ಪ್ರಧಾನಿ ಮೋದಿ ಎದುರು ಕುಮಾರಸ್ವಾಮಿ ಬೇಳೆಕಾಳು ಬೇಯಲ್ಲ: ಬಾಲಕೃಷ್ಣ

KannadaprabhaNewsNetwork |  
Published : Feb 05, 2025, 12:35 AM IST
ಬಾಲಕೃಷ್ಣ | Kannada Prabha

ಸಾರಾಂಶ

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಅನುದಾನ ತರುವ ಕುರಿತು ಯಾವೊಬ್ಬ ಸಚಿವರೂ ನನ್ನ ಸಂಪರ್ಕ ಮಾಡಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬೇರೆ ಪಕ್ಷದ ಸಂಸದರು, ಸಚಿವರ ಜೊತೆ ಚರ್ಚೆ ಮಾಡಿದ್ದರಾ? ಅವರಿಗೆ ಈ ರಾಜ್ಯದ ಚಿತ್ರಣ ಗೊತ್ತಿಲ್ಲವೇ? ಅವರು ಕೇಳಲಿಲ್ಲ ಅಂದರೆ ನೀವು ತರುವುದಿಲ್ಲವೇ ಎಂದು ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕಕ್ಕೆ ಯಾವುದೇ ಕೊಡುಗೆ ಸಿಕ್ಕಿಲ್ಲ. ಇದರ ಅರ್ಥ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಕೇಂದ್ರ ಸಚಿವ ಕುಮಾರಸ್ವಾಮಿಯವರ ಬೇಳೆಕಾಳು ಬೇಯಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಮಾಗಡಿ ಕ್ಷೇತ್ರ ಶಾಸಕ ಬಾಲಕೃಷ್ಣ ಟೀಕಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕುಮಾರಸ್ವಾಮಿಯವರ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ವಿ. ಆದರೆ, ಇವರು ಕೂಡಾ ಬೇರೆ ಸಚಿವರಂತೆಯೇ ಆಗಿ ಹೋದರು.

ಮೋದಿ ಮತ್ತು ಅಮಿತ್ ಶಾ ಬಳಿ ಇವರಿಗೆ ಗೌರವ ಇಲ್ಲ ಅಂತ ಅರ್ಥವಾಯಿತು ಎಂದು ಲೇವಡಿ ಮಾಡಿದರು.

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಅನುದಾನ ತರುವ ಕುರಿತು ಯಾವೊಬ್ಬ ಸಚಿವರೂ ನನ್ನ ಸಂಪರ್ಕ ಮಾಡಿಲ್ಲ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಬೇರೆ ಪಕ್ಷದ ಸಂಸದರು, ಸಚಿವರ ಜೊತೆ ಚರ್ಚೆ ಮಾಡಿದ್ದರಾ? ಅವರಿಗೆ ಈ ರಾಜ್ಯದ ಚಿತ್ರಣ ಗೊತ್ತಿಲ್ಲವೇ? ಅವರು ಕೇಳಲಿಲ್ಲ ಅಂದರೆ ನೀವು ತರುವುದಿಲ್ಲವೇ ಎಂದು ಪ್ರಶ್ನಿಸಿದರು.

ಬಜೆಟ್ ನಲ್ಲಿ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪ ಆಗಿಲ್ಲ. ನಾವು ಕಾಲು ಹಿಡಿದುಕೊಂಡು ನಿಮ್ಮ ಬಳಿ ದಯಾಭಿಕ್ಷೆ ಕೇಳಬೇಕಾ? ಜನ ನಿಮ್ಮನ್ನು ಕೇಳಲಿ ಎಂದು ಗೆಲ್ಲಿಸಿದ್ದಾರಾ? ನಿಮ್ಮ ಡ್ಯೂಟಿ ನೀವು ಮಾಡಿ. ಅದನ್ನು ಬಿಟ್ಟು ಅವರು ಕೇಳಲಿಲ್ಲ, ಇವರು ಕೇಳಲಿಲ್ಲ ಅಂತ ಕಥೆ ಹೇಳಬೇಡಿ ಎಂದು ಟಾಂಗ್ ನೀಡಿದರು.

ಕುಮಾರಸ್ವಾಮಿ ಕರ್ನಾಟಕದವರೇ ಅಲ್ಲವೇ. ಇಲ್ಲಿನ ಸಮಸ್ಯೆ ಅವರಿಗೆ ಗೊತ್ತಿಲ್ವಾ. ಸಮಸ್ಯೆ ಬಗೆಹರಿಸಿ ಅವರೇ ಕ್ರೆಡಿಟ್ ತೆಗೆದುಕೊಳ್ಳಲಿ. ನಮ್ಮ ಸಚಿವರು ಪ್ರಧಾನಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆಗೆ ಕೊಟ್ಟಿರುವ 5300 ಕೋಟಿಯನ್ನೇ ಇವರ ಕೈಯಲ್ಲಿ ಬಿಡುಗಡೆ ಮಾಡಿಸಲು ಆಗಿಲ್ಲ. ಸುಮ್ಮನೆ ಬುರುಡೆ ಬಿಡುವುದಕ್ಕೆ ಕೇಂದ್ರಕ್ಕೆ ಹೋಗಿದ್ದಾರೆ ಅಷ್ಟೆ ಎಂದು ಬಾಲಕೃಷ್ಣ ಹರಿಹಾಯ್ದರು.

ಡಿಕೆಶಿ ನಾಳೆಯೇ ಸಿಎಂ ಆಗುತ್ತಾರೆಂದು ಹೇಳಿದ್ದೇನಾ?:

ರಾಮನಗರ: ಚನ್ನಪಟ್ಟಣ ಕ್ಷೇತ್ರದ ಜನರು ಕೊಟ್ಟಿರುವ ಶಕ್ತಿಯು ಡಿ.ಕೆ.ಶಿವಕುಮಾರ್ ಅವರಿಗೆ ಮುಂದೆ ಅಧಿಕಾರದ ಚುಕ್ಕಾಣಿ ಹಿಡಿಯಲು ಸಹಾಯಕವಾಗಲಿದೆ. ನಾಳೆಯೇ ಡಿಕೆಶಿ ಮುಖ್ಯಮಂತ್ರಿ ಆಗುತ್ತಾರೆ ಅಂತ ನಾನು ಹೇಳಿದ್ದೇನಾ ಎಂದು ಶಾಸಕ ಬಾಲಕೃಷ್ಣ ಪ್ರಶ್ನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನು ಯಾರ ಬೆಂಬಲಿಗರೂ ಅಲ್ಲ, ಹೈಕಮಾಂಡ್ ಬೆಂಬಲಿಗರು. ಅವರವರ ನಾಯಕರು ಸಿಎಂ ಆಗಬೇಕು ಎಂಬುದು ಕಾರ್ಯಕರ್ತರ ಆಸೆ ಎಂದರು. ಪರಮೇಶ್ವರ್, ಎಂ.ಬಿ.ಪಾಟೀಲ್, ಸತೀಶ್ ಜಾರಕೀಹೋಳಿ ಅಭಿಮಾನಿಗಳಿಗೆ ಆಸೆ ಇದೆ. ಹಾಗೆಯೇ ಡಿಕೆಶಿ ಅಭಿಮಾನಿಗಳಿಗೂ ಅವರು ಸಿಎಂ ಆಗಬೇಕು ಅನ್ನುವ ಆಸೆ ಇದೆ. ನಮ್ಮ ನಾಯಕರು ಮುಖ್ಯಮಂತ್ರಿ ಆಗಬೇಕು ಅಂತ ಕೇಳುವುದರಲ್ಲಿ ತಪ್ಪೇನಿದೆ. ಜನ ಮಾಜಿ ಸಿಎಂ ಪುತ್ರನ ಎದುರು ಒಬ್ಬ ಯೋಗೇಶ್ವರ್ ರನ್ನು ಗೆಲ್ಲಿಸಿದ್ದಾರೆ. ಇದರಿಂದ ಪಕ್ಷಕ್ಕೆ ಹಾಗೂ ನಮಗೆ ಗೌರವ ಸಿಕ್ಕಿದೆ. ಇದಕ್ಕೆ ಶ್ರಮ ಹಾಕಿದ ಡಿಕೆಶಿ ಅವರಿಗೆ ಮುಂದೆ ಅವಕಾಶ ಸಿಗುತ್ತದೆ ಎಂದು ಬಾಲಕೃಷ್ಮ ಹೇಳಿದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ