ಕೃಷ್ಣ ಎನ್. ಲಮಾಣಿ
ಹೊಸಪೇಟೆ: ಮುಂಬೈನ ಕೇಂದ್ರೀಯ ಮೀನುಗಾರಿಕೆ ವಿಶ್ವವಿದ್ಯಾಲಯದಲ್ಲಿ ತನ್ನ ಪುತ್ರ ಪಿಎಚ್‌ಡಿ ಪದವಿ ಸ್ವೀಕಾರ ಮಾಡುತ್ತಿದ್ದರೆ, ಆ ತಾಯಿಯ ಕಣ್ಣಾಲೆಯಲ್ಲಿ ಆನಂದಬಾಷ್ಪ ಇಣುಕುತ್ತಿತ್ತು. ಓದು ಅರ್ಧಕ್ಕೆ ನಿಲ್ಲಿಸಲು ಹೊರಟಿದ್ದ ಮಗನಿಗೆ ಕೂಲಿ ಮಾಡಿ, ಉನ್ನತ ಶಿಕ್ಷಣ ಕೊಡಿಸಿದೆ ಎಂಬ ಸಂತೃಪ್ತ ಭಾವ ಅವರದಾಗಿತ್ತು.ಹೂವಿನಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ ತಾಂಡಾದ ಯುವಕ ಕುಮಾರ ರಾಠೋಡ್ ಮೀನುಗಾರಿಕೆ ವಿಷಯದಲ್ಲಿ ಪಿಎಚ್‌ಡಿ ಪದವಿ ಗಳಿಸಿದ್ದಾರೆ. ಕುಮಾರ ರಾಠೋಡ್ ಅಂತಿಮ ವರ್ಷದ ಮೀನುಗಾರಿಕೆ ಸ್ನಾತಕೋತ್ತರ ಪದವಿ ಓದುತ್ತಿದ್ದಾಗ ಮನೆಗೆ ಆಧಾರವಾಗಿದ್ದ ತಂದೆ ಧಾನ್ಯಾನಾಯ್ಕ ಮೃತಪಟ್ಟರು. ಆಗ ಓದು ಅರ್ಧಕ್ಕೆ ನಿಲ್ಲಿಸಿ ಮುಂಬೈನಿಂದ ತನ್ನ ತಾಂಡಾಕ್ಕೆ ಶಾಶ್ವತವಾಗಿ ಮರಳಲು ಕುಮಾರ ಆಲೋಚಿಸಿದ್ದರು. ಈ ವಿಷಯ ತನ್ನ ತಾಯಿ ಈರಿಬಾಯಿ ಬಳಿ ಹೇಳಿದಾಗ "ನನ್ನ ರಟ್ಟೆಯಲ್ಲಿ ಬಲ ಇರುವವರೆಗೆ ನಿನ್ನ ಓದು ನಿಲ್ಲಿಸಬೇಡ, ಕೂಲಿ ಮಾಡಿ ಓದಿಸುವೆ. ನೀನು ನಿನ್ನ ತಂದೆಯ ಆಸೆ ಪೂರೈಸು, ಮುಂದಿಟ್ಟ ಹೆಜ್ಜೆ ಹಿಂದಿಡಬೇಡ " ಎಂದು ಮಗನಿಗೆ ಧೈರ್ಯ ಹೇಳಿ ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಬಡತನವನ್ನು ದಿಟ್ಟವಾಗಿ ಎದುರಿಸಿ ಈರಿಬಾಯಿ ಮಗನಿಗೆ ಪಿಎಚ್‌ಡಿ ಪೂರ್ಣಗೊಳಿಸಲು ಬೆನ್ನೆಲುಬಾಗಿ ನಿಂತಿದ್ದಾರೆ. ಕುಮಾರ ಕೂಡ ತನಗೆ ದೊರೆತ ಪಿಎಚ್‌ಡಿ ತನ್ನ ತಾಯಿಯ ಸಾಧನೆ ಎಂಬುದನ್ನು ಹೇಳಲು ಮರೆಯುವುದಿಲ್ಲ.
ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಸಂಶೋಧನಾ ಕೇಂದ್ರದಲ್ಲಿ ಸಂಶೋಧನೆ ಕಾರ್ಯ ನಡೆಸಿ ಪಿಎಚ್‌ಡಿ ಪದವಿ ಗಳಿಸಿರುವುದು ವಿಶೇಷ. ಅವರಿಗೆ ಡಾ. ಮುರಳೀಧರ್ ಮಾರ್ಗದರ್ಶನ ನೀಡಿದ್ದರು.
ಆತನ ತಂದೆ ನಿಧನರಾದಾಗ ಮಗ ಓದು ಅರ್ಧಕ್ಕೆ ನಿಲ್ಲಿಸುವೆ ಎಂದು ಹೇಳಿದಾಗ ನನ್ನ ಕರುಳು ಚುರ್ ಎಂದಿತು. ಯಜಮಾನರ ಆಸೆಯಂತೆ ಮಗನಿಗೆ ಪಿಎಚ್‌ಡಿ ಮಾಡಿಸಲು ಪಣತೊಟ್ಟೆ. ಎಷ್ಟೇ ಕಷ್ಟ ಬಂದರೂ ಕೂಲಿ ಕೆಲಸ ಮಾಡಿಸಿ ಮಗನನ್ನು ಓದಿಸಿದೆ. ನಾನು ಮುಂಬೈ ಒಮ್ಮೆಯೂ ನೋಡಿಲ್ಲ. ಮಗ ಪಿಎಚ್‌ಡಿ ಪದವಿ ಪಡೆಯುವುದನ್ನು ಕಣ್ತುಂಬಿಕೊಳ್ಳಲು ಬಂದಿರುವೆ ಎನ್ನುತ್ತಾರೆ ಕುಮಾರ ರಾಠೋಡ್ ತಾಯಿ ಈರಿಬಾಯಿ.