ಕನ್ನಡಪ್ರಭ ವಾರ್ತೆ ಮಂಗಳೂರುಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವಕ್ಕೆ ಪೂರ್ವಭಾವಿಯಾಗಿ ನವದಿನಗಳ ಪರ್ಯಂತ ಆರಾಧನೆಗೊಳ್ಳುವ ಶ್ರೀ ಶಾರದೆ ಮತ್ತು ನವದುರ್ಗೆಯರ ಪ್ರತಿಷ್ಠಾಪನಾ ವಿಧಿ ವಿಧಾನಗಳು ಸೋಮವಾರ ಸಡಗರ ಸಂಭ್ರಮದಿಂದ ನೆರವೇರಿತು.
ಮಹಾಗಣಪತಿ, ಶಾರದೆ, ಆದಿಶಕ್ತಿ, ಸ್ಕಂದ ಮಾತೆ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿಧಾತ್ರಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ ದೇವಿ ಮೂರ್ತಿಗಳ ಪ್ರತಿಷ್ಠಾಪನಾ ಪೂಜೆ ನಡೆಯಿತು.ಬೆಳಗ್ಗೆ ದೇವಾಲಯದಲ್ಲಿ ಗುರುಪ್ರಾರ್ಥನೆಯೊಂದಿಗೆ ಪುಣ್ಯಾಹಹೋಮ, ನವಕಲಶಾಭಿಷೇಕ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಬ್ಯಾಂಡ್, ಚೆಂಡೆ, ಹುಲಿ ವೇಷ, ಸ್ಯಾಕ್ಸೋಫೋನ್ ವಾದನದೊಂದಿಗೆ ಶಾರದೆ ಮೂರ್ತಿಯನ್ನು ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿ ದರ್ಬಾರು ಮಂಟಪಕ್ಕೆ ತರಲಾಯಿತು. ಈ ಅಪೂರ್ವ ಕ್ಷಣಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾದರು.ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಸಮ್ಮುಖದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ ಅಧ್ಯಕ್ಷ ಜಿತಕಾಮಾನಂದಜಿ ಮಹಾರಾಜ್, ಮಂಗಳೂರು ಬ್ರಹ್ಮಕುಮಾರೀಸ್ ಸಂಸ್ಥೆಯ ಮುಖ್ಯಸ್ಥೆ ಬಹ್ಮಕುಮಾರಿ ವಿಶ್ವೇಶ್ವರಿಜೀ ನವರಾತ್ರಿಯ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿದರು.ಬಳಿಕ ಸುದ್ದಿಗಾರರೊಂದಿಗೆಮಾತನಾಡಿದ ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಂಗಳೂರು ದಸರಾ ನಮ್ಮ ನಾಡಿನ ಹೆಮ್ಮೆಯ ಉತ್ಸವವಾಗಿ ರೂಪುಗೊಂಡಿದೆ. ಜಿಲ್ಲೆಯಾದ್ಯಂತ ಎಲ್ಲೆಲ್ಲೂ ಸಡಗರದ ವಾತಾವರಣ ಸೃಷ್ಟಿಸಿದೆ. ಇದಕ್ಕೆ ಪೂರಕವಾಗಿ ಜಿಎಸ್‌ಟಿ ಇಳಿಕೆ ನಿರ್ಧಾರದ ಅನುಷ್ಠಾನ ಆಗಿದ್ದು ದಸರಾ ಸಂಭ್ರಮವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜೈರಾಜ್ ಎಚ್.ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್.ಪೂಜಾರಿ, ಕ್ಷೇತ್ರಾಡಳಿತ ಮಂಡಳಿ ಸದಸ್ಯರಾದ ಎಚ್.ಎಸ್. ಸಾಯಿರಾಂ, ಸಂತೋಷ್ ಕುಮಾರ್ ಜೆ., ಜಗದೀಪ್ ಡಿ.ಸುವರ್ಣ, ಕೃತಿನ್ ಅಮೀನ್, ಕಿಶೋರ್ ದಂಡೆಕೇರಿ, ಪ್ರಮುಖರಾದ ಮಾಲತಿ ಜನಾರ್ದನ ಪೂಜಾರಿ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಕ್ಷೇತ್ರ ಅಭಿವೃದ್ದಿ ಸಮಿತಿ ಅಧ್ಯಕ್ಷ ದೇವೇಂದ್ರ ಪೂಜಾರಿ, ಉಪಾಧ್ಯಕ್ಷರಾದ ಡಾ,ಬಿ.ಜಿ.ಸುವರ್ಣ, ಸದಸ್ಯರಾದ ಸೂರ್ಯಕಾಂತ್ ಜೆ. ಸುವರ್ಣ, ಹರಿಕೃಷ್ಣ ಬಂಟ್ವಾಳ್, ರವಿಶಂಕರ ಮಿಜಾರ್, ಶೇಖರ ಪೂಜಾರಿ, ವೇದಕುಮಾರ್ ಮತ್ತಿತರರು ಇದ್ದರು.-------------25ರಂದು ಮಂಗಳೂರು ದಸರಾ ಉದ್ಘಾಟನೆ
ಮಂಗಳೂರು ದಸರಾ ಮಹೋತ್ಸವದ ಉದ್ಘಾಟನೆ ಸೆ.25ರಂದು ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉಪಸ್ಥಿತಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಬಿ. ಜನಾರ್ದನ ಪೂಜಾರಿ ಅಧ್ಯಕ್ಷತೆಯಲ್ಲಿ ನೆರವೇರಲಿದೆ.ದಸರಾ ಪ್ರಯುಕ್ತ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ನಡೆಯಲಿವೆ. 3ನೇ ವರ್ಷದ ದಸರಾ ಮ್ಯಾರಥಾನ್ 28ರಂದು ಬೆಳಗ್ಗೆ 4ರಿಂದ ನಡೆಯಲಿದೆ. ಸೆ.24ರಂದು ಮಕ್ಕಳಿಗಾಗಿ ಮೂರು ವಿಭಾಗದಲ್ಲಿ ಮುದ್ದು ಶಾರದೆ ಮತ್ತು ನವದುರ್ಗೆಯರ ಸ್ಪರ್ಧೆ, ಸೆ.26ರಂದು ಮಿಸ್ಟರ್ ಮಂಗಳೂರು ದಸರಾ ಕ್ಲಾಸಿಕ್ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ. ಸೆ.28ರಂದು ಮಕ್ಕಳ ದಸರಾ ಪರಿಕಲ್ಪನೆಯಡಿ ಮಕ್ಕಳಿಗೋಸ್ಕರ ಕಿನ್ನಿಪಿಲಿ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಂಗೀತ ಸ್ಪರ್ಧೆ ನಡೆಯಲಿದೆ. ದಸರಾ ಸಂದರ್ಭ ಪ್ರತಿದಿನ ಒಬ್ಬರಂತೆ 9 ಸಾಧಕಿಯರಿಗೆ ಅಸಾಮಾನ್ಯ ಸ್ತ್ರೀ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದರು.
--------------ತುಳುನಾಡಿನ ಸಂಸ್ಕೃತಿ ಅನಾವರಣಮಂಗಳೂರು ದಸರಾ ಮಹೋತ್ಸವ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ದರ್ಬಾರು ಮಂಟಪಕ್ಕೆ ಈ ಬಾರಿ ತುಳುನಾಡ ಸಂಸ್ಕೃತಿಯ ನೋಟ ನೀಡಲಾಗಿದೆ. ಮೂಲ್ಕಿಯ ಸುವರ್ಣ ಆರ್ಟ್ಸ್ ನಿರ್ದೇಶಕ ಚಂದ್ರಶೇಖರ ಸುವರ್ಣ ನೇತೃತ್ವದ ತಂಡ 32 ವರ್ಷಗಳಿಂದ ದರ್ಬಾರು ಮಂಟಪವನ್ನು ನಿರ್ಮಿಸುತ್ತಿದೆ. ಈ ಬಾರಿ ತಿರುಪತಿ ದೇವಸ್ಥಾನದ ಪ್ರವೇಶದ ಒಳಭಾಗದಲ್ಲಿ ಇರುವ ಜಯ ವಿಜಯ ಮಾದರಿ ಅಳವಡಿಸಲಾಗಿದ್ದು, ದರ್ಬಾರು ಸೀಲಿಂಗ್‌ನಲ್ಲಿ ತುಳುನಾಡಿನ ದೇವಸ್ಥಾನದ ಮುಚ್ಚಿಗೆ ವಿನ್ಯಾಸವಿದೆ.