ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದಲ್ಲಿರುವ ಶ್ರೀವಿಶ್ವಮಂಗಳ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಸೆ.೮ರಂದು ಬೆಳಗ್ಗೆ ೭.೪೫ ರಿಂದ ೮.೩೦ರವರೆಗೆ ಕುಂಭಾಭಿಷೇಕ ನಡೆಯಲಿದೆ ಎಂದು ದೇವಾಲಯದ ವ್ಯವಸ್ಥಾಪಕ ಸಂತೋಷ್ ಆಚಾರ್ ಹೇಳಿದರು.ಸೆ.೪ ರ ಸಂಜೆ ೫ ಗಂಟೆಗೆ ಅಂಕುರಾರ್ಪಣೆ ಮತ್ತು ರಕ್ಷಾಬಂಧನ, ಸೆ.೫ರಿಂದ ೭ರವರೆಗೆ ಬೆಳಗ್ಗೆ ೮ ರಿಂದ ೧೨ರವರೆಗೆ ಬೆಳಗ್ಗೆ ೮ ರಿಂದ ೧೨ ಗಂಟೆಯವರೆಗೆ ಮತ್ತು ಸಂಜೆ ೫ ರಿಂದ ೮ರವರೆಗೆ ಯಾಗಶಾಲಾ ಪೂಜಾ ಹೋಮ ಮತ್ತು ಇತರೆ ಪೂಜಾ ವಿಧಿವಿಧಾನಗಳು ನಡೆಯಲಿವೆ. ಸೆ.೮ರಂದು ಬೆಳಗ್ಗೆ ೭.೪೫ ರಿಂದ ೮.೩೦ರವರೆಗೆ ಮಹಾಸಂಪ್ರೋಕ್ಷಣೆ ಜರುಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.೧೪ರಂದು ಬೆಳಗ್ಗೆ ೧೧ ರಿಂದ ಮಧ್ಯಾಹ್ನ ೧.೩೦ರವರೆಗೆ ಉತ್ತಮ ಸೇವಾ ಪ್ರಶಸ್ತಿ ಪ್ರದಾನ ಮತ್ತು ಸನಾತನ ಧರ್ಮ ಮತ್ತು ಭಾರತದ ಸಂಸ್ಕೃತಿ, ಪರಂಪರೆಯನ್ನು ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಕೊಡುಗೆ ನೀಡಿದ ವಿಶಿಷ್ಟ ವ್ಯಕ್ತಿಗಳನ್ನು ಗೌರವಿಸಲಾಗುವುದು ಎಂದು ಹೇಳಿದರು.ದೇವಾಲಯದ ವೈಶಿಷ್ಟ್ಯ:
೩೨ ಅಕ್ಷರಗಳಿಂದ ಕೂಡಿದ ನರಸಿಂಹ ಮಹಾಮಂಝತ್ರದಿಂದ ಆಗಮರೀತ್ಯ ಯಂತ್ರ, ಮಂತ್ರಶಕ್ತಿಯಿಂದ ಅಭಿಮಂತ್ರಿತಗೊಂಡು ಅನುಷ್ಪುಪ್ ಮಂತ್ರವನ್ನು ಪ್ರತಿನಿಧಿಸುವ ಸುಂದರವಾದ ೩೨ ಶಿಲಾಕಂಬಗಳಿಂದ ಕೂಡಿದ ಮಹಾಮಂಟಪವು ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಭಕ್ತರನ್ನು ಆಕರ್ಷಿಸುತ್ತಿದೆ. ೩೨ ಶಿಲಾಕಂಬಗಳಲ್ಲಿ ಶ್ರೀ ನರಸಿಂಹಸ್ವಾಮಿಯನ್ನು ನಾನಾ ಶ್ಲೋಕಗಳಲ್ಲಿ ವರ್ಣಿಸಿದಂತೆ ವಿವಿಧ ಭಂಗಿಯ ೫೦ ಪಂಚಲೋಹ ವಿಗ್ರಹಗಳು, ೨೪ ಶಿಲಾವಿಗ್ರಹಗಳು ಸೇರಿ ಒಟ್ಟು ೭೪ ನರಸಿಂಹಮೂರ್ತಿಯ ಸುಂದರವಾದ ವಿಗ್ರಹಗಳು ಮಹಾಮಂಟಪವನ್ನು ಅಲಂಕರಿಸಿವೆ ಎಂದರು.ಶ್ರೀನರಸಿಂಹ ಹಾಗೂ ಶ್ರೀಸುದರ್ಶನ ದೇವರ ಬೃಹದಾಕಾರದ ಲೋಹದ ವಿಗ್ರಹಗಳು, ಶ್ರೀ ಮಹಾವಿಷ್ಣುವಿನ ಏಳು ಬೃಹದಾಕಾರದ ವಿವಿಧ ಅವತಾರಗಳ ಶಿಲಾವಿಗ್ರಹಗಳನ್ನು ಮಹಾಮಂಟಪವು ಒಳಗೊಂಡಿದೆ. ಭಾರತ ದೇಶದಲ್ಲೇ ಅನನ್ಯವೂ, ಅನುಪಮವೂ ಎಂಬಂತೆ ದೇವಾಲಯದ ಆವರಣದ ಕೋಷ್ಟಗಳಲ್ಲಿ ಆಕರ್ಷಣೀಯವಾದ ನಾನಾ ಬಣ್ಣಗಳಿಂದ ಆವೃತವಾದ ದೇಶಶದ ನಾನಾ ಕ್ಷೇತ್ರಗಳನ್ನು ಪ್ರತಿನಿಧಿಸುವ ಮಹಾವಿಷ್ಣುವಿನ ೩೮೧ ಮಾದರಿಯ ವಿಗ್ರಹಗಳನ್ನು ಕಾಣಬಹುದು ಎಂದು ನುಡಿದರು.
ಶ್ರೀರಾಮ ಪಟ್ಟಾಭಿಷೇಕ ಹಾಗೂ ಅಷ್ಟಮಹಿಷಿಯರೊಂದಿಗೆ ಶ್ರೀಕೃಷ್ಣನ ಶಿಲಾವಿಗ್ರಹಗಳನ್ನು ನಿರ್ಮಿಸಲಾಗಿದೆ. ಶ್ರೀರಾಮಾನುಜಾಚಾರ್ಯರು ಪ್ರಚುರಪಡಿಸಿದ ಶ್ರೀ ವೈಷ್ಣವ ಗುರುಪರಂಪರೆಯನ್ನು ಪ್ರದರ್ಶಿಸಲಾಗಿದೆ ಎಂದರು.