ಕುಮಾರಸ್ವಾಮಿ ಮಹಿಳೆಯರನ್ನು ಅವಮಾನಿಸಿಲ್ಲ: ಮಹಿಳಾ ಜೆಡಿಎಸ್ ಸ್ಪಷ್ಟನೆ

KannadaprabhaNewsNetwork |  
Published : Apr 17, 2024, 01:17 AM IST
23 | Kannada Prabha

ಸಾರಾಂಶ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗರು ನೀಡಿರುವ ಹೇಳಿಕೆ ಖಂಡನೀಯ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುವಂತೆ ಮಹಿಳಾ ಸಂಘಟನೆಗಳಿಗೆ ಕರೆ ನೀಡಿರುವುದು ದುರಾದೃಷ್ಟಕರವೆಂದು ಕೊಡಗು ಜಿಲ್ಲಾ ಜೆಡಿಎಸ್ ಘಟಕ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಹಿಳೆಯರನ್ನು ಅವಮಾನಿಸಿಲ್ಲವೆಂದು ಕೊಡಗು ಜಿಲ್ಲಾ ಜಾತ್ಯತೀತ ಜನತಾ ದಳದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮೂಟೆರಾ ಪುಷ್ಪಾವತಿ ರಮೇಶ್ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಪಕ್ಷ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಹಳ್ಳಿಯ ಮುಗ್ಧ ಮಹಿಳೆಯರನ್ನು ದಿಕ್ಕು ತಪ್ಪಿಸಿ ಮತ ಪಡೆದು ಅಧಿಕಾರಕ್ಕೆ ಬಂದಿದೆ. ಮಹಿಳೆಯರು ಯಾವುದೇ ಆಮಿಷಗಳಿಗೆ ಒಳಗಾಗದೆ ಎಚ್ಚರಿಕೆಯಿಂದ ಇರಿ ಎನ್ನುವ ಅರ್ಥದಲ್ಲಿ ಅವರು ಮಾತನಾಡಿದ್ದಾರೆ ಎಂದು ಪುಷ್ಪಾವತಿ ಹೇಳಿದ್ದಾರೆ.

ಕುಮಾರಸ್ವಾಮಿ ಅವರ ವಿರುದ್ಧ ಜಿಲ್ಲಾ ಮಹಿಳಾ ಕಾಂಗ್ರೆಸ್ಸಿಗರು ನೀಡಿರುವ ಹೇಳಿಕೆ ಖಂಡನೀಯ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುವಂತೆ ಮಹಿಳಾ ಸಂಘಟನೆಗಳಿಗೆ ಕರೆ ನೀಡಿರುವುದು ದುರಾದೃಷ್ಟಕರವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತೆನೆಹೊತ್ತ ರೈತ ಮಹಿಳೆಯೇ ಜೆಡಿಎಸ್ ಪಕ್ಷದ ಲಾಂಛನ. ಗ್ರಾಮೀಣ ರೈತ ಮಹಿಳೆಯೇ ಜೆಡಿಎಸ್ ಪ್ರತೀಕ. ಕುಮಾರಸ್ವಾಮಿ ಅವರು ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಕೆಟ್ಟ ಸರ್ಕಾರವನ್ನು ಆಯ್ಕೆ ಮಾಡಿ ದಿಕ್ಕು ತಪ್ಪಿದ್ದಾರೆ ಎನ್ನುವ ಮಾರ್ಮಿಕ ನುಡಿಗಳನ್ನಾಡಿದ್ದಾರೆಯೇ ಹೊರತು ಮಹಿಳೆಯರ ಸ್ವಾಭಿಮಾನಕ್ಕೆ ದಕ್ಕೆ ತರುವಂತೆ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.

ಚುನಾವಣೆ ಸಂದರ್ಭ ಮುಗ್ಧ ಗ್ರಾಮೀಣ ಮಹಿಳಾ ಮತದಾರರ ಮನಸ್ಸಿನಲ್ಲಿ ದ್ವೇಷ ಹುಟ್ಟುವಂತೆ ಮಾಡಿ ಅದರ ದುರ್ಲಾಭ ಪಡೆದು ಮತ ಸೆಳೆಯುವ ಹುನ್ನಾರದಿಂದ ಕಾಂಗ್ರೆಸ್ ಸುಳ್ಳು ಆರೋಪಗಳನ್ನು ಮಾಡುತ್ತಿದೆ. ಇದು ಮತ ಪರಿವರ್ತನೆಯ ವಿಫಲ ಪ್ರಯತ್ನವಾಗಿದೆ ಎಂದು ಅವರು ಟೀಕಿಸಿದ್ದಾರೆ.

ನಾಡಿನ ಮತದಾರರು ಪ್ರಬುದ್ಧರಾಗಿದ್ದಾರೆ. ಯಾವುದೇ ಕಪೋಲಕಲ್ಪಿತ ಹೇಳಿಕೆಗಳಿಗೆ ಬೆಲೆ ಕೊಡದೆ, ಮಹಿಳೆಯರು ತಮ್ಮ ವಿವೇಚನಾ ಶಕ್ತಿಯಿಂದ ಮತ ಚಲಾಯಿಸುತ್ತಾರೆ. ಕಾಂಗ್ರೆಸ್ಸಿಗರ ಇಂತಹ ಕ್ಷುಲ್ಲಕ ತಂತ್ರಗಾರಿಕೆ ಮತ್ತು ರಾಜಕಾರಣಕ್ಕೆ ಕವಡೆ ಕಾಸಿನ ಬೆಲೆಯೂ ಸಿಗುವುದಿಲ್ಲ. ದೇಶದ ಭದ್ರತೆ, ಅಸ್ಮಿತೆ, ಸುರಕ್ಷತೆ, ಸಮಗ್ರತೆ ಹಾಗೂ ಮುಂದಿನ ಭವಿಷ್ಯಕ್ಕಾಗಿ ಯಾರನ್ನು ಆಯ್ಕೆ ಮಾಡಬೇಕು ಎನ್ನುವುದು ನಾಡಿನ ಪ್ರತಿಯೊಬ್ಬ ಪ್ರಜೆಗೂ ತಿಳಿದಿದೆ. ಆದ್ದರಿಂದ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಅಪಾರ್ಥಪಡಿಸಿ ಜನರಲ್ಲಿ ವಿಷಬೀಜ ಬಿತ್ತುವ ಮತ್ತು ಒಡೆದು ಆಳುವ ಕೆಟ್ಟ ಸಂಪ್ರದಾಯವನ್ನು ಕಾಂಗ್ರೆಸ್ ನಾಯಕರು ಬಿಡುವುದು ಒಳಿತು. ಇಲ್ಲವಾದಲ್ಲಿ ಮತದಾರರು ತಕ್ಕ ಪಾಠ ಕಲಿಸುವ ಸಮಯ ದೂರವಿಲ್ಲ ಎಂದು ಪುಷ್ಪಾವತಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ