ಕೊಪ್ಪಳ: ರೈತರ ಒಳಿತಿಗಾಗಿ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಶೀಘ್ರವೇ ಕೆಲವು ಯೋಜನೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಹೇಳಿದರು.
ಮಣ್ಣಿನ ಮಗನಾದ ಕುಮಾರಸ್ವಾಮಿಯವರಿಗೆ ನೇಗಿಲ ಯೋಗಿಗಳ ಸಂಕಷ್ಟದ ಅರಿವಿದೆ. ಇನ್ನೆರಡು ವರ್ಷಗಳ ನಂತರ ನಮ್ಮ ಪಕ್ಷ ಸರ್ಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಅಂತಹ ಸಂದರ್ಭದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತ. ಅಧಿಕಾರದಲ್ಲಿದ್ದಾಗ ಬೃಹತ್ ಪ್ರಮಾಣದಲ್ಲಿ ರೈತರ ಸಾಲ ಮನ್ನಾ ಮಾಡಿದ ಅವರಿಗೆ ರೈತರಿಗೆ ಇನ್ನಷ್ಟು ಉಪಯೋಗವಾಗುವ ಯೋಜನೆ ಹಮ್ಮಿಕೊಳ್ಳುವ ಯೋಚನೆಯಿದೆ. ಅದು ಶೀಘ್ರದಲ್ಲಿ ಸಾಧ್ಯವಾಗಬಹುದು ಎಂದು ಹೇಳಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್ ಭೂಮರೆಡ್ಡಿ ಮಾತನಾಡಿ, ಕೇಂದ್ರ ಸಚಿವರ ಜನ್ಮದಿನದ ಅಂಗವಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ಜಿಲ್ಲಾ ಘಟಕ ನಿರ್ಧರಿಸಿತ್ತು. ಪಕ್ಷದ ಮುಖಂಡರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಪಕ್ಷದ ಕಾರ್ಯಕರ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು ಎಂದರು.ಇದೇ ಮೊದಲ ಸಲ ಜಿಲ್ಲಾ ಘಟಕ ಕುಮಾರಸ್ವಾಮಿಯವರ ಜನ್ಮದಿನ ಅಂಗವಾಗಿ ರಕ್ತದಾನ ಶಿಬಿರ ಏರ್ಪಡಿಸಿತ್ತು. ನಾವು ರಕ್ತದಾನ ಮಾಡಿ ನಾಲ್ಕು ಜನಕ್ಕೆ ನೆರವಾದ ಸಂತಸವಿದೆ. ಇಂತಹ ಅರ್ಥಪೂರ್ಣ ಕಾರ್ಯಕ್ರಮ ಮುಂದುವರೆಯಲಿದೆ ಎಂದು ರಕ್ತದಾನ ಮಾಡಿದ ನಗರ ಘಟಕದ ಅಧ್ಯಕ್ಷ ಸೋಮನಗೌಡ ಹೊಗರನಾಳ ಹೇಳಿದರು.