುಮಾರ್ ನಾಯಕ್ , ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ.ಜಿ.ಲಿಂಗರಾಜು ಮತ್ತು ಎಸ್ಟಿ ಘಟಕದ ಅಧ್ಯಕ್ಷ ಕುಮಾರಸ್ವಾಮಿ ಸಮ್ಮುಖದಲ್ಲಿ ಸೌಭಾಗ್ಯ,ವಿಜಯಲಕ್ಷ್ಮಿ ಹಾಗೂ ಭಾಗ್ಯ ಅವರನ್ನು ಅಭಿನಂದಿಸಲಾಯಿತು.ಕೆಪಿಸಿಸಿ ಎಸ್ಸಿ ಘಟಕದ ಅಧ್ಯಕ್ಷ ರಾಜವರ್ಧನ್‌ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮಹಿಳೆಯರು ದಿಟ್ಟತನ ಪ್ರದರ್ಶಿಸುವುದು ಅನಿವಾರ್ಯ. ಸರ್ಕಾರದ ಗ್ಯಾರಂಟಿಗಳನ್ನು ಹಿಯಾಳಿಸಿ, ಮಹಿಳೆಯರನ್ನು ಕೆಟ್ಟವರೆಂಬಂತೆ ಬಿಂಬಿಸುವುದು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹೊಸದಲ್ಲ. ಮಾಜಿ ಸಂಸದರಾದ ಸುಮಲತಾ ಮತ್ತು ಡಿ.ಕೆ.ಶಿವಕುಮಾರ ಅವರ ತಾಯಿಯ ಬಗ್ಗೆ ಏನು ಮಾತನಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ.

 ಈ ವಿಚಾರವಾಗಿ ದೇವೇಗೌಡರನ್ನು ಪ್ರಶ್ನಿಸಲು ಹೋದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರ ಮೇಲೆ ಹಲ್ಲೆ ಖಂಡನೀಯ. ದೇವೇಗೌಡರಾದರೂ ಇದನ್ನು ತಡೆಯಬಹುದಾಗಿತ್ತು. ನಿಮ್ಮ ಕಾರ್ಯವನ್ನು ಕಾಂಗ್ರೆಸ್ ಪಕ್ಷ ಶ್ಲಾಘಿಸುತ್ತದೆ. ಕಾನೂನು ಹೋರಾಟ ಸೇರಿದಂತೆ ಎಲ್ಲ ವಿಚಾರದಲ್ಲಿಯೂ ನಾವು ನಿಮ್ಮೊಂದಿಗೆ ಇದ್ದೇವೆ. ದೃತಿಗೇಡುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದರು.

ಕೆಪಿಸಿಸಿ ಎಸ್ಟಿ ಘಟಕದ ಅಧ್ಯಕ್ಷ ವಿಜಯಕುಮಾರ ನಾಯಕ್ ಮಾತನಾಡಿ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ನಾಲಿಗೆ ಹಿಡಿತ ಇಲ್ಲ ಎಂಬುದು ಹಲವು ಸಂದರ್ಭಗಳಲ್ಲಿ ಸಾಭೀತಾಗಿದೆ. ಗ್ಯಾರಂಟಿಗಳ ಬಗ್ಗೆ ಹಗುರವಾಗಿ ಮಾತನಾಡಿದ್ದರಿಂದ ನ್ಯಾಯ ಕೇಳಲು ಹೋಗಿದ್ದರಲ್ಲಿ ತಪ್ಪೇನಿದೆ. ನಾಲ್ಕು ಮಾತನಾಡಿ ಕಳುಹಿಸಬಹುದಿತ್ತು. ಆದರೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಪೊಲೀಸ್ ಠಾಣೆಗೆ ಕರೆದೊಯ್ದು ಹಿಂಸೆ ನೀಡಿರುವುದು ಸರಿಯಲ್ಲ.

 ಈ ಘಟನೆಯಿಂದ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಹೆದರುವ ಅಗತ್ಯವಿಲ್ಲ. ಕಾಂಗ್ರೆಸ್ ಪಕ್ಷ ಸದಾ ನಿಮ್ಮೊಂದಿಗೆ ಇದೆ. ನಿಮ್ಮಂತಹ ಧೈರ್ಯವಂತ ಮಹಿಳೆಯರ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕ ಅಧ್ಯಕ್ಷ ಬಿ.ಜಿ.ಲಿಂಗರಾಜು ಮಾತನಾಡಿ, ಸಂವಿಧಾನದ ಪ್ರಕಾರ ನ್ಯಾಯ ಕೇಳುವ ಹಕ್ಕು ಎಲ್ಲರಿಗೂ ಇದೆ. ಮಗ ತಪ್ಪು ಮಾಡಿದಾಗ ತಂದೆಯನ್ನು ಪ್ರಶ್ನಿಸುವುದು ಸಹಜ. ಕಾಂಗ್ರೆಸ್ ಕಾರ್ಯಕರ್ತರು ದೇವೇಗೌಡರು ಭಾಗವಹಿಸಿದ್ದ ಸಭೆಯಲ್ಲಿ ನ್ಯಾಯ ಕೇಳಲು ಹೋದಾಗ ಹಲ್ಲೆ ನಡೆಸಿರುವುದು ಖಂಡನೀಯ. 

ಇಂತಹ ಘಟನೆ ಮತ್ತೊಮ್ಮೆ ಮರುಕಳಿಸದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ. ಅಲ್ಲದೆ ಮಾಜಿ ಪ್ರಧಾನಿಯೊಬ್ಬರನ್ನು ಪ್ರಶ್ನಿಸುವ ಧೈರ್ಯ ತೋರಿದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತೆಯರಾದ ಕೆಸ್ತೂರು ಸೌಭಾಗ್ಯ, ವಿಜಯಲಕ್ಷ್ಮಿ ಮತ್ತು ಭಾಗ್ಯ ಅವರನ್ನು ಎಸ್ಸಿ ಮತ್ತು ಎಸ್ಟಿ ಘಟಕ ಅಭಿನಂದಿಸುತ್ತದೆ. ಸದಾ ಕಾಲ ಅವರೊಂದಿಗೆ ಇರುತ್ತದೆ ಎಂಬ ಭರವಸೆಯನ್ನು ನೀಡಿದರು.ಜಿಲ್ಲಾ ಕಾಂಗ್ರೆಸ್ ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ, ಕೆಪಿಸಿಸಿ ಸದಸ್ಯ ಡಾ.ಸಿದ್ದಾಪರ ರಂಗಶಾಮಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್, ವಕ್ತಾರ ಸುಜಾತ, ಮೈಲಾರಪ್ಪ, ಅಲ್ಪಸಂಖ್ಯಾತರ ಘಟಕದ ಆತೀಕ್ ಅಹಮದ್, ಮುಖಂಡರಾದ ನಾಗೇಶ್, ಸಣ್ಣರಾಮಣ್ಣ, ಶಿವಾಜಿ ಇದ್ದರು

Share this article