ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಗ್ರಾಮೀಣ ಹೆಣ್ಣುಮಕ್ಕಳು ಸ್ವಲ್ಪ ದಾರಿ ತಪ್ಪಿದ್ದಾರೆ ಎಂಬ ತಮ್ಮ ಹೇಳಿಕೆ ಭಾರಿ ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ತುರ್ತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಹೇಳಿಕೆಯಿಂದ ತಾಯಂದಿರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ. ಮಹಿಳೆಯರನ್ನು ಅಪಮಾನಿಸಿಲ್ಲ, ಅಂತಹ ಜಾಯಮಾನವೂ ನನ್ನದಲ್ಲ. ವಿಷಾದಿಸುವುದಕ್ಕೆ ನನಗೆ ಯಾವ ಪ್ರತಿಷ್ಠೆಯೂ ಇಲ್ಲ. ಜನರಿಂದ ಕಿತ್ತುಕೊಂಡ ಹಣವನ್ನೇ ಕಾಂಗ್ರೆಸ್ಸಿನವರು ಗ್ಯಾರಂಟಿ ಎಂದು ಕೊಡುತ್ತಿದ್ದಾರೆ. ಈ ಐದು ಗ್ಯಾರಂಟಿಗಳು ‘ಪಿಕ್ ಪಾಕೆಟ್ ಗ್ಯಾರಂಟಿಗಳು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ಟಾಂಗ್ ನೀಡಿದರು. ‘ಅಳಬೇಡಪ್ಪ ಡಿ.ಕೆ.ಶಿವಕುಮಾರ್. ಮಹಿಳೆಯರ ಕುರಿತ ನನ್ನ ಹೇಳಿಕೆಗೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನೀನು ದುಃಖಪಡಬೇಡಪ್ಪ’ ಎಂದು ವ್ಯಂಗ್ಯವಾಗಿ ಹೇಳಿದರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಿರುದ್ಧವೂ ಏಕವಚನದಲ್ಲಿಯೇ ಹರಿಹಾಯ್ದರು.
ನನ್ನ ಹೇಳಿಕೆ ಖಂಡಿಸಿ ಧರಣಿ ನಡೆಸಿದ ಕಾಂಗ್ರೆಸ್ಸಿನ ಮಹಿಳಾ ನಾಯಕಿಯರಿಗೆ ದುಃಖವಾಗಿದ್ದರೆ ಅದಕ್ಕೂ ವಿಷಾದ ವ್ಯಕ್ತಪಡಿಸುತ್ತೇನೆ. ಯಾರಿಗೇ ದುಃಖವಾಗಿದ್ದರೂ ವಿಷಾದಿಸುತ್ತೇನೆ. ಆದರೆ ನಾನು ಇವರಂತೆ ಹೆಣ್ಣು ಮಕ್ಕಳಿಗೆ ರೇಟ್ ಫಿಕ್ಸ್ ಮಾಡಿದ ರೀತಿ ನಾನು ಮಾತನಾಡಿಲ್ಲ. ನಾನು ತಪ್ಪು ಮಾಡಿಲ್ಲ. ಜನರಿಗೇ ನನ್ನ ಹೇಳಿಕೆಯನ್ನು ಬಿಡುತ್ತೇನೆ. ಅವರೇ ತೀರ್ಮಾನ ಮಾಡಲಿ ಎಂದು ಹೇಳಿದರು.
ಸಚಿವರು, ನಾಯಕರು, ಕಾಂಗ್ರೆಸ್ ಮಹಿಳಾ ಘಟಕದವರು ಮಂಡ್ಯದಲ್ಲಿ ಗೋ ಬ್ಯಾಕ್ ಕುಮಾರಸ್ವಾಮಿ ಎಂದು ಪ್ರತಿಭಟಿಸಿದ್ದಾರೆ. ಅಲ್ಲಿಗೆ ಬಂದ ಹೆಣ್ಣುಮಕ್ಕಳಿಗೆ ಯಾಕೆ ಬಂದಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಆ ತಾಯಂದಿರಿಗೆ ತಮ್ಮ ಪಕ್ಷದ ನಾಯಕರೇ ಮಹಿಳೆಯರಿಗೆ ಮಾಡಿರುವ ಘೋರ ಅಪಮಾನದ ಬಗ್ಗೆ ಗೊತ್ತಿಲ್ಲ. ಇಂತಹ ರಾಜಕೀಯ ಆಟಗಳಿಗೆ ಹೆದರುವ ಆಸಾಮಿ ಅಲ್ಲ ಎಂದು ತಿರುಗೇಟು ನೀಡಿದರು.
ಸುರ್ಜೇವಾಲಾ ವಿರುದ್ಧ ವಾಗ್ದಾಳಿ:
ಇದೇ ವೇಳೆ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ‘ಹೇಮಾಮಾಲಿನಿ ಬಗ್ಗೆ ನೀನು ಏನು ಹೇಳಿದ್ದೆ ಹೇಳಪ್ಪ ಸುರ್ಜೇವಾಲಾ’? ಅವರ ಹೇಳಿಕೆಯನ್ನು ಓದಿ ಹೇಳಲು ಆಗುವುದಿಲ್ಲ. ಅಷ್ಟು ಅಸಭ್ಯ, ಕೀಳು ಅಭಿರುಚಿಯಿಂದ ಕೂಡಿದೆ. ಅಲ್ಲದೇ, ನಟಿ ಕಂಗನಾ ರಣಾವತ್ ಬಗ್ಗೆ ಇವರ ಪಕ್ಷದ ವಕ್ತಾರರು ಸಾಮಾಜಿಕ ಜಾಲತಾಣದಲ್ಲಿ ಏನು ಬರೆದಿದ್ದರು? ಅಲ್ಲಿ ರೇಟ್ ಫಿಕ್ಸ್ ಮಾಡಿದ್ದಾರೆ. ಇದಕ್ಕೆ ಶಿವಕುಮಾರ್ ಉತ್ತರ ನೀಡಬೇಕು. ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಇಂಥ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಏನು ಹೇಳುತ್ತಾರೆ ಎಂದು ಕಟುವಾಗಿ ಪ್ರಶ್ನಿಸಿದರು.
ಅಪಾರ್ಟ್ಮೆಂಟ್ ನಿವಾಸಿಗಳಿಗೆ ಡಿಕೆಶಿ ಬೆದರಿಕೆ: ಎಚ್‌ಡಿಕೆ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಅಪಾರ್ಟ್‌ಮೆಂಟ್ ನಿವಾಸಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು. ಹೊಸ ಅಪಾರ್ಟ್‌ಮೆಂಟ್‌ಗೆ ಎನ್‌ಒಸಿ ಬೇಕಾದರೆ ನನ್ನ ತಮ್ಮನಿಗೆ ಮತ ಹಾಕಿ ಎಂದು ಬೆದರಿಕೆ ಹಾಕಿದ್ದಾರೆ. ಮತ ನೀಡಿದರೆ ಕಾವೇರಿ ನೀರು ಬಿಡುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿದರು.