ಹೊಸದುರ್ಗ: ವಾಲ್ಮೀಕಿ ಸಮುದಾಯದ ಆರ್ಥಿಕ ಸಬಲೀಕರಣಕ್ಕಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಇಡಲಾಗಿದ್ದ 188.6 ಕೋಟಿ ರು. ಹಣ ದುರುಪಯೋಗವಾಗಿದ್ದು, ಇದರ ಬಗ್ಗೆ ಹೋರಾಟ ಮಾಡಿದ ವಿರೋಧ ಪಕ್ಷದವರಿಗೆ ಅಭಿನಂದಿಸುತ್ತೇನೆ ಎಂದು ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದರು.
ಚುನಾವಣೆ ಬಂದಾಗ ಮಾತ್ರ ನಮ್ಮನ್ನು ಆಳುವ ಎಲ್ಲಾ ಸರ್ಕಾರಗಳು ನಮ್ಮನ್ನ ಓಲೈಕೆ ಮಾಡಿ ಮತ ಪಡೆದು ಚುನಾವಣೆ ನಂತರ ವಾಲ್ಮೀಕಿ ಸಮುದಾಯದ ಹಿತವನ್ನೇ ಮರೆಯುತ್ತಾರೆ. ಅಂಬೇಡ್ಕರ್ ನಮಗೆ ಸಂವಿಧಾನ ಬದ್ಧ ಹಕ್ಕು ನೀಡಿದ್ದು, ಹೋರಾಟವನ್ನಾದರೂ ಮಾಡಿ ಸಮುದಾಯಗಳಿಗೆ ಬರುವ ಹಕ್ಕನ್ನು ಪಡೆದುಕೊಳ್ಳದೇ ಬಿಡೇವು ಎಂದರು.
ಫೆ.8, 9ಕ್ಕೆ ವಾಲ್ಮೀಕಿ ಜಾತ್ರೆ: ನಾರದ ಮಹರ್ಷಿಗಳಿಂದ ಪ್ರಭಾವಿತವಾಗಿ ರಾಮ ತಾರಕ ಮಂತ್ರ ಜಪಿಸಿದ ರತ್ನಾಕರ ಮಹರ್ಷಿ ವಾಲ್ಮೀಕಿಯಾದರು. ಸಮಾಜದ ಜಾಗೃತಿಗಾಗಿ ವಾಲ್ಮೀಕಿಯ ಆದರ್ಶ ಗುಣಗಳನ್ನು ಯುವ ಪೀಳಿಗೆ ತಿಳಿಸುವ ಉದ್ದೇಶದಿಂದ ಹರಿಹರದ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಫೆ.8 ಮತ್ತು 9 ರಂದು ವಾಲ್ಮೀಕಿ ಜಾತ್ರೆಯನ್ನು ಆಯೋಜಿಸಿದ್ದೇವೆ ಎಂದು ತಿಳಿಸಿದರು.ಬೀದರ್‌ನಿಂದ ಚಾಮರಾಜನಗರದ ವರೆಗೆ ಪ್ರವಾಸ ಮಾಡಿ ಸಮಾಜದ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಮುಖಂಡರುಗಳು ಪಕ್ಷ ಪ್ರತಿಷ್ಠೆಯ ಧೂಳನ್ನು ಹೊರಗೆ ಹಾಕಿ ಸಮಾಜವನ್ನು ಸಂಘಟಿಸಲು ಕೈ ಜೋಡಿಸಿ ವಾಲ್ಮೀಕಿ ಮಹರ್ಷಿಯ ವೈಚಾರಿಕತೆ ಹಾಗೂ ಜಾಗೃತಿ ಜಾತ್ರೆಗೆ ಎಲ್ಲಾ ಸಮಾಜದ ಬಂಧುಗಳು ಆಗಮಿಸಿ ನಮ್ಮೆಲ್ಲರ ಕುಲ ಗುರು ಮಹರ್ಷಿ ವಾಲ್ಮೀಕಿಯವರ ಆಶೀರ್ವಾದ ಪಡೆಯಬೇಕು ಎಂದು ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹರ್ತಿಕೋಟೆ ವೀರೇಂದ್ರ ಸಿಂಹ, ರಾಜಾವೀರ ಮದಕರಿ ನಾಯಕ ಹುಟ್ಟಿದ ಊರು ಹೊಸದುರ್ಗದ ಜಾನಕಲ್, ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿದ ನೀವೇ ಪುಣ್ಯವಂತರು, ಮದಕರಿಗೆ ಎದುರು ನಿಂತು ಗೆದ್ದಿರುವ ರಾಜರಿಲ್ಲ. ಮೋಸದಿಂದ ಹೈದರಾಲಿ ಅವರನ್ನು ಬಂಧಿಸಿದ. ಮದಕರಿ ನಾಯಕನ ತೇಜಸ್ಸು ಧೈರ್ಯ ಪರಾಕ್ರಮ ಬೇರೆ ಯಾವ ದೊರೆಗಳಲ್ಲೂ ಕಾಣಲು ಸಾಧ್ಯವೇ ಇಲ್ಲ ಎಂದರು.ನಾಯಕ ಸಮಾಜ ಸಂಘಟಿಸಿ ವಾಲ್ಮೀಕಿ ಜಾತ್ರೆಯಲ್ಲಿ ಸಮಾಜದ ಬೇಡಿಕೆಯನ್ನು ಇಡಲಿದ್ದಾರೆ. 400 ದಿನ ಪಾದವಾತ್ರೆ ಮಾಡಿ ಚಳಿ ಮಳೆಗೆ ಜಗ್ಗದೇ 257 ದಿನ ಸತ್ಯಾಗ್ರಹದ ಮೂಲಕ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿಯನ್ನು ವಾಲ್ಮೀಕಿ ಸ್ವಾಮೀಜಿ ಕೊಡಿಸಿದ್ದಾರೆ. ರಾಜಕೀಯ ಶಿಕ್ಷಣ ಹಾಗೂ ಸಾಮಾಜಿಕವಾಗಿ ಪ್ರಸನ್ನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯ ಸಂಘಟನೆಯಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ನಾಯಕ ಸಮಾಜದ ಅಧ್ಯಕ್ಷ ರಂಗನಾಥ್, ತರೀಕೆರೆ ವಾಲ್ಮೀಕಿ ಸಮುದಾಯದ ಅಧ್ಯಕ್ಷ ಗೋವಿಂದಪ್ಪ ಸೇರಿದಂತೆ ವಾಲ್ಮೀಕಿ ಸಮುದಾಯದ ಮುಖಂಡರು ಬಂಧುಗಳು ಭಾಗವಹಿಸಿದ್ದರು.