ಕನ್ನಡಪ್ರಭ ವಾರ್ತೆ ಅಥಣಿ ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃದ್ಧಿ ಜೊತೆಗೆ ನಿರಂತರ ವಿದ್ಯುತ್ ಶಕ್ತಿ ನೀಡುವ ಸಂಕಲ್ಪ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಹಳೆಯ ತಂತಿ ಮತ್ತು ಕಂಬಗಳನ್ನು ತೆರವುಗೊಳಿಸಿ ವಿನೂತನ ಮಾದರಿಯ ಕವರ್ಡ್ ಕೇಬಲ್ ಕಂಡಕ್ಟರ್ ಅಳವಡಿಸಲಾಗುವದು. ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಸ್ವಚ್ಛತೆ ಹಾಗೂ ಅಭಿವೃದ್ಧಿ ಜೊತೆಗೆ ನಿರಂತರ ವಿದ್ಯುತ್ ಶಕ್ತಿ ನೀಡುವ ಸಂಕಲ್ಪ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಹಳೆಯ ತಂತಿ ಮತ್ತು ಕಂಬಗಳನ್ನು ತೆರವುಗೊಳಿಸಿ ವಿನೂತನ ಮಾದರಿಯ ಕವರ್ಡ್ ಕೇಬಲ್ ಕಂಡಕ್ಟರ್ ಅಳವಡಿಸಲಾಗುವದು. ಇದರಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಹಕಾರಿಯಾಗುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.ಪಟ್ಟಣದ ಸಿದ್ದೇಶ್ವರ ರಸ್ತೆಯಲ್ಲಿ ಹೆಸ್ಕಾಂನ 200 ಕಿ.ಮೀ ಕವರ್ಡ್ ಕೇಬಲ್ ಕಂಡಕ್ಟರ್ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಅಥಣಿ ಪುರಸಭೆಯನ್ನು ಮೇಲ್ದರ್ಜೆಗೇರಿಸಿ ನಗರಸಭೆಯನ್ನಾಗಿ ಪರಿವರ್ತಿಸಲಾಗಿದೆ. ಇಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು. ಪುರಸಭೆಯ ಆಡಳಿತದ ಸಹಕಾರದೊಂದಿಗೆ ಸರ್ಕಾರದಿಂದ ಇನ್ನಷ್ಟು ಅಭಿವೃದ್ಧಿ ಅನುದಾನವನ್ನ ತರುವ ಮೂಲಕ ಅಥಣಿ ಪಟ್ಟಣವನ್ನು ಸುಂದರ ಹಾಗೂ ಅಭಿವೃದ್ಧಿ ನಗರವನ್ನಾಗಿ ಪರಿವರ್ತಿಸುವ ಕನಸು ಹೊಂದಿದ್ದೇನೆ ಎಂದು ಹೇಳಿದರು.
ಪಟ್ಟಣದಲ್ಲಿ ಅಳವಡಿಸಲಾಗಿರುವ ವಿದ್ಯುತ್ ತಂತಿ ಮತ್ತು ಕಂಬಗಳು ತೀರಾ ಹಳೆಯದಾಗಿದ್ದು, ₹ 4.33 ಕೋಟಿ ವೆಚ್ಚದಲ್ಲಿ ಕವರ್ಡ್ ಕೇಬಲ್ ಅಳವಡಿಸುವ ಯೋಜನೆ ರೂಪಿಸಲಾಗಿದೆ. ಹೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಈ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದ ಕೆಲಸ ಕೈಗೊಳ್ಳಬೇಕು. ಈ ಯೋಜನೆಯಿಂದ ಮಳೆಗಾಲದಲ್ಲಿ ಆಗುವ ವಿದ್ಯುತ್ ವ್ಯತ್ಯಯ, ಶಾರ್ಟ್ ಸರ್ಕ್ಯೂಟ್ ಇನ್ನಿತರ ವಿದ್ಯುತ್ ಉಪಕರಣಗಳನ್ನು ನಿಯಂತ್ರಿ ಸಲು ಸಹಕಾರಿಯಾಗುತ್ತದೆ. ಕಾಮಗಾರಿಯನ್ನು ಕೈಗೊಳ್ಳುವಾಗ ವಿದ್ಯುತ್ ವ್ಯತ್ಯಯ ಆಗುವ ಸಂಭವ ಇರುತ್ತದೆ. ಅಥಣಿಯ ನಾಗರಿಕರು ಹಾಗೂ ವ್ಯಾಪಾರಸ್ಥರು ಸಹಕರಿಸಬೇಕೆಂದು ಮನವಿ ಮಾಡಿದರು.ಪುರಸಭೆ ಅಧ್ಯಕ್ಷ ಶಿವಲೀಲಾ ಬುಟಾಳಿ ಮಾತನಾಡಿ, ಪುರಸಭೆಯನ್ನು ನಗರಸಭೆಯನ್ನಾಗಿ ಪರಿವರ್ತಿಸಿ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶಾಸಕರು ವಿಶೇಷ ಅನುದಾನ ಒದಗಿಸಿದ್ದಾರೆ. ಹಳೆಯ ವಿದ್ಯುತ್ ತಂತಿ ಮತ್ತು ಕಂಬಗಳನ್ನು ಬದಲಿಸಿ ಕೇಬಲ್ ಕರೆಂಟ್ ಯೋಜನೆ ತಂದಿರುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
ಈ ವೇಳೆ ಪುರಸಭೆ ಉಪಾದ್ಯಕ್ಷ ಭುವನೇಶ್ವರ ಯಕ್ಕಂಚಿ. ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಪರ್, ಸದಸ್ಯರಾದ ರಾಜಶೇಖರ ಗುಡ್ಡೋಡಗಿ, ಸೈಯದ್ ಅಮಿನ್ ಗದ್ಯಾಳ, ಪ್ರಮೋದ ಬಿಳ್ಳೂರ, ಮಲ್ಲಿಕಾರ್ಜುನ ಬುಟಾಳಿ, ಮುಖಂಡರಾದ ರಾಜು ಬುಲಬುಲೆ, ಬಾಬು ಖೇಮಲಾಪೂರ, ಶಿವು ನಾಯಿಕ, ಆನಂದ ಟೋನಪೆ, ರಾಜು ಆಲಬಾಳ, ಡಾ.ಮಲ್ಲಿಕಾರ್ಜುನ ಹಂಜಿ, ವಿನಾಯಕ ದೇಸಾಯಿ, ರವೀಂದ್ರ ದೇಸಾಯಿ, ಗುತ್ತಿಗೆದಾರ ಅಮೀರ ಖತೀಲ, ಶಿವಲಿಂಗ ಕೊಕಳೆ, ದ್ವಾರಕೀಶ ಜಾಲಿಹಾಳ, ಸಂಗಮೇಶ ನಾರಗೊಂಡ, ಹೆಸ್ಕಾಂ ಅಭಿಯಂತರ ಜಿ.ವಿ.ಸಂಪನ್ನವರ, ಶಬ್ಬಿರ್ ಪಾರ್ಥನಹಳ್ಳಿ, ಮಹಂತೇಶ ಅಂಬೋಳೆ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸೇರಿ ಹೆಸ್ಕಾಂ ಹಾಗೂ ಕೆಪಿಟಿಸಿಎಲ್ ಸಿಬ್ಬಂದಿ ಉಪಸ್ಥಿತರಿದ್ದರು. -------ಕೋಟ್‌ಗಂಗಾ ಕಲ್ಯಾಣ ಯೋಜನೆಯಡಿ 164 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ, 132 ಫಲಾನುಭವಿಗಳಿಗೆ ₹4.33 ಕೋಟಿ ವೆಚ್ಚದಲ್ಲಿ 25 ಕೆವಿಎ ಸಾಮರ್ಥ್ಯದ ಪರಿವರ್ತಕ ಅಳವಡಿಸಲಾಗಿದೆ. ಶೀಘ್ರ ಸಂಪರ್ಕ ಯೋಜನೆಯಡಿ 382 ಫಲಾನುಭವಿಗಳಿಗೆ ₹ 1.60 ಕೋಟಿ ವೆಚ್ಚದಲ್ಲಿ ಪರಿವರ್ತಕ ಅಳವಡಿಸಲಾಗಿದೆ. ಅಕ್ರಮ ಸಕ್ರಮ ಯೋಜನೆಯಡಿ ₹ 31 ಕೋಟಿ ವೆಚ್ಚದಲ್ಲಿ ರೈತರ ಜಮೀನುಗಳಲ್ಲಿ 1200 ಟಿಸಿ ಅಳವಡಿಸಲಾಗಿದೆ. ನಿರಂತರ ಜ್ಯೋತಿ ಯೋಜನೆಯಡಿ 23 ವಸತಿ ಪ್ರದೇಶಗಳಲ್ಲಿ ₹ 1.40 ಕೋಟಿ ವೆಚ್ಚದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ರೈತರಿಗೆ ಮತ್ತು ಸಾರ್ವಜನಿಕರಿಗೆ ಉತ್ತಮ ವಿದ್ಯುತ್ ಪೂರೈಸಲು ಇನ್ನೂ 85 ಹೆಚ್ಚುವರಿ ಟಿಸಿಗಳನ್ನು ಅಳವಡಿಸಲಾಗುವುದು.
ಲಕ್ಷ್ಮಣ ಸವದಿ, ಶಾಸಕರು ಅಥಣಿ.