ಮನೆಯಿಂದಲೇ ಕನ್ನಡ ಉಳಿಸುವ ಕಾರ್ಯವಾಗಲಿ: ಸಾಹಿತಿ, ಡಾ. ಶಂಭುಲಿಂಗ ಹೆಗದಾಳ

KannadaprabhaNewsNetwork |  
Published : Dec 17, 2025, 02:15 AM IST
ಹುಬ್ಬಳ್ಳಿ ಗ್ರಾಮೀಣ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ, ಡಾ. ಶಂಭುಲಿಂಗ ಹೆಗದಾಳ ಉದ್ಘಾಟಿಸಿದರು. | Kannada Prabha

ಸಾರಾಂಶ

ವೃತ್ತಿಗೆ, ಉನ್ನತ ವ್ಯಾಸಂಗಕ್ಕೆ ಇಂಗ್ಲಿಷ್‌ ಭಾಷೆ ಅನಿವಾರ್ಯವಾಗಿದ್ದರೂ ಮಾತೃಭಾಷೆಯ ನಿರ್ಲಕ್ಷ್ಯ ಸಲ್ಲದು. ಪಾಲಕರು ಮಕ್ಕಳಿಗೆ ಕನ್ನಡ ಕಲಿಸುವ ಜತೆಗೆ ಹೆಚ್ಚು ಬಳಸಬೇಕು. ವಚನ ಸಾಹಿತ್ಯ, ಜಾನಪದ ಸಾಹಿತ್ಯದ ಮೂಲಕ ಕನ್ನಡ ಭಾಷೆ ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ಅಭಿನಂದನಾರ್ಹ.

ಹುಬ್ಬಳ್ಳಿ:

ಕನ್ನಡ ಭಾಷೆಯ ನಿರ್ಲಕ್ಷ್ಯ ಕುರಿತು ಕೇವಲ ಸರ್ಕಾರದ ಕಡೆಗೆ ಬೊಟ್ಟು ಮಾಡದೇ ಪ್ರತಿ ಮನೆಯಿಂದ ಕನ್ನಡ ಬಳಸುವ, ಮಕ್ಕಳಿಗೆ ಕಲಿಸುವ ಮೂಲಕ ಕನ್ನಡ ಉಳಿಸುವ ಕಾರ್ಯವಾಗಬೇಕೆಂದು ಹಿರಿಯ ಸಾಹಿತಿ, ಡಾ. ಶಂಭುಲಿಂಗ ಹೆಗದಾಳ ಹೇಳಿದರು.

ತಾಲೂಕಿನ ಅದರಗುಂಚಿಯ ಚನ್ನಬಸವ ಕಲ್ಯಾಣ ಮಂಟಪದ ಮಹಾಕವಿ ಕುಮಾರವ್ಯಾಸ ವೇದಿಕೆಯಲ್ಲಿ ಮಂಗಳವಾರ ನಡೆದ ಹುಬ್ಬಳ್ಳಿ ಗ್ರಾಮೀಣ ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಇಂದು ಪಾಲಕರು ಕನ್ನಡ ಭಾಷೆ ಬಿಟ್ಟು ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾಗಿದ್ದಾರೆ ಎಂದ ಅವರು, ವೃತ್ತಿಗೆ, ಉನ್ನತ ವ್ಯಾಸಂಗಕ್ಕೆ ಇಂಗ್ಲಿಷ್‌ ಭಾಷೆ ಅನಿವಾರ್ಯವಾಗಿದ್ದರೂ ಮಾತೃಭಾಷೆಯ ನಿರ್ಲಕ್ಷ್ಯ ಸಲ್ಲದು. ಪಾಲಕರು ಮಕ್ಕಳಿಗೆ ಕನ್ನಡ ಕಲಿಸುವ ಜತೆಗೆ ಹೆಚ್ಚು ಬಳಸಬೇಕು ಎಂದರು.

ವಚನ ಸಾಹಿತ್ಯ, ಜಾನಪದ ಸಾಹಿತ್ಯದ ಮೂಲಕ ಕನ್ನಡ ಭಾಷೆ ಉಳಿಸಿ, ಬೆಳೆಸಿಕೊಂಡು ಹೋಗುತ್ತಿರುವುದು ಅಭಿನಂದನಾರ್ಹ. ಈ ಕಾರ್ಯವು ಮುಂದೆಯೂ ಸಾಗಬೇಕಿದೆ ಎಂದು ಸಲಹೆ ನೀಡಿದರು.

ಸಮ್ಮೇಳನದ ಸರ್ವಾಧ್ಯಕ್ಷ ಮೋಹನ ಮಿಸ್ಕಿನ್‌ ಮಾತನಾಡಿ, ಕನ್ನಡ ಭಾಷೆಯ ಉಳಿವಿಗೆ ಪ್ರತಿಯೊಬ್ಬರು ಕಂಕಣಬದ್ಧರಾಗಬೇಕು. ಗ್ರಾಮೀಣ ಭಾಗದಲ್ಲಿ ಕನ್ನಡ ಸಾಹಿತ್ಯ ಕ್ರಾಂತಿ ಆಗಬೇಕಿದ್ದು ತಾಲೂಕಿನ ಗ್ರಾಮೀಣ ಭಾಗದಲ್ಲಿ ಸಾಹಿತ್ಯ ಭವನ ನಿರ್ಮಿಸುವ ಜತೆಗೆ ಕರ್ನಾಟಕ ಏಕೀಕರಣದ ಹೋರಾಟಗಾರ ಅದರಗುಂಚಿ ಶಂಕರಗೌಡರ ಪ್ರತಿಮೆ ಸ್ಥಾಪಿಸಬೇಕೆಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಸುಧಾರಣೆಗೆ ಅನುದಾನ ನೀಡದೆ ಕುಂಟು ನೆಪ ಮುಂದಿಟ್ಟುಕೊಂಡು 7000 ಸರ್ಕಾರಿ ಶಾಲೆ ಬಂದ್‌ ಮಾಡುವ ಹುನ್ನಾರ ನಡೆಯುತ್ತಿದ್ದು ಇದರಿಂದ ಹಿಂದೇ ಸರಿಯಬೇಕು ಎಂದು ಒತ್ತಾಯಿಸಿರುವ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನೇಮಕಾತಿಯಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಬೇಕು ಎಂದರು.

ಸಾನ್ನಿಧ್ಯ ವಹಿಸಿದ್ದ ಮಣಕವಾಡ ದೇವಮಂದಿರದ ಅಭಿನಯ ಮೃತ್ಯುಂಜಯ ಶ್ರೀ, ಇಂದು ಕನ್ನಡಕ್ಕಿಂತ ಇಂಗ್ಲಿಷ್‌ ಭಾಷಾ ವ್ಯಾಮೋಹ ಹೆಚ್ಚಾಗಿದ್ದು ಇದು ನಿಲ್ಲಬೇಕು. ನಾವೆಲ್ಲರೂ ನವೆಂಬರ್‌ 1ರ ಕನ್ನಡಿಗರಾಗದೆ ನಂ.1 ಕನ್ನಡಿಗರಾಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ನಿವೃತ್ತ ಶಿಕ್ಷಕ ಎಫ್‌.ಎಸ್‌. ಅಂಚಿ ಸೇರಿದಂತೆ ಹಲವರು ಮಾತನಾಡಿದರು. ವೇದಮೂರ್ತಿ ಶಿವರುದ್ರಯ್ಯ ಹಿರೇಮಠ, ಡಾ. ರಾಮು ಮೂಲಗಿ, ಸಣ್ಣಕ್ಕಿ ಲಕ್ಷ್ಮಣ, ಪ್ರಕಾಶ ಬೆಂಡಿಗೇರಿ, ಎಸ್‌.ಎಸ್‌. ಪಾಟೀಲ, ರತ್ನವ್ವ ಕಳ್ಳಿಮನಿ, ಸಿ.ಜಿ. ಪಾಟೀಲ, ಅಲ್ಲಿಸಾಬ್‌ ಮಂಟಗಣಿ, ಜಿ.ವಿ. ಕಳ್ಳಿಮನಿ ಸೇರಿದಂತೆ ಹಲವರಿದ್ದರು.

ಗ್ರಾಪಂ ಅಧ್ಯಕ್ಷೆ ಮೇರುನಬಿ ನದಾಫ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ನಾಡಧ್ವಜ, ಕಸಾಪ ಗ್ರಾಮೀಣ ಘಟಕದ ತಾಲೂಕು ಅಧ್ಯಕ್ಷ ರಮೇಶಗೌಡ ಭರಮಗೌಡ ಪರಿಷತ್‌ ಧ್ವಜಾರೋಹಣ ನೆರವೇರಿಸಿದರು.

ಕಾರ್ಯಕ್ರಮದ ಬಳಿಕ ನಡೆದ ಗೋಷ್ಠಿಯಲ್ಲಿ "ರೈತರ ಬದುಕು ಮತ್ತು ಸವಾಲುಗಳು " ಕುರಿತು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಆರ್‌.ಬಿ. ಹಿರೇಮಠ, "ಕರ್ನಾಟಕ ಏಕೀಕರಣದಲ್ಲಿ ಅದರಗುಂಚಿ ಶಂಕರಗೌಡ್ರು " ಕುರಿತು ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರೊ. ಕೆ.ಎಸ್‌. ಕೌಜಲಗಿ ಉಪನ್ಯಾಸ ನೀಡಿದರು. ನಂತರ ಹಲವು ಕವಿಗಳಿಂದ ಕವಿಗೋಷ್ಠಿ ನೆರವೇರಿತು.

ಅದ್ಧೂರಿ ಮೆರವಣಿಗೆ:

ಗ್ರಾಮದ ಚನ್ನಬಸವ ಕಲ್ಯಾಣ ಮಂಟಪದಿಂದ ತಾಯಿ ಭುವನೇಶ್ವರಿ, ಅದರಗುಂಚಿ ಶಂಕರಗೌಡ್ರ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಮೋಹನ ಮಿಸ್ಕಿನ್‌ ಅವರ ಮೆರವಣಿಗೆಗೆ ಗ್ರಾಪಂ ಸದಸ್ಯರ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕಳ್ಳಿಮನಿ ಚಾಲನೆ ನೀಡಿದರು. ಬಳಿಕ ಗ್ರಾಮದಲ್ಲಿ ಅದ್ಧೂರಿ ಮೆರವಣಿಗೆಯಲ್ಲಿ ನೂರಾರು ಮಹಿಳೆಯರು ಕುಂಭಹೊತ್ತು ಸಾಗಿದರೆ, ಕಲವು ಕಲಾತಂಡಗಳು ಪಾಲ್ಗೊಂಡು ಗಮನ ಸೆಳೆದವು.

ಜಿಲ್ಲಾಧ್ಯಕ್ಷರ ವಿರುದ್ಧ ಆಕ್ರೋಶ

ತಾಲೂಕು ಸಾಹಿತ್ಯ ಸಮ್ಮೇಳನವು ಜಿಲ್ಲಾಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯುವುದು ಸರ್ವೇ ಸಾಮಾನ್ಯ. ಆದರೆ, ಮಂಗಳವಾರ ನಡೆದ ಹುಬ್ಬಳ್ಳಿ ಗ್ರಾಮೀಣ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಜಿಲ್ಲಾಧ್ಯಕ್ಷರ ಅನುಪಸ್ಥಿತಿಯಲ್ಲಿ ನಡೆಯಿತು. ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಬೆಳಗ್ಗೆ ನಾಡಧ್ವಜಾರೋಹಣದಲ್ಲಿ ಮಾತ್ರ ಪಾಲ್ಗೊಂಡು ಅಲ್ಲಿಂದ ನಿರ್ಗಮಿಸಿದರು. ಬಳಿಕ ನಡೆದ ಸಮ್ಮೇಳನ ಅಧ್ಯಕ್ಷರ ಮೆರವಣಿಗೆ, ಉದ್ಘಾಟನೆ, ಗೋಷ್ಠಿಯಲ್ಲಿ ಎಲ್ಲಿ ಕಂಡುಬರದಿರುವುದು ತಾಲೂಕು ಸಾಹಿತಿಗಳ, ಕನ್ನಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!