ಕನ್ನಡಪ್ರಭ ವಾರ್ತೆ ಅಥಣಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಅವರ ವಿಚಾರಧಾರೆಗಳನ್ನು ಮತ್ತು ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಅನುಸರಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಅಥಣಿ

ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಅವರ ವಿಚಾರಧಾರೆಗಳನ್ನು ಮತ್ತು ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಅನುಸರಿಸುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಶಾಸಕ ಲಕ್ಷ್ಮಣ ಸವದಿ ಕರೆ ನೀಡಿದರು.ತಾಲೂಕಾಡಳಿತ, ತಾಲೂಕ ಪಂಚಾಯತಿ, ಅಥಣಿ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಡಾ.ಬಿ.ಆರ್.ಅಂಬೇಡ್ಕರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಾತ್ಮರ ಜಯಂತಿಗಳನ್ನು ಆಚರಿಸುವ ಉದ್ದೇಶವನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ದೇಶದ ಸ್ವಾತಂತ್ರ್ಯ ಹಾಗೂ ಸುಭದ್ರತೆಗಾಗಿ ಶ್ರಮಿಸಿದ ಅನೇಕ ಮಹಾತ್ಮರನ್ನು ಇತ್ತೀಚಿನ ದಿನಗಳಲ್ಲಿ ಆಯಾ ಸಮುದಾಯಕ್ಕೆ ಸೀಮಿತಗೊಳಿಸಿ ಜಯಂತಿ ಆಚರಿಸಲಾಗುತ್ತಿದೆ. ಜಾತ್ಯಾತೀತವಾಗಿ ಸಮಾಜ ಸುಧಾರಣೆಗೆ ಮತ್ತು ದೇಶದ ಪ್ರಗತಿಗಾಗಿ ಶ್ರಮಿಸಿದ ನಾಯಕರ ಜಯಂತಿಗಳನ್ನು ಎಲ್ಲ ಸಮುದಾಯದವರು ಆಚರಿಸಬೇಕು ಎಂದರು.

12ನೇ ಶತಮಾನದಲ್ಲಿ ಬಸವಣ್ಣನವರು ಅನೇಕ ಸಮುದಾಯಗಳನ್ನು ಒಗ್ಗೂಡಿಸಿ ಅನುಭವ ಮಂಟಪ ಸ್ಥಾಪನೆ ಮಾಡಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ್ದರು. ಮುಂದೆ ಅಂಬೇಡ್ಕರವರ ಜೀವನದಲ್ಲಿಯೂ ಬಸವಣ್ಣನವರ ವಿಚಾರಧಾರೆಗಳು ಪ್ರಭಾವ ಬೀರಿದವು. ಅವರ ಚಿಂತನೆಗಳನ್ನು, ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಪಾಲಿಸಿದಾಗ ಮಾತ್ರ ಈ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ಅತಿಥಿ ಉಪನ್ಯಾಸಕ ಸುಭಾಷ ನಾಟಿಕಾರ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ನಾವು ಯಾವ ರೀತಿ ಆಚರಿಸುತ್ತಿದ್ದೇವೆ. ಭಾರತ ರತ್ನ ಡಾ.ಅಂಬೇಡ್ಕರ್ ಅವರ ಜಯಂತಿಯನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತೇವೆ. ಡಿಜೆ ಸೌಂಡ್ ಹಚ್ಚಿ ಕುಣಿಯುವುದು, ಫೋಟೋಗಳನ್ನು ಪೂಜೆ ಮಾಡಿ ದೀಪ ಬೆಳಗಿದರೆ ಸಾಲದು, ಅವರ ತತ್ವಗಳನ್ನು ಅನುಸರಿಸಿ ಸಮಾಜ ಕಟ್ಟುವವರು ಅವರ ಅನುಯಾಯಿಗಳಾಗುತ್ತಾರೆ. ಅಂಬೇಡ್ಕರ್ ಅವರೇ ಹೇಳಿದಂತೆ ಅವರಿಂದ ಅಪೂರ್ಣವಾಗಿರುವ ಕಾರ್ಯಗಳನ್ನು ಪೂರ್ಣಗೊಳಿಸೋಣ, ಸಂವಿಧಾನವನ್ನು ಮತ್ತು ಸಂವಿಧಾನದ ಆಶಯಗಳೆಲ್ಲ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದರು.

ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕಂಚಿ, ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಸಮಾಜ ಕಲ್ಯಾಣ ಮತ್ತು ಮುರಾರ್ಜಿ ವಸತಿ ಶಾಲೆಯ ದಲಿತ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್, ತಹಸಿಲ್ದಾರ್ ಸಿದರಾಯ ಬೋಸಗಿ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಸಮಾಜ ಕಲ್ಯಾಣಾಧಿಕಾರಿ ಪರುಶುರಾಮ ಪತ್ತಾರ ಸ್ವಾಗತಿಸಿದರು. ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಪ್ರಾಸ್ತಾವಿಕ ಮಾತನಾಡಿದರು. ಲಕ್ಷ್ಮಣ ಜಯಗೋಣಿ ವಂದಿಸಿದರು. ----------

ಕೋಟ್‌ಬೇಸಿಗೆಯ ಬಿಸಿಲಿನ ತಾಪ ಅಧಿಕವಾಗುತ್ತಿದ್ದು, ಅನೇಕ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಸಮಯವನ್ನು ಬದಲಿಸಲಾಗುತ್ತಿದೆ. ನಮ್ಮ ತಾಲೂಕಿನಲ್ಲಿ ಕೂಡ 40 ಡಿಗ್ರಿ ತಾಪಮಾನ ದಾಖಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ತಾಲೂಕಾಡಳಿತದ ಅಧಿಕಾರಿಗಳು ಸಾರ್ವಜನಿಕ ಕಾರ್ಯಕ್ರಮಗಳನ್ನು ಆದಷ್ಟು 12 ಗಂಟೆಯೊಳಗೆ ಮುಗಿಸುವ ಪ್ರಯತ್ನ ಮಾಡಬೇಕು.

- ಲಕ್ಷ್ಮಣ ಸವದಿ, ಶಾಸಕರು, ಅಥಣಿ