ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಕಾಡಬಾಗಿಲು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡು, ಶಂಕುಸ್ಥಾಪನೆಯಾದರೂ, ಅರಣ್ಯ ಇಲಾಖೆಯ ಕಾನೂನು ತೊಡಕಿನಿಂದಾಗಿ ಕಾಮಗಾರಿಗೆ ಬ್ರೇಕ್ ಬಿದ್ದಿದೆ.
ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಕಾಡಬಾಗಿಲು ಸೇತುವೆ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಂಡು, ಶಂಕುಸ್ಥಾಪನೆಯಾದರೂ, ಅರಣ್ಯ ಇಲಾಖೆಯ ಕಾನೂನು ತೊಡಕಿನಿಂದಾಗಿ ಕಾಮಗಾರಿಗೆ ಬ್ರೇಕ್ ಬಿದ್ದಿದೆ.
ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುತ್ಲೂರು ಗ್ರಾಮದ ಅಭಿವೃದ್ಧಿಗಾಗಿ ಜನರು ಮೂರು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸ್ವಾತಂತ್ರ್ಯ ಲಭಿಸಿ 79 ವರ್ಷ ಕಳೆದರೂ ಇಂದಿಗೂ ಇಲ್ಲಿ ವಿದ್ಯುತ್, ಸರಿಯಾದ ರಸ್ತೆ ಇಲ್ಲದಿರುವುದು ವ್ಯವಸ್ಥೆಯ ಜಡ್ಡುತನಕ್ಕೆ, ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇಲ್ಲಿ ಆದಿವಾಸಿ ಮಲೆಕುಡಿಯ ಸಮುದಾಯದ 45 ಕ್ಕೂ ಹೆಚ್ಚು ಕುಟುಂಬಗಳು ಎರಡು ಶತಮಾನಗಳಿಂದ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದೆ. ಆದರೆ ಈಗಲೂ ಬೆಳಕಿಗಾಗಿ ಚಿಮಿಣಿ ದೀಪ, ಸಂಪರ್ಕಕ್ಕೆ ಪಕ್ಕಾ ಮಣ್ಣಿನ ರಸ್ತೆಯನ್ನು ಅವಲಂಬಿಸಬೇಕಾದ ಸ್ಥಿತಿಯಿದೆ. ಗಂಗಾಧರ ಗೌಡ ಶಾಸಕರಾಗಿದ್ದ 80ರ ದಶಕದಲ್ಲಿ ಕಾಡಬಾಗಿಲು ಎಂಬಲ್ಲಿ ಸೇತುವೆಯೊಂದನ್ನು ನಿರ್ಮಾಣ ಮಾಡಲಾಗಿತ್ತು. ಆದರೆ ಸೇತುವೆ 40 ವರ್ಷಗಳ ನಂತರ ಸೇತುವೆ ಸೇತುವೆ ಏಕಾಏಕಿ ಮುರಿದು ಬಿದ್ದು ಸಂಪರ್ಕ ಶಾಶ್ವತವಾಗಿ ಕಸಿದುಕೊಂಡಿತು. 4 ವರ್ಷದ ನಂತರ: ಕಾಡಿನ ಮಕ್ಕಳ ಸಂಪರ್ಕ ಕೊಂಡಿಯಾಗಿದ್ದ ಏಕೈಕ ಸೇತುವೆ ನಿರ್ಮಾಣಕ್ಕಾಗಿ ಜನರು ಮತ್ತೆ ಬೀದಿಗಿಳಿದು, ನಿರಂತರ ಪ್ರಯತ್ನದ ಫಲವಾಗಿ ರಾಜ್ಯ ಸರ್ಕಾರ ಸೇತುವೆ ಸೇರಿದಂತೆ ರಸ್ತೆ ಅಭಿವೃದ್ಧಿಗಾಗಿ 1.90 ಲಕ್ಷಕ್ಕೆ ಆರ್ಥಿಕ ಅನುಮೋದನೆ ನೀಡಿತು. ಮೊದಲ ಹಂತವಾಗಿ ಸೇತುವೆ ನಿರ್ಮಾಣಕ್ಕಾಗಿ 50 ಲಕ್ಷ ರೂಪಾಯಿ ಬಿಡುಗಡೆ ಮಾಡಿತು. ಇದಾದನಂತರ ಶಾಸಕ ಹರೀಶ್ ಪೂಂಜಾರವರು ರಸ್ತೆ, ಸೇತುವೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಆದರೆ 1.90 ಕೋಟಿ ಅನುದಾನದಲ್ಲಿ ಪ್ರಥಮ ಹಂತದಲ್ಲಿ ಬಿಡುಗಡೆಗೊಂಡಿದ್ದು ಮಾತ್ರ ಕೇವಲ 50 ಲಕ್ಷ ರೂಪಾಯಿ ಮಾತ್ರ ಎಂಬುದು ಇಲಾಖೆಗಳ ಮಾಹಿತಿ.ಶಂಕುಸ್ಥಾಪನೆ ನಂತರ ಕಾಮಗಾರಿಗೆ ಬ್ರೇಕ್: ಮಾರ್ಚ್ 7 ರಂದು ಇಲ್ಲಿ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲಾಗಿತ್ತು. ಆದರೆ ಕಾಡಬಾಗಿಲು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿದೆ. ಇಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೆ ಅರಣ್ಯ ಸಂರಕ್ಷಣಾ ಕಾಯ್ದೆಯಡಿ ವನ್ಯಜೀವಿ ಮಂಡಳಿಯ ಅನುಮತಿ ಪಡೆದುಕೊಳ್ಳಬೇಕು. ಇದಾದ ಬಳಿಕ ಅರಣ್ಯ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಅನುಮತಿ ಪಡೆಯಬೇಕು ಕಾಮಗಾರಿ ನಡೆಯಬೇಕಾಗಿದೆ. ಇಲ್ಲಿ ಅನುಮತಿ ಪಡೆಯದ ಕಾರಣ ಕಾಮಗಾರಿ ನಡೆಸಲು ಅವಕಾಶವಿಲ್ಲ ಎಂದು ವನ್ಯಜೀವಿ ಅರಣ್ಯ ಇಲಾಖೆ ಹೇಳಿದೆ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಉಸ್ತುವಾರಿ ವಹಿಸಿದ್ದ ಕರ್ನಾಟಕ ಗ್ರಾಮೀಣಾಭಿವೃದ್ಧಿ ಇಂಜಿನಿಯರಿಂಗ್ ವಿಭಾಗಕ್ಕೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಯಾವುದೇ ಕಾನೂನಿನ ಪರಿಜ್ಞಾನ ಇಲ್ಲದಂತೆ ಮೌನವಾಗಿದೆ. ಅಲ್ಲದೆ ದಾಖಲೆಗಳನ್ನು ಕ್ರೋಡೀಕರಿಸಿ ಸೇತುವೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಹಲವು ವರ್ಷಗಳ ಸೇತುವೆ ನಿರ್ಮಾಣದ ಕನಸು ನನಸಾಗುವುದು ಅನುಮಾನವಾಗಿದೆ. ಸರ್ಕಾರ, ಇಲಾಖೆಗಳ ನಡುವಿನ ಗೊಂದಲಗಳಿಂದ ಆದಿವಾಸಿಗಳು ಹೈರಾಣಾಗಿರುವುದು ಮಾತ್ರ ದುರಂತ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.