ಕುದ್ರಿಕೊಟಗಿ ಸಸ್ಯ ಕ್ಷೇತ್ರದಲ್ಲಿ ಕಂಗೊಳಿಸುತ್ತಿದೆ ಹಸಿರು

KannadaprabhaNewsNetwork |  
Published : Jun 05, 2025, 12:46 AM IST
4ಕೆಕೆಆರ್2:ಯಲಬುರ್ಗಾದ ಕುದ್ರಿಕೊಟಗಿ ಸಸ್ಯಕ್ಷೇತ್ರದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆ ಬೆಳೆಸಲಾದ ಸಸಿಗಳು ನಳನಳಿಸುತ್ತಿವೆ. | Kannada Prabha

ಸಾರಾಂಶ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಂತೆ ಹಸಿರೀಕರಣಕ್ಕಾಗಿ ಈ ಬಾರಿ ಅರಣ್ಯ ಇಲಾಖೆಯು "ತಾಯಿ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಿ " ಎನ್ನುವ ಪರಿಕಲ್ಪನೆಯೊಂದಿಗೆ ಪರಿಸರ ದಿನಾಚರಣೆಗೆ ಮುಂದಾಗಿರುವುದು ವಿಶೇಷ.

ಪಾಲಾಕ್ಷ ತಿಪ್ಪಳ್ಳಿ

ಯಲಬುರ್ಗಾ:

ತಾಲೂಕಿನ ಕುದ್ರಿಕೊಟಗಿ ಸಸ್ಯ ಕ್ಷೇತ್ರದಲ್ಲಿ ಸಾಮಾಜಿಕ ವಲಯ ಅರಣ್ಯ ಇಲಾಖೆ ಪ್ರಸಕ್ತ ವರ್ಷ ೩೧,೨೨೩ಕ್ಕೂ ಅಧಿಕ ವಿವಿಧ ಜಾತಿಯ ಸಸಿ ಬೆಳೆಸಿ, ಪೋಷಿಸಿದೆ. ಭೂಮಿಯಲ್ಲಿ ಬೇರು ಚಾಚಿ ಮೈದುಂಬಿ ಬೆಳೆಯಲು ಸಸಿಗಳು ಸಿದ್ಧವಾಗಿವೆ. ವಿಶ್ವ ಪರಿಸರ ದಿನಾಚರಣೆ ನಿಮಿತ್ತ ರಸ್ತೆ ಬದಿ, ಸರ್ಕಾರಿ ಜಾಗೆ, ಶಾಲಾ-ಕಾಲೇಜು, ಸಂಘ, ಸಂಸ್ಥೆ ಹಾಗೂ ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬಂತೆ ಹಸಿರೀಕರಣಕ್ಕಾಗಿ ಈ ಬಾರಿ ಅರಣ್ಯ ಇಲಾಖೆಯು "ತಾಯಿ ಹೆಸರಿನಲ್ಲಿ ಒಂದು ಗಿಡ ನೆಟ್ಟು ಪೋಷಿಸಿ " ಎನ್ನುವ ಪರಿಕಲ್ಪನೆಯೊಂದಿಗೆ ಪರಿಸರ ದಿನಾಚರಣೆಗೆ ಮುಂದಾಗಿರುವುದು ವಿಶೇಷ. ಸಸ್ಯ ಕ್ಷೇತ್ರದಲ್ಲಿ ೨೦೨೫-೨೬ನೇ ಸಾಲಿನಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ನರೇಗಾ ಮತ್ತು ಆರ್‌ಎಸ್‌ಪಿಡಿ ಯೋಜನೆಯಡಿ ನಾನಾ ಜಾತಿಯ ೩೧,೨೨೩ ಸಸಿಗಳನ್ನು ವಿವಿಧ ಸೈಜ್‌ನ ಬ್ಯಾಗ್‌ಗಳಲ್ಲಿ ಬೆಳೆಸಲಾಗಿದೆ.

ರಸ್ತೆಬದಿ ನೆಡುತೋಪು:

ತಾಲೂಕಿನ ನಾನಾ ಗ್ರಾಮಗಳ ರಸ್ತೆ ಬದಿ ನೆಡಲಾಗುವ ಬೇವು, ಹೊಂಗೆ, ಬಸವನಪಾದ, ಅತ್ತಿ, ಅರಳಿ ಹಾಗೂ ಹೊಳೆಮತ್ತಿ ಸೇರಿ ಇತರೆ ಜಾತಿಯ ಸಸಿಗಳನ್ನು ನೆಡಲಾಗುತ್ತದೆ. ಶಾಲಾ ಕಾಲೇಜು, ಸಂಘ-ಸಂಸ್ಥೆ ಜಾಗೆಯಲ್ಲಿ ನೆಡಲು ಬಸವನಪಾದ, ಬಂಗಾಳಿ, ಟಬೂಬಿಯಾ ಸೇರಿ ಇತರೆಡೆ ನೆಡುತೋಪುಗಳನ್ನು ಬೆಳೆಸಲು ಅರಣ್ಯ ಇಲಾಖೆ ಮುಂದಾಗಿದೆ. ರಿಯಾಯಿತಿ ದರದಲ್ಲಿ ಸಸಿಗಳ ಮಾರಾಟ ಮಾಡಲಾಗುತ್ತಿದ್ದು, ೬×೯ ಅಳತೆಯ ಬ್ಯಾಗ್‌ನಲ್ಲಿರುವ ಸಸಿ ಒಂದಕ್ಕೆ ₹ ೩, ೮×೧೨ ಅಳತೆಯ ಬ್ಯಾಗ್‌ನಲ್ಲಿರುವ ಸಸಿ ಒಂದಕ್ಕೆ ₹ ೬ ಇದೆ ನಿಗದಿಪಡಿಸಲಾಗಿದೆ.ಲಭ್ಯವಿರುವ ಸಸಿಗಳು

ಸಸ್ಯ ಕ್ಷೇತ್ರದಲ್ಲಿ ಕರಿಬೇವು, ನೇರಳೆ, ಶ್ರೀಗಂಧ, ಮಹಾಗನಿ, ಹುಣಸೆ, ಬೇವು, ಮಗ್ಗೆ ಸೇರಿ ಇನ್ನಿತರ ಜಾತಿಯ ಸಸಿಗಳು ಲಭ್ಯ ಇವೆ. ಈಗಾಗಲೇ ಸಸಿಗಳ ವಿತರಣೆ ಕಾರ್ಯ ನಡೆದಿದೆ. ರೈತರು, ಸಾರ್ವಜನಿಕರು ಸಸಿ ಪಡೆಯಲು ಅರ್ಜಿ ನಮೂನೆ (ಭಾವಚಿತ್ರ, ದೂರವಾಣಿ ಸಂಖ್ಯೆ) ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿ ದಾಖಲೆ ನೀಡಿ ಪಡೆಯಲು ಅರಣ್ಯ ಇಲಾಖೆ ತಿಳಿಸಿದೆ.ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಬೆಳೆಸುವ ಮೂಲಕ ಹಸಿರೀಕರಣಕ್ಕೆ ಆದ್ಯತೆ ನೀಡಬೇಕು. ಕುದ್ರಿಕೊಟಗಿ ಸಸ್ಯಕ್ಷೇತ್ರದಲ್ಲಿ ನಾನಾ ವಿಧದ ಒಟ್ಟು ೩೧,೨೨೩ ಸಸಿ ಬೆಳೆಸಲಾಗಿದೆ. ರಸ್ತೆ ಬದಿ, ಸರ್ಕಾರಿ ಜಾಗೆಯಲ್ಲಿ ನೆಡಲು ಸಿದ್ಧತೆ ಕೈಗೊಳ್ಳಳಾಗಿದೆ. ಸಾರ್ವಜನಿಕರು, ರೈತರಿಗೆ ರಿಯಾಯಿತಿ ದರದಲ್ಲಿ ಸಸಿಗಳ ವಿತರಣೆ ಕಾರ್ಯ ನಡೆದಿದೆ ಎಂದು ಯಲಬುರ್ಗಾ ಸಾಮಾಜಿಕ ವಲಯ ಅರಣ್ಯಾಧಿಕಾರಿ ಬಸವರಾಜ ಗೊಗೇರಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ
‘ಜಿ ರಾಮ್‌ ಜಿ’ ವಿರುದ್ಧ ಸಮರಕ್ಕೆ ನಾಳೆ ಕೈ ವಿಶೇಷ ಸಂಪುಟ ಸಭೆ