ಲಕ್ಷ್ಮೇಶ್ವರ: ಶಿಕ್ಷಕರು ಮೊದಲು ತಮ್ಮ ಜ್ಞಾನ ಭಂಡಾರ ಹೆಚ್ಚಿಸಿಕೊಳ್ಳುವ ಕಾರ್ಯ ಮಾಡಬೇಕು. ಬಹು ಸಂಖ್ಯಾತ ಶಿಕ್ಷಕರು ವ್ಯಾಕರಣದಲ್ಲಿ ಬಹಳ ಹಿಂದೆ ಉಳಿದಿದ್ದಾರೆ, ಅಲ್ಪಪ್ರಾಣ ಮತ್ತು ಮಹಾಪ್ರಾಣಗಳ ಜ್ಞಾನದ ಕೊರತೆ ಕಂಡು ಬರುತ್ತದೆ ಎಂದು ಫಕ್ಕೀರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.
ಶಿಕ್ಷಕರು ಸತತ ಅಧ್ಯಯನ ಮಾಡುವ ಮೂಲಕ ತಮ್ಮ ಜ್ಞಾನ ಭಂಡಾರ ವೃದ್ಧಿಸಿಕೊಳ್ಳಬೇಕು. ಶಿಕ್ಷಕರು ವ್ಯಾಕರಣದ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಶಿಕ್ಷಕರು ತಮ್ಮ ಆತ್ಮಸಾಕ್ಷಿ ಅರಿತು ಶಿಕ್ಷಣ ನೀಡುವ ಕಾರ್ಯ ಮಾಡಬೇಕು. ಜಗತ್ತಿನ ನಿರ್ಮಾತೃಗಳಾಗಿರುವ ಶಿಕ್ಷಕರು ಉತ್ತಮ ಪ್ರಜೆ ರೂಪಿಸುವ ಕಾರ್ಯ ಮಾಡಬೇಕು, ಸರ್ಕಾರದ ಶಾಲೆಗಳಲ್ಲಿ ಎಲ್ಲ ರೀತಿಯ ಸೌಲಭ್ಯ ಸಿಗುತ್ತಿದ್ದು, ಆ ಗ್ರಾಮದಲ್ಲಿನ ವಿದ್ಯಾರ್ಥಿಗಳು ರಾಧಾಕೃಷ್ಣನ್ ಅವರಂತ ವ್ಯಕ್ತಿಗಳನ್ನು ಶಿಕ್ಷಕರು ನಿರ್ಮಾಣ ಮಾಡಬೇಕು. ಆದರ್ಶ ಸಮಾಜ ಹಾಗೂ ವ್ಯಕ್ತಿಗಳ ನಿರ್ಮಾಣ ಮಾಡುವ ಕಾರ್ಯ ಶಿಕ್ಷಕರಿಂದ ಆಗಲಿ ಎಂದು ಹೇಳಿದರು.
ಈ ವೇಳೆ ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಶಿಕ್ಷಕರು ಉತ್ತಮ ಸಮಾಜ ನಿರ್ಮಾಣ ಮಾಡುವ ಕಾರ್ಯದಲ್ಲಿ ಮುಂದಾಗುವ ಮೂಲಕ ದೇಶದ ಭವಿಷ್ಯಕ್ಕೆ ತಮ್ಮ ಅಮೂಲ್ಯ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳ ಭವಿಷ್ಯ ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ಶಿಕ್ಷಕರು ತೊಡಗಿಕೊಳ್ಳಬೇಕು ಎಂದು ಹೇಳಿದರು.ಸಮಾರಂಭದಲ್ಲಿ ನಿವೃತ್ತ ಉಪನ್ಯಾಸಕ ಆರ್.ಎಲ್. ಪೊಲೀಸ ಪಾಟೀಲ ಉಪನ್ಯಾಸ ನೀಡಿದರು. ಬಿಇಓ ಎಚ್. ನಾಣಕೀ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.ತಹಸೀಲ್ದಾರ್ ವಾಸುದೇವ ಸ್ವಾಮಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.