ಮಂಗಳೂರು: ಆಧುನಿಕ ಜೀವನ ಶೈಲಿಯಲ್ಲಿ ಗ್ಯಾಸ್ ಒಲೆ, ಸೌರ ಒಲೆ ಹಾಗೂ ವಿದ್ಯುತ್ ಒಲೆಗೆ ಒಗ್ಗಿಕೊಂಡಿರುವ ಇಂದಿನ ದಿನಮಾನದಲ್ಲಿ ಹಳೆ ತಲೆಮಾರಿನ ಸೌದೆ ಒಲೆಯನ್ನು ಮತ್ತೊಮ್ಮೆ ಬಳಸುವ ಮೂಲಕ ಅಡುಗೆ ಮಾಡುವ ಸಿದ್ಧತೆಯಲ್ಲಿದ್ದಾರೆ... ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ..!ಪ್ರಸ್ತುತ ದಿನಗಳಲ್ಲಿ ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಗ್ಯಾಸ್ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ‘ಬೆಂಕಿ ಬೀಳುವ ಮೊದಲೇ ಬಾವಿ ತೋಡುವುದು ಒಳಿತು’ ಎನ್ನುವ ಗಾದೆಯ ಮಾತಿನಂತೆ, ಸಾಧ್ಯತೆ ಹೊಂದಿರುವವರು ತಮ್ಮ ಪರಿಸರದಲ್ಲಿ ಲಭಿಸುವ ಉರುವಲನ್ನು ಬಳಸಿಕೊಂಡು ಒಲೆಯಲ್ಲೇ ಅಡುಗೆಯನ್ನು ತಯಾರಿಸುವುದು ಹೆಚ್ಚು ಸೂಕ್ತ ಎಂಬುದು ಕಲ್ಕೂರ ಅವರ ಅಭಿಮತವಾಗಿದೆ.ಈಗಾಗಲೇ ಕೊರೋನಾ ಹಾವಳಿಯ ಬಳಿಕ ತನ್ನ ಮನೆ ತೋಟದಲ್ಲೇ ಬೆಳೆದ ಬಾಳೆ ಎಲೆಯಲ್ಲಿ ಉಣ್ಣುತ್ತಿರುವ ಕಲ್ಕೂರರು ಇಂದಿನ ವರೆಗೂ ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ,

ಕಲ್ಕೂರರವರು ಇದೀಗ ತಮ್ಮ ಮನೆಯಲ್ಲಿ ಒಲೆ ಸಹಿತವಾದ ಹೊಸ ಮಣ್ಣಿನ ಒಲೆಯೊಂದನ್ನು ಜೊತೆಗೆ ಇದ್ದಿಲಿನ ಒಲೆಯನ್ನೂ ಇಟ್ಟಿಗೆಯ ಪೀಠದ ಮೇಲೆ ಸಿದ್ಧಗೊಳಿಸುತ್ತಿದ್ದಾರೆ.

ಹಳೆ ತಲೆಮಾರಿನ ಸಾಂಪ್ರದಾಯಿಕ ಒಲೆಯಲ್ಲಿ ಸಿದ್ಧಪಡಿಸಿದ ಅಡುಗೆಯನ್ನು ಮನೆಯಲ್ಲೇ ಬೆಳೆದ ಬಾಳೆ ಎಲೆಯಲ್ಲಿ ಊಟ ಮಾಡುವ ಪದ್ಧತಿಯನ್ನು ಮತ್ತೊಮ್ಮೆ ಮುನ್ನೆಲೆಗೆ ತರುವಲ್ಲಿ ಪ್ರದೀಪ ಕಲ್ಕೂರರು ಶ್ರಮಿಸುತ್ತಿದ್ದಾರೆ.