ಹಾವೇರಿ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳುವ ಮೂಲಕ ರಾಜ್ಯದ ಮಹಿಳೆಯರನ್ನು ಅವಮಾನಿಸಿದ್ದಾರೆ. ಇನ್ನು ಮುಂದೆ ಇಂಥ ಮಾತುಗಳಿಗೆ ಕಡಿವಾಣ ಹಾಕಿಕೊಳ್ಳಬೇಕು ಮತ್ತು ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ಮತ್ತು ಹಾವೇರಿ ಜಿಲ್ಲಾ ಮಹಿಳಾ ಒಕ್ಕೂಟ ವತಿಯಿಂದ ಪ್ರತಿಭಟನೆ ನಡೆಯಿತು.
ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರನ್ನು ಅವಮಾನಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಇಂಥ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.
ರಾಜಕಾರಣಿಗಳು ನೀಡುತ್ತಿರುವ ಹಗುರ ಮತ್ತು ಅವಹೇಳನಕಾರಿ ಹೇಳಿಕೆಯಿಂದ ಮಹಿಳೆಯರು ನೊಂದಿದ್ದಾರೆ. ಇಂಥ ಹೇಳಿಕೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಹಿರಿಯ ರಾಜಕಾರಣಿಗಳು ಖಂಡಿಸುತ್ತಿಲ್ಲ. ಮೌನಕ್ಕೆ ಜಾರಿರುವ ನಾಯಕರ ವಿರುದ್ಧ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮುಖಂಡರಾದ ರಾಜು ಆಲದಹಳ್ಳಿ, ಶಿವರಾಜ ಕಳ್ಳಿಮನಿ, ಪ್ರೇಮಕ್ಕ ಕರಿಬಸಕ್ಕ, ಉಡಚವ್ವ ಯಲ್ಲಾಪುರ, ಬೀಬಿಜಾನ್ ಯಲವಗಿ, ಸಾವಕ್ಕ ಕೊರಗರ ಇತರರು ಇದ್ದರು.