ಸೋಮರಡ್ಡಿ ಅಳವಂಡಿ ಕೊಪ್ಪಳ
ಜಿಲ್ಲಾದ್ಯಂತ ಅಧೋಗತಿಯ ಫಲಿತಾಂಶದ ಶಾಲೆಗಳನ್ನು ವಿವಿಧ ಅಧಿಕಾರಿಗಳು ದತ್ತು ಪಡೆದಿದ್ದು, ಖುದ್ದು ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಜಿಲ್ಲಾ ಕೇಂದ್ರದಲ್ಲಿದ್ದರೂ ಅತ್ಯಂತ ಕಳಪೆ ಫಲಿತಾಂಶಕ್ಕೆ ಹೆಸರುವಾಸಿಯಾಗಿರುವ ಸರ್ಕಾರಿ ಬಾಲಕರ ಪ್ರೌಢ ಶಾಲೆಯನ್ನು ದತ್ತು ಪಡೆದಿದ್ದು, ಅಲ್ಲದೆ ಫಲಿತಾಂಶ ಸುಧಾರಣೆ ಮಾಡಲು ಪಣ ತೊಟ್ಟಿದ್ದಾರೆ.
ಶಾಲೆಯ ಸ್ಥಿತಿಗತಿ: ಜಿಲ್ಲಾ ಕೇಂದ್ರದಲ್ಲಿರುವ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಸ್ಥಿತಿಯೂ ಅಧೋಗತಿಯಲ್ಲಿದೆ ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಇನ್ನೂ ಅಧೋಗತಿಯಲ್ಲಿದೆ. ಕಳೆದ ವರ್ಷ ಈ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 30 ಮಾತ್ರ. ಅಂದರೆ ಪರೀಕ್ಷೆ ಬರೆದ ಶೇ. 70 ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ.ಈ ಮಾಹಿತಿ ತಿಳಿದುಕೊಂಡ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಇದನ್ನೇ ನಾನು ದತ್ತು ಪಡೆಯುತ್ತೇನೆ. ಖುದ್ದು ಹಾಜರಾಗಿ ಫಲಿತಾಂಶ ದಿಸೆಯಲ್ಲಿ ಏನು ಮಾಡಬಹುದು ಎಂದು ಚಿಂತನೆ ಮಾಡಿ ಕ್ರಮ ವಹಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಸಕ್ತ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ 95 ವಿದ್ಯಾರ್ಥಿಗಳು ಇದ್ದಾರೆ. ಇಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮವೂ ಇದ್ದು, ಕನ್ನಡ ಮಾಧ್ಯಮದ 62 ವಿದ್ಯಾರ್ಥಿಗಳು ಹಾಗೂ ಉರ್ದು ಮಾಧ್ಯಮದ 33 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.ಇಲ್ಲಿ ವಿದ್ಯಾರ್ಥಿಗಳ ಹಾಜರಾತಿಯೂ ಕಮ್ಮಿ ಇದೆ. ನಿತ್ಯ ಶಾಲೆಗೆ ಬಾರದೆ ಇರುವುದರಿಂದ ಇಲ್ಲಿಯ ಶಿಕ್ಷಕರು ಪಾಲಕರನ್ನು ಭೇಟಿ ಮಾಡಿ ಮನವೊಲಿಸಿ ಶಾಲೆಗೆ ಕರೆಯಿಸುತ್ತಿದ್ದಾರೆ. ಇನ್ನು ಶಾಲೆಯಲ್ಲಿ ಎಲ್ಲ ವಿಷಯಗಳಿಗೂ ಪೂರ್ಣಾವಧಿ ಶಿಕ್ಷಕರೇ ಇದ್ದಾರೆ.
ದೊಡ್ಡ ಸವಾಲು: ಸರ್ಕಾರಿ ಬಾಲಕರ ಪ್ರೌಢ ಶಾಲೆ ಕಳೆದ ಹತ್ತು ವರ್ಷಗಳ ಫಲಿತಾಂಶವೂ ಅಷ್ಟಕಷ್ಟೇ ಇದೆ. ಇಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಮಾಡಲು ಸಾಕಷ್ಟು ಪ್ರಯತ್ನಗಳು ನಡೆದಿದ್ದರೂ ಸಹ ಯಾವುದೇ ಫಲ ಇದುವರೆಗೂ ಸಿಕ್ಕಿಲ್ಲ. ಆದರೆ, ಈ ಬಾರಿ ಖುದ್ದು ಜಿಲ್ಲಾಧಿಕಾರಿಗಳೇ ದತ್ತು ಪಡೆದಿರುವುದರಿಂದ ಫಲಿತಾಂಶ ಸುಧಾರಣೆಯ ದೊಡ್ಡ ಸವಾಲು ಎದುರಾಗಿದೆ. ಜಿಲ್ಲಾಧಿಕಾರಿಗಳು ಏನೇನು ಕ್ರಮ ವಹಿಸುತ್ತಾರೆ ಎನ್ನುವ ಕುತೂಹಲವಂತೂ ಇದ್ದೆ ಇದೆ.ಜಿಲ್ಲಾದ್ಯಂತ ದತ್ತು:ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಸಕ್ತ ವರ್ಷ ಕಡಿಮೆ ಫಲಿತಾಂಶ ಇರುವ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಸರ್ಕಾರವೇ ಈ ಕುರಿತು ಸೂಚನೆ ನೀಡಿದ್ದು, ಅದರಂತೆ ಬಿಇಓಗಳು ಸೇರಿದಂತೆ ಶಿಕ್ಷಣ ಇಲಾಖೆಯ ಅನೇಕ ಅಧಿಕಾರಿಗಳು ದತ್ತು ಪಡೆದಿದ್ದಾರೆ. ಆದರೆ, ಸ್ವಯಂ ಆಸಕ್ತಿಯಿಂದ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ನಗರದ ಸರ್ಕಾರಿ ಬಾಲಕರ ಪ್ರೌಢ ಶಾಲೆ ದತ್ತು ಪಡೆದಿರುವುದು ವಿಶೇಷ.
ಈಗ ತಾನೆ ದತ್ತು ಪಡೆದಿದ್ದೇನೆ.ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಮಾಡಬೇಕು ಎನ್ನುವ ಕಾರಣಕ್ಕಾಗಿ ಈ ಶಾಲೆ ದತ್ತು ಪಡೆಯಲಾಗಿದ್ದು, ಶಾಲೆಗೆ ಭೇಟಿ ನೀಡಿ ಅಗತ್ಯ ಕ್ರಮವಹಿಸಿ ಫಲಿತಾಂಶ ಸುಧಾರಣೆಗೆ ಪ್ರಯತ್ನಿಸುತ್ತೇನೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ತಿಳಿಸಿದ್ದಾರೆ.ಕೊಪ್ಪಳ ನಗರದಲ್ಲಿರುವ ಸರ್ಕಾರಿ ಬಾಲಕರ ಪ್ರೌಢ ಶಾಲೆಯನ್ನು ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ದತ್ತು ಪಡೆದಿರುವುದು ಸಂತೋಷದ ವಿಷಯವಾಗಿದೆ. ಈಗಾಗಲೇ ಶಾಲೆಯ ಶಿಕ್ಷಕರು ಶಕ್ತಿ ಮೀರಿ ಶ್ರಮಿಸುತ್ತಿದ್ದು, ಶಾಲೆಯಿಂದ ದೂರ ಇರುವ ಮಕ್ಕಳನ್ನು ಪಾಲಕರ ಮನವೊಲಿಸಿ ಶಾಲೆಗೆ ಕರೆ ತರುತ್ತಿದ್ದೇವೆ ಎಂದು ಮುಖ್ಯೋಪಾಧ್ಯಯ ಶರಣಬಸನಗೌಡ ತಿಳಿಸಿದ್ದಾರೆ.