ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಗಂಡು ಗೊತ್ತು ಮಾಡದೇ ಹೆಣ್ಣು ಕೊಡಿ ಎಂದು ಕೇಳುವಂತಹ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿದೆ. ರಾಹುಲ್ ಮದುವೆ ಗಂಡು ಎಂದರೆ ಯಾರೂ ಹೆಣ್ಣು ಕೊಡುವುದಿಲ್ಲ ಎಂಬ ಅಂಜಿಕೆ ಬೇರೆ ಇದೆ. ಬಿಜೆಪಿ ಗಂಡು ಅಂತೂ ಸಿದ್ಧವಾಗಿದ್ದಾರೆ. ನಮ್ಮ ಗಂಡು ಯಾವ ರೀತಿ ಎಂದರೆ ಜಗಮೆಚ್ಚಿದ ಗಂಡು. ೧೪೦ ಕೋಟಿ ಜನರಿಗೆ ಒಂದೇ ಒಂದು ರು. ಇಲ್ಲದೇ ಕೋವಿಡ್ ವ್ಯಾಕ್ಸಿನ್ ನೀಡಿದ ಭಗವಂತ ರೂಪದ ಗಂಡು. ಗರೀಬ್ ಕಲ್ಯಾಣ ಯೋಜನೆ ಮೂಲಕ ಅಕ್ಕಿ ಕೊಡುವ ಗಂಡು ನಮ್ಮ ಮೋದಿಜಿ ಎಂದು ಶ್ಲಾಘಿಸಿದರು.
ಈ ಹಿಂದೆ ನಮ್ಮ ಗೆಳೆಯ ಲಕ್ಷ್ಮಣ ಸವದಿ ನಮ್ಮ ಜೊತೆಗಿದ್ದರು, ಭಾರತ ಮಾತಾ ಕೀ ಜೈ ಎಂದು ಯಾವಾಗ ಬೇಕಾದರೂ ಹೇಳಬಹುದಿತ್ತು. ಆದರೆ ಕಾಂಗ್ರೆಸ್‌ನಲ್ಲಿ ಭಾರತ ಮಾತಾ ಕೀ ಜೈ ಎನ್ನಲು ಪರ್ಮಿಷನ್ ತೆಗೆದುಕೊಳ್ಳಬೇಕು ಎಂದರು.ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಹಾಕಲು ಯೋಜಿಸಿದವರನ್ನು, ಡಿಜೆ ಹಳ್ಳಿ-ಕೆಜೆ ಹಳ್ಳಿ ಘಟನೆಗೆ ಕಾರಣರಾದವರನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬ್ರದರ್ಸ್ ಎಂದು ಕರೆದವರು. ಹೀಗಾಗಿ ಈ ರೀತಿಯ ವ್ಯವಸ್ಥೆ ಇರಬಾರದು. ಈ ರೀತಿಯ ದುರುಳರಿಗೆ ಶಿಕ್ಷೆ ನೀಡಲು ಬುಲ್ಡೋಜರ್ ಆಡಳಿತ ಬೇಕು ಎಂದು ಹೇಳಿದರು. ಜನತಾ ದಳ ಜೊತೆ ಬಿಜೆಪಿಯ ಸಂಬಂಧ ಹೊಸತಲ್ಲ. ತುರ್ತು ಪರಿಸ್ಥಿತಿ ವೇಳೆ ಜನತಾ ಪರಿವಾರಕ್ಕೆ ಬಿಜೆಪಿ ಸಾಥ್ ನೀಡಿತ್ತು. ದಿ. ರಾಮಕೃಷ್ಣ ಹೆಗಡೆ ಅವರಿಗೆ ೧೮ ಶಾಸಕರ ಬೆಂಬಲ ನೀಡಿದ್ದೂ ಬಿಜೆಪಿಯೇ, ಈ ಹಿಂದೆ ೨೦-೨೦ ಸರ್ಕಾರದಲ್ಲಿಯೂ ಮೊದಲನೇ ೨೦ ಓವರ್ ಆಡಲು ಸಹ ಜೆಡಿಎಸ್‌ನವರಿಗೆ ಬಿಡಲಾಗಿತ್ತು. ನಮ್ಮ ಕಡೆಯಿಂದ ಅವರಿಗೆ ಯಾವ ರೀತಿಯಲ್ಲೂ ಮೋಸಲಾಗಿಲ್ಲ ಎಂದರು.
ಮಾಜಿ ಸಚಿವ ಹಾಲಪ್ಪ ಆಚಾರ್ ಮಾತನಾಡಿ, ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗೆ ವಾರ್ಷಿಕ ₹೧೦ ಸಾವಿರ ಕೋಟಿ ನೀಡುವುದಾಗಿ ಸುಳ್ಳು ಭರವಸೆ ನೀಡುವ ಮೂಲಕ ಕಾಂಗ್ರೆಸ್ ಉತ್ತರ ಕರ್ನಾಟಕ ಭಾಗಕ್ಕೆ ದೊಡ್ಡ ಮೋಸ ಮಾಡಿದೆ ಎಂದರು.
ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ ಮಾತನಾಡಿದರು. ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಪ್ರಮುಖರಾದ ದುರ್ಯೋಧನ ಐಹೊಳಿ, ವಿಜುಗೌಡ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಕಾಸುಗೌಡ ಬಿರಾದಾರ, ಅಪ್ಪುಗೌಡ ಪಾಟೀಲ ಮನಗೂಳಿ, ರಮೇಶ ಭೂಸನೂರ, ಬಿ.ಜಿ. ಪಾಟೀಲ ಹಲಸಂಗಿ, ಅರುಣ ಶಹಾಪೂರ, ಶಂಕರಗೌಡ ಪಾಟೀಲ, ಸಂಜಯ ಪಾಟೀಲ ಕನಮಡಿ, ಡಾ.ಗೌತಮ ಚೌದರಿ ಮುಂತಾದವರು ಇದ್ದರು.
ಧಮ್ ಇದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಿ
ಕೆಲವೇ ದಿನಗಳಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾಗುತ್ತದೆ. ಲೋಕಸಭಾ ಕ್ಷೇತ್ರಗಳ ಸಂಖ್ಯೆ ಅಧಿಕವಾಗಲಿದೆ. ಸರಿಸುಮಾರು ೩ ಜನರು ಜಿಲ್ಲೆಯನ್ನು ಪ್ರತಿನಿಧಿಸಬಹುದು. ಹೀಗಾಗಿ ಒಂದು ಸಾಮಾನ್ಯ ಕ್ಷೇತ್ರದಲ್ಲಿ ನಾನಂತೂ ಸ್ಪರ್ಧಿಸುವುದು ನಿಶ್ಚಿತ. ನನ್ನ ವಿರುದ್ಧ ಬೇಕಾದರೆ ಸ್ಪರ್ಧಿಸಿ ನೋಡಿ ಬರೀ ಹೇಳುವುದೇ ಆಗಿದೆ. ನಾನು ನಿಲ್ಲುವುದು ಪಕ್ಕಾ, ಧಮ್ ಇದ್ದರೆ ನನ್ನ ವಿರುದ್ಧ ಸ್ಪರ್ಧೆ ಮಾಡಿ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸಚಿವ ಶಿವಾನಂದ ಪಾಟೀಲ ಅವರವಿರುದ್ಧ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದರು.
ಚುನಾವಣೆ ಬಂದರೆ ಸಾಕು ವಿಜಯಪುರಕ್ಕೆ ಬರುವೆ. ಮುದ್ದೇಬಿಹಾಳಕ್ಕೆ ನಿಲ್ಲುವೆ. ದೇವರಹಿಪ್ಪರಗಿಗೆ ನಿಲ್ಲುವೆ ಎಂದು ನಾಟಕವಾಡುತ್ತಾರೆ ಎಂದು ಏಕವಚನದಲ್ಲಿಯೇ ಶಿವಾನಂದ ಪಾಟೀಲರ ವಿರುದ್ಧ ಗುಡುಗಿದರು.