ಕನ್ನಡಪ್ರಭ ವಾರ್ತೆ ಮದ್ದೂರು
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಾಚಾ ಏನಲ್ಲಾ. ಮುಂದೆ ಅವರೂ ಸಹ ಪ್ರಜ್ವಲ್ ಮತ್ತು ರೇವಣ್ಣನ ರೀತಿ ಪರಿಸ್ಥಿತಿ ಎದುರಿಸಲಿದ್ದಾರೆ. ಕುಮಾರಸ್ವಾಮಿ ಜೀವನದುದ್ದಕ್ಕೂ ಬ್ಲಾಕ್‌ಮೇಲ್, ಅಪಪ್ರಚಾರ ಮಾಡಿಕೊಂಡೇ ಬಂದಿದ್ದಾರೆ. ಬೇರೆಯವರನ್ನು ಮುಳುಗಿಸಿದ್ದೇ ಕುಮಾರಸ್ವಾಮಿ ಸಾಧನೆ. ಜೆಡಿಎಸ್ ಕಾರ್ಯಕರ್ತರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಶಾಸಕ ಉದಯ್ ಸಲಹೆ ನೀಡಿದರು.ತಾಲೂಕಿನ ಕದಲೂರು ಗ್ರಾಮದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಯಾರೂ ಅವರ ವಿರುದ್ಧ ದೂರು ಕೊಡಲು ಧೈರ್ಯ ಮಾಡಿರಲಿಲ್ಲ, ಈ ರೀತಿ ಬಹಳಷ್ಟು ನಡೆದಿರಬಹುದು. ಯಾರಾದರೂ ದೂರು ಕೊಟ್ಟರೆ ಸರ್ಕಾರ ತನಿಖೆ ಮಾಡುತ್ತದೆ. ಪೆನ್‌ಡ್ರೈವ್ ಪ್ರಕರಣದ ಬಳಿಕ ಕುಮಾರಸ್ವಾಮಿ ವಿರುದ್ಧವೂ ದೂರು ಕೊಡಲು ಧೈರ್ಯ ಮಾಡಲಿದ್ದಾರೆ ಎಂದು ಹೇಳಿದರು.
ಜೆಡಿಎಸ್ ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಮಾಡುತ್ತಿದೆ. ಬಹಳಷ್ಟು ಜನ ಹೆಣ್ಣು ಮಕ್ಕಳಿಗೆ ಅನ್ಯಾಯವಾಗಿದೆ. ಯಾವ ಘನ ಕಾರ್ಯ ಮಾಡುತ್ತಿದ್ದಾರೆ ಎಂದು ಪ್ರೊಟೆಸ್ಟ್ ಮಾಡುತ್ತಿದ್ದಾರೋ ತಿಳಿಯದು ಎಂದು ಟೀಕಿಸಿದರು.ಪ್ರಜ್ವಲ್ ರೇವಣ್ಣನೇ ವೀಡಿಯೋ ಮಾಡಿಕೊಂಡಿದ್ದ. ಸಂತ್ರಸ್ತೆಯರ ಪರ ಯಾವ ಜೆಡಿಎಸ್ ನಾಯಕರೂ ಧ್ವನಿ ಎತ್ತಿಲ್ಲ. ಅವರಿಗೆ ಧೈರ್ಯ ಹೇಳಿ, ಸಾಂತ್ವನ ಹೇಳುವ ಕೆಲಸವನ್ನೂ ಮಾಡಲಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ನೀಚ ಸರ್ಕಾರ ಎಂದು ಜೆಡಿಎಸ್‌ನವರು ಹೇಳುತ್ತಾರೆ. ಬಡವರಿಗೆ ಯೋಜನೆ ಕೊಟ್ಟ ಸರ್ಕಾರ ನೀಚ ಸರ್ಕಾರವೇ? ಎಂದು ಪ್ರಶ್ನಿಸಿದರು. ಜೆಡಿಎಸ್ ನವರು ಗ್ರಾಮ ಪಂಚಾಯ್ತಿಯಿಂದ ವಿಧಾನಸೌಧದವರೆಗೂ ದಬ್ಬಾಳಿಕೆ ಮಾಡಿಕೊಂಡೇ ಬಂದಿದ್ದಾರೆ ಎಂದು ಕಿಡಿಕಾರಿದರು.ಜೆಡಿಎಸ್ ಒಂದು ಕುಟುಂಬಕ್ಕೆ ಸೀಮಿತವಾದ ಪಕ್ಷ. ಇದು ಒಂದು ಕುಟುಂಬಕ್ಕೆ ಸೇರಿದ ವಿಚಾರ. ಕುಮಾರಸ್ವಾಮಿ ಜನರ ಮುಂದೆ ಕ್ಷಮೆ ಕೇಳಬೇಕು. ಆದರೆ ಕಾರ್ಯಕರ್ತರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕೆಳಗಿಳಿಸಿ ಕುಮಾರಸ್ವಾಮಿ ಪಕ್ಷದ ಅಧ್ಯಕ್ಷರಾಗಬೇಕಿತ್ತಾ? ಇನ್ಯಾರೂ ಪಕ್ಷದಲ್ಲಿ ಕಾರ್ಯಕರ್ತರು, ಮುಖಂಡರು ಇರಲಿಲ್ಲವೇ? ಸರ್ಕಾರಿ ಅಧಿಕಾರಿಗಳು, ನಿಮ್ಮದೇ ಪಕ್ಷದ ಮಹಿಳೆಯರ ಮಾನ ಹರಾಜಾಗಿದೆ. ಅವರ ಮನೆಗೆ ಹೋಗಿ ಕ್ಷಮೆ ಕೇಳಿ ಎಂದು ಸವಾಲು ಹಾಕಿದರು.ನಮ್ಮ ಬಳಿ ಪೆನ್‌ಡ್ರೈವ್ ಇದ್ದಿದ್ದರೆ ಚುನಾವಣೆಗೆ ಮುನ್ನ ಹಂಚಿ ಇವರು ತಲೆ ಎತ್ತದ ಹಾಗೆ ಮಾಡುತ್ತಿದ್ದೆವು. ಇಡೀ ಪ್ರಕರಣವನ್ನು ಹೇಗಾದ್ರೂ ಮಾಡಿ ಮೂಲೆಗುಂಪು ಮಾಡಬಹುದು ಎಂದುಕೊಂಡು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ಧಿಗೋಷ್ಠಿಯಲ್ಲಿ ಮನ್ಮುಲ್ ನಿರ್ದೇಶಕ ಕುಮಾರ, ಗ್ರಾಪಂ ಸದಸ್ಯ ತಿಮ್ಮೇಗೌಡ ಇದ್ದರು.