ಲಕ್ಷ್ಮೇಶ್ವರ: ಸಮೀಪದ ಆದರಳ್ಳಿ ಗ್ರಾಮದ ಗವಿಮಠದ ಕುಮಾರ ಮಹಾರಾಜ ಸ್ವಾಮಿಗಳಿಗೆ ಜೀವ ಬೆದರಿಕೆ ಹಾಕಿದ್ದರಿಂದ ಮನನೊಂದ ಸ್ವಾಮಿಗಳು ಭಾನುವಾರ ಬೆಳಗ್ಗೆ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಭೋವಿ ಮತ್ತು ಲಂಬಾಣಿ ಸಮಾಜದ ಗುರು ಹಿರಿಯರ ನಡುವೆ ಮಾತುಕತೆ ನಡೆದು ಜೀವ ಬೆದರಿಕೆ ಹಾಕಿದವರಿಂದ ಕ್ಷಮಾಪಣೆ ಕೇಳಿಸುತ್ತೇವೆ ಎಂದು ಭರವಸೆ ನೀಡಿದ್ದು ಹಾಗೂ ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದರಿಂದ ಉಪವಾಸ ಸತ್ಯಾಗ್ರಹ ಕೈ ಬಿಟ್ಟು ಮಠಕ್ಕೆ ಮರಳಿದ ಘಟನೆ ಭಾನುವಾರ ಸಂಜೆ ನಡೆಯಿತು.
ಈ ವಿಷಯ ತಿಳಿದ ಲಂಬಾಣಿ ಸಮಾಜದ ಅಧ್ಯಕ್ಷ ರವಿಕಾಂತ ಅಂಗಡಿ, ಚಂದ್ರಕಾಂತ ಚವ್ಹಾಣ ಅವರು ಗ್ರಾಮಕ್ಕೆ ಆಗಮಿಸಿ ಸ್ವಾಮಿಗಳಿಗೆ ಜೀವ ಬೆದರಿಕೆ ಹಾಕಿರುವ ವ್ಯಕ್ತಿಗಳನ್ನು ಬಂಧಿಸಿ ವಿಚಾರಣೆ ನಡೆಸಬೇಕು ಹಾಗೂ ಗ್ರಾಮದಲ್ಲಿ ಎರಡು ಸಮಾಜದ ಹಿರಿಯರು, ಯುವಕರು ಪರಸ್ಪರ ಅನ್ಯೋನ್ಯತೆಯಿಂದ ಬಾಳುತ್ತಿದ್ದಾರೆ. ಮೊನ್ನೆ ನಡೆದ ಸಣ್ಣ ಪುಟ್ಟ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು, ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಂಡು ಗೂಂಡಾ ರೀತಿ ವರ್ತನೆ ಮಾಡುವುದು ಸರಿಯಲ್ಲ. ಮುಂದಿನ ದಿನಮಾನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಹಿರಿಯರು ನೋಡಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಭೋವಿ ಸಮಾಜದ ಜಿಲ್ಲಾಧ್ಯಕ್ಷ ರಾಘವೇಂದ್ರ ಧಾರವಾಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ವಾಮಿಜಿಗಳು ಮನಸ್ಸಿಗೆ ನೋವು ಉಂಟು ಮಾಡುವಂತೆ ಮಾತನಾಡಿರುವುದು ತಪ್ಪು. ಆದ್ದರಿಂದ ಅವರು ಪರವಾಗಿ ನಾನು ಸ್ವಾಮಿಗಳಲ್ಲಿ ಕ್ಷಮೆ ಕೇಳುತ್ತೇನೆ. ಸಣ್ಣ ಘಟನೆಯನ್ನು ದೊಡ್ಡದು ಮಾಡಬೇಡಿ. ನಮ್ಮ ಸಮಾಜದ ಹಿರಿಯರು ಯುವಕರೊಂದಿಗೆ ಚರ್ಚಿಸಿ ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುವಂತೆ ತಿಳಿ ಹೇಳುವ ಕಾರ್ಯ ಮಾಡುತ್ತೇನೆ ಎಂದು ಹೇಳಿದರು.ಇದರಿಂದ ಎರಡು ಸಮಾಜದ ಹಿರಿಯರು ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಅಲ್ಲದೆ ಸ್ವಾಮಿಗಳಿಗೆ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಕರೆ ತಂದು ಕ್ಷಮಾಪಣೆ ಕೇಳಿಸುವ ಕಾರ್ಯ ನಾವೆಲ್ಲ ಸಮಾಜದ ಹಿರಿಯರು 3-4 ದಿನಗಳಲ್ಲಿ ಮಾಡುತ್ತೇವೆ ಎಂದು ಹೇಳಿದರು.
ಈ ವೇಳೆ ಕುಮಾರ ಮಹಾರಾಜ ಸ್ವಾಮಿಗಳು ಮಾತನಾಡಿ, ಎರಡು ಸಮಾಜದ ನಡುವೆ ವೈಷಮ್ಯ ಮೂಡಿಸುವ ಕೆಲಸ ನಾವುಗಳು ಮಾಡುವುದಿಲ್ಲ. ಎಲ್ಲ ಸಮಾಜದ ಭಕ್ತರು ನಮ್ಮ ಮಠಕ್ಕೆ ಬರುತ್ತಾರೆ. ಎಲ್ಲರನ್ನು ಸಮಭಾವದಿಂದ ನಾವು ಕಾಣುತ್ತೇವೆ, ಹೀಗಾಗಿ ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀವು ನೀಡದ್ದರಿಂದ ನಿಮ್ಮ ಮಾತಿಗೆ ಬೆಲೆ ನೀಡಿ ಉಪವಾಸ ಸತ್ಯಾಗ್ರಹ ಹಿಂಪಡೆಯುವುದಾಗಿ ಘೋಷಣೆ ಮಾಡಿದರು.ಈ ವೇಳೆ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಂಜುನಾಥ ಮಾಗಡಿ, ಶಂಕರಗೌಡ ಪಾಟೀಲ, ಮಹಾಂತಗೌಡ ಪಾಟೀಲ, ಮಂಜಪ್ಪ ಸುಣಗಾರ, ಪರಶುರಾಮ ನಾಯಕ, ನೀಲಪ್ಪ ಸೇರಸೂರಿ, ಶೇಖಪ್ಪಲಮಾಣಿ, ನಾಗೇಶ ಲಮಾಣಿ, ಶೇಖಪ್ಪ ನಾಯಕ, ನರಸಪ್ಪ ಡಾವ, ಲಕ್ಷ್ಮಣ ನಾಯಕ, ಕಾಶಪ್ಪ ಲಮಾಣಿ, ಶಾರವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಪ್ರೇಮಾ ಲಮಾಣಿ, ಬಾವವ್ವ ಲಮಾಣಿ, ಸಮಸ್ತ ಡಾವ ಕಾರಬಾರಿ ನಾಯಕ, ಸಮಸ್ತ ಗುರು ಹಿರಿಯರು ಇದ್ದರು.
ಈ ವೇಳೆ ಪಿಎಸ್ಐ ಈರಣ್ಣ ರಿತ್ತಿ, ಕ್ರೈಂ ಪಿಎಸ್ಐ ರಾಠೋಡ ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.