ಕುಂಬಳೆ ಶ್ರೀಧರ ರಾವ್‌ ಪಾತ್ರ ಕಿರಿಯರಿಗೆ ಪಠ್ಯಸದೃಶ: ನಾ.ಕಾರಂತ

KannadaprabhaNewsNetwork | Published : Oct 29, 2024 1:08 AM

ಸಾರಾಂಶ

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಆಯೋಜನೆಯಲ್ಲಿ ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಜರುಗಿದ ‘ಹಿರಿಯರ ನೆನಪು’ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಕುಂಬಳೆ ಶ್ರೀಧರ ರಾವ್ ಕಲಾಯಾನ ನೆನಪು ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ಯಕ್ಷಗಾನದ ಸ್ತ್ರೀಪಾತ್ರಗಳ ಅಭಿವ್ಯಕ್ತಿಗೆ ರಸಗಳೇ ಪ್ರಧಾನ. ಕಲಾವಿದನಿಗೆ ರಸಗಳ ಪರಿಚಯವಿದ್ದರೆ ಪಾತ್ರ ನಿರ್ವಹಣೆ ಕಷ್ಟವಲ್ಲ. ಇದರಿಂದ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿ ನಿರ್ವಹಿಸಿದ ಪಾತ್ರಗಳಿಗೆ ನ್ಯಾಯ ಸಲ್ಲಿಸಲು ಸಾಧ್ಯವಾಗುತ್ತದೆ. ಕುಂಬಳೆ ಶ್ರೀಧರ ರಾಯರ ಪಾತ್ರಗಳಲ್ಲಿ ಪಾತ್ರವು ಬಯಸುವ ರಸಾಭಿವ್ಯಕ್ತಿ ತುಂಬಾ ಸಶಕ್ತವಾಗಿ ಎದ್ದುಕಾಣುತ್ತಿತ್ತು. ಅವರು ಕಡೆದ ಪಾತ್ರಗಳೆಲ್ಲವೂ ಕಿರಿಯರಿಗೆ ಪಠ್ಯವಿದ್ದಂತೆ ಎಂದು ಕಲಾವಿದ, ಲೇಖಕ ನಾ. ಕಾರಂತ ಪೆರಾಜೆ ಹೇಳಿದ್ದಾರೆ.

ಕಲ್ಲಡ್ಕ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಜರುಗಿದ ‘ಹಿರಿಯರ ನೆನಪು’ ಕಾರ್ಯಕ್ರಮದಲ್ಲಿ ಕೀರ್ತಿಶೇಷ ಕುಂಬಳೆ ಶ್ರೀಧರ ರಾವ್ ಕಲಾಯಾನ ನೆನಪು ಮಾಡಿಕೊಳ್ಳುತ್ತಾ, ಆಧುನಿಕ ತಂತ್ರಜ್ಞಾನದ ಈ ಕಾಲಘಟ್ಟದಲ್ಲಿ ಕಲಾವಿದರ ಬದುಕನ್ನು ದಾಖಲಿಸುವುದು ಕಷ್ಟವೇನಲ್ಲ. ಪ್ರಯತ್ನ ಬೇಕಷ್ಟೇ ಎಂದರು.

ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಹಾಗೂ ವಿಶ್ವಭಾರತಿ ಯಕ್ಷಸಂಜೀವಿನಿ ಟ್ರಸ್ಟ್ ಮುಡಿಪು ಆಯೋಜನೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಅಧ್ಯಕ್ಷ ಈಶ್ವರ ಭಟ್ ರಾಕೋಡಿ ಉದ್ಘಾಟಿಸಿದರು.

ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕೃಷ್ಣಪ್ಪ ಕಿನ್ಯ ಮಾತನಾಡಿ, ಕಲಾವಿದರ ಕಲಾ ಸಾಧನೆ ನೆನಪಿಸಿಕೊಳ್ಳುವುದು, ಹಿರಿಯರು ಹಾಕಿಕೊಟ್ಟ ಸಂಪ್ರದಾಯಕ್ಕೆ ಗೌರವ ನೀಡುವುದು ಶಿಷ್ಟ ಕಲಾ ಸಮಾಜದ ಜವಾಬ್ದಾರಿ ಎಂದರು.

ಅರ್ಥದಾರಿ ಗುಂಡ್ಯಡ್ಕ ಈಶ್ವರ ಭಟ್ ಮತ್ತು ಮಜಿಬೈಲು ವಿಷ್ಣು ಯಕ್ಷ ಬಳಗದ ಸಂಚಾಲಕ ಹರೀಶ ನಾವಡ ಮಾತನಾಡಿದರು. ವಿಶ್ವಭಾರತಿ ಯಕ್ಷಸಂಜೀವನಿ ಟ್ರಸ್ಟಿನ ಮುಖ್ಯಸ್ಥ ಪ್ರಶಾಂತ ಹೊಳ್ಳ ಸ್ವಾಗತಿಸಿ, ವಂದಿಸಿದರು.

ಯಕ್ಷಸಂಜೀವಿನಿ ಸದಸ್ಯರಿಂದ ‘ದಕ್ಷಾಧ್ವರ’ ತಾಳಮದ್ದಳೆ ಸಂಪನ್ನಗೊಂಡಿತು. ಬಟ್ಯಮೂಲೆ ಲಕ್ಷೀನಾರಾಯಣ ಭಟ್, ರಾಮಮೂರ್ತಿ ಕುದ್ರೆಕೂಡ್ಲು, ಕೃಷ್ಣ ಚೈತನ್ಯ ಚೇರಾಲು, ಗೌತಮ ನಾವಡ ಮಜಿಬೈಲು ಹಿಮ್ಮೇಳದಲ್ಲಿ, ಗುಂಡ್ಯಡ್ಕ ಈಶ್ವರ ಭಟ್, ನಾ. ಕಾರಂತ ಪೆರಾಜೆ, ಪ್ರಶಾಂತ ಹೊಳ್ಳ, ಹರೀಶ ನಾವಡ, ಪ್ರೇಮಕಿಶೋರ್, ಕುಶಲ ಮುಡಿಪು ಅರ್ಥದಾರಿಗಳಾಗಿ ಭಾಗವಹಿಸಿದರು.

Share this article