ಕನ್ನಡಪ್ರಭ ವಾರ್ತೆ ಕುಂದಾಪುರ
ಕಿವಿಗೆ ಸಂಬಂಧಪಟ್ಟಂತೆ ಶಿಬಿರಗಳು ಆಗುವುದು ಅಪರೂಪ. ಶ್ರವಣ ತಪಾಸಣೆಯ ಸೌಲಭ್ಯವನ್ನು ಅವಶ್ಯಕತೆ ಇರುವ ಫಲಾನುಭವಿಗಳು ಪಡೆದುಕೊಳ್ಳಬೇಕು. ಈಶ್ವರ ಮಲ್ಪೆ ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡಿದ್ದು, ಅವರ ಸೇವಾಧರ್ಮ ಅನುಕರಣೀಯ ಎಂದು ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಅನುವಂಶಿಕ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಹೇಳಿದರು.ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಟೀಮ್ ಈಶ್ವರ ಮಲ್ಪೆ ಸಹಯೋಗದೊಂದಿಗೆ ಮಂಗಳವಾರ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಸಭಾಭವನದಲ್ಲಿ ಜರುಗಿದ ಕಿವಿಯ ಶ್ರವಣ ಉಚಿತ ತಪಾಸಣೆ ಹಾಗೂ ರಿಯಾಯಿತಿ ದರದಲ್ಲಿ ಶ್ರವಣ ಯಂತ್ರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಮಾಜ ಸೇವಕ ಈಶ್ವರ ಮಲ್ಪೆ ಮಾತನಾಡಿ, ಕಿವಿಯ ಉಚಿತ ತಪಾಸಣೆ ಹಾಗೂ ರಿಯಾಯತಿ ದರದಲ್ಲಿ ಶ್ರವಣ ಸಾಧನಗಳನ್ನು ನೀಡುವ ಕಾರ್ಯಕ್ರಮ ಗ್ರಾಮಾಂತರ ಪ್ರದೇಶದ ಜನರಿಗೆ ಅನುಕೂಲವಾಗುತ್ತದೆ. ಆನೆಗುಡ್ಡೆ ದೇವಸ್ಥಾನ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ನಾವು ಜೊತೆಯಾಗಿರುವುದು ಸಂತಸ ತಂದಿದೆ ಎಂದರು.ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ನಾಗರಾಜ ರಾಯಪ್ಪನ ಮಠ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್. ಬೀಜಾಡಿ, ಕೋಶಾಧಿಕಾರಿ ಲೋಕೇಶ್ ಆಚಾರ್, ಉಡುಪಿಯ ವಿಘ್ನಹರ್ತ ಸಂಸ್ಥೆಯ ಡಾ.ಅಂಕಿತಾ, ಈಶ್ವರ ಮಲ್ಪೆ ಟೀಮ್ ಸಂಚಾಲಕ ಲವ ಬಂಗೇರ, ಕುಂಭಾಸಿ ಗ್ರಾಪಂ ಸದಸ್ಯೆ ರಾಧಾದಾಸ್, ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ವ್ಯವಸ್ಥಾಪಕ ನಟೇಶ್ ಕಾರಂತ್, ಪತ್ರಕರ್ತರ ಸಂಘ ಹಾಗೂ ಈಶ್ವರ ಮಲ್ಪೆ ಟೀಮ್ ನ ಸದ್ಯಸರು ಉಪಸ್ಥಿತರಿದ್ದರು.ಈ ಸಂದರ್ಭ ಕುಂಭಾಸಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ ಹಾಗೂ ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಮಾಜ ಸೇವಕ ಈಶ್ವರ ಮಲ್ಪೆ ಇವರನ್ನು ಸನ್ಮಾನಿಸಲಾಯಿತು. 33 ಮಂದಿಗೆ ಶ್ರವಣದ ಪರೀಕ್ಷೆಗಳಾಗಿದ್ದು, 8 ಮಂದಿ ಫಲನುಭವಿಗಳು ಶ್ರವಣ ಸಾಧನದ ಪ್ರಯೋಜನ ಪಡೆದುಕೊಂಡರು.ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್. ಬೀಜಾಡಿ ಸ್ವಾಗತಿಸಿದರು. ಈಶ್ವರ ಮಲ್ಪೆ ಟೀಮ್ ಸಂಚಾಲಕ ಲವ ಬಂಗೇರ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಪ್ರಶಾಂತ್ ಪಾದೆ ವಂದಿಸಿದರು.