ರಾಜ್ಯದ ಜನರಿಗೆ ಕುಮಾರಸ್ವಾಮಿ ಡ್ರಾಮಾ ಮಾಡುವುದರಲ್ಲಿ ಎಕ್ಸ್‌ಪರ್ಟ್ ಅಂತ ಗೊತ್ತು. ಯಾವ ಸಂದರ್ಭದಲ್ಲಿ ಯಾವ ರೀತಿ ಡ್ರಾಮಾ ಆಡಬೇಕು, ವಿಷಯಗಳನ್ನು ಯಾವ ರೀತಿ ತಿರುಚಬೇಕು ಅನ್ನೋದು ಗೊತ್ತಿದೆ.
ಕನ್ನಡಪ್ರಭ ವಾರ್ತೆ ರಾಮನಗರ ಕಾಲ್ತುಳಿತ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರದು ಡ್ರಾಮಾದ ಕಣ್ಣೀರು ಎಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಮಾಜಿ ಸಂಸದ ಡಿ.ಕೆ.ಸುರೇಶ್ ರವರು ಡ್ರಾಮಾ ಮಾಡುವುದರಲ್ಲಿ ಕುಮಾರಸ್ವಾಮಿ ಎಕ್ಸ್‌ಪರ್ಟ್ ಎಂದು ತಿರುಗೇಟು ನೀಡಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರಿಗೆ ಕುಮಾರಸ್ವಾಮಿ ಡ್ರಾಮಾ ಮಾಡುವುದರಲ್ಲಿ ಎಕ್ಸ್‌ಪರ್ಟ್ ಅಂತ ಗೊತ್ತು. ಯಾವ ಸಂದರ್ಭದಲ್ಲಿ ಯಾವ ರೀತಿ ಡ್ರಾಮಾ ಆಡಬೇಕು, ವಿಷಯಗಳನ್ನು ಯಾವ ರೀತಿ ತಿರುಚಬೇಕು ಅನ್ನೋದು ಗೊತ್ತಿದೆ. ಅವರಿಗೆ ಸತ್ತವರ ಬಗ್ಗೆ ಅನುಕಂಪ ಇದಿಯೋ, ರಾಜಕೀಯ ಇದಿಯೋ ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿರವರು ಯಾವತ್ತೂ ಸತ್ತವರ ಮೇಲೆ ರಾಜಕಾರಣ ಮಾಡಿಕೊಂಡು ಬೆಳೆದು ಬಂದವರು. ಅವರಿಗೆ ಯಾವತ್ತೂ ಸಾರ್ವಜನಿಕ ಹಿತಾಸಕ್ತಿ ಬಗ್ಗೆ ಗೌರವ ಇಲ್ಲ. ಇವತ್ತೂ ರಾಜಕೀಯಕ್ಕಾಗಿ ಆರೋಪ ಮಾಡುತ್ತಿದ್ದಾರೆ. ಸರ್ಕಾರದ ಕಾರ್ಯಕ್ರಮ ಇದ್ದಿದ್ದರಿಂದ ಡಿ.ಕೆ.ಶಿವಕುಮಾರ್ ಅಲ್ಲಿ ಹೋಗಿದ್ದರು ಎಂದು ತಿಳಿಸಿದರು.ವಿಧಾನಸೌಧದಲ್ಲಿ ಕಾರ್ಯಕ್ರಮ ಮುಗಿದ ಬಳಿಕ ಕಾಲ್ತುಳಿತ ಆಗಿದೆ ಅಂತ ಗೊತ್ತಾಯಿತು. ಹಾಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಕಾರ್ಯಕ್ರಮ ವೈಂಡಪ್ ಮಾಡಿಸಲು ಡಿ.ಕೆ.ಶಿವಕುಮಾರ್ ಹೋಗಿದ್ದರು. ಬಳಿಕ 10 ನಿಮಿಷದಲ್ಲಿ ಕಾರ್ಯಕ್ರಮ ಮುಗಿಸಲಾಗಿದೆ. ರಾಜಕೀಯವಾಗಿ ಏನೋ ಹೇಳಬೇಕು ಕುಮಾರಸ್ವಾಮಿ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ಕಾಲ್ತುಳಿತ ಪ್ರಕರಣದಲ್ಲಿ ಮುಖ್ಯಮಂತ್ರಿ ಎ1, ಉಪಮುಖ್ಯಮಂತ್ರಿ ಎ2 ಮಾಡಬೇಕು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರಗೆ ಹೇಳಿ ಮೊದಲು ಪ್ರಯಾಗ್ ರಾಜ್‌ನಲ್ಲಿ ನಡೆದ ಘಟನೆಗೆ ಮೋದಿರನ್ನು ಎ 1 ಹಾಗೂ ಅಮಿತ್ ಶಾರನ್ನು ಎ2 ಮಾಡಲಿ. ಕುಮಾರಸ್ವಾಮಿ ಇದರ ನೈತಿಕ ಹೊಣೆ ಹೊರುತ್ತಾರಾ ಎಂದು ಪ್ರಶ್ನಿಸಿದರು.ಎಲ್ಲಿ ಏನೇ ಘಟನೆಯಾದರೂ ಡಿ.ಕೆ.ಶಿವಕುಮಾರ್ ಮಾತ್ರ ಕಾರಣ. ಡಿಕೆಶಿ ಟಾರ್ಗೆಟ್ ಮಾಡುವುದು ಬಿಟ್ಟರೆ ಅವರಿಗೆ ಬೇರೆ ಏನೂ ಗೊತ್ತಿಲ್ಲ. ಡಿಕೆಶಿ ಒಬ್ಬರೇ ಎಲ್ಲರಿಗೂ ಕಾಣುವುದು. ಯಾವ ಕಾರಣಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ ಅಂತ ಮಾಧ್ಯಮದವರು ಹುಡುಕಿ ಎಂದರು.ಈ ದುರಂತಕ್ಕೆ, ಸಾವು-ನೋವಿಗೆ ಎಲ್ಲರೂ ಕಾರಣ. ಎಲ್ಲರೂ ಈ ವಿಚಾರಕ್ಕೆ ತಲೆತಗ್ಗಿಸಬೇಕಿದೆ. ಇದರಲ್ಲಿ ಸರ್ಕಾರದ ವೈಫಲ್ಯವೂ ಇದೆ. ಪಹಲ್ಗಾಮ್‌ನಲ್ಲಿ ಆದ ದುರಂತ ಕೇಂದ್ರ ಸರ್ಕಾರದ ವೈಫಲ್ಯ ಅಲ್ವಾ? ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ, ಗೃಹ ಸಚಿವರ ರಾಜೀನಾಮೆ ಕೇಳಿದ್ದಾರಾ. ಅದು ಉಗ್ರರ ಅಟ್ಟಹಾಸ, ಅಮಾಯಕರು ಬಲಿಯಾದರು. ಅದರಲ್ಲಿ ನಾವು ರಾಜಕೀಯ ಮಾಡಲಿಲ್ಲ. ವಿಪಕ್ಷಗಳು ಬೆಂಬಲ ಕೊಡಲಿಲ್ವಾ? ಎಂದು ಪ್ರಶ್ನೆ ಮಾಡಿದರು.ಈ ಕಾಲ್ತುಳಿತ ಪ್ರಕರಣ ಕೂಡಾ ಅನಿರೀಕ್ಷಿತ ಅವಘಡ. ಲಕ್ಷಾಂತರ ಜನರು ಒಂದೇ ಕಡೆ ಸೇರಿದರೆ ಅನಿರೀಕ್ಷಿತ ಘಟನೆ ನಡೆಯೋದು ಸಹಜ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಡಾ.ರಾಜಕುಮಾರ್ ಅಂತ್ಯಕ್ರಿಯೆಯಲ್ಲಿ ಅವಘಡ ಆಯಿತು. ಕುಮಾರಸ್ವಾಮಿ ಆಗ ರಾಜಿನಾಮೆ ಕೊಟ್ಟರಾ ? ಆಗ ಅವಿತುಕೊಂಡು ಕುಳಿತಿದ್ದರು. ಇದನ್ನು ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರಗೆ ಕೇಳಿ. ಇದರಲ್ಲಿ ರಾಜಕೀಯ ಬಿಡಿ. ಲೋಪ ಆಗಿರುವುದು ನಿಜ. ಅದನ್ನು ಸರಿಪಡಿಸೋದು ಸರ್ಕಾರದ ಜವಾಬ್ದಾರಿ. ಇದರಲ್ಲಿ ರಾಜಕೀಯ ಮಾಡುವವರಿಗೆ ತಿಳಿಹೇಳಬೇಕು ಎಂದು ಡಿ.ಕೆ.ಸುರೇಶ್ ತಿಳಿಸಿದರು. 6ಕೆಆರ್ ಎಂಎನ್ 1.ಜೆಪಿಜಿ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.