ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಸೋಮವಾರಪೇಟೆ ತಾಲೂಕಿನ ಮಾದಾಪುರ ವ್ಯಾಪ್ತಿಯಲ್ಲಿನ ಕುಂಬೂರಿನಲ್ಲಿ ನಿರ್ಮಿಸಲಾಗಿರುವ ಪವಿತ್ರಕುಟುಂಬ ದೇವಾಲಯವನ್ನು ಮಂಗಳವಾರ ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಡಾ. ಬರ್ನಾಡ್ ಮೊರಾಸ್ ಲೋಕಾರ್ಪಣೆಗೊಳಿಸಿದರು.ದೇವಾಲಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೇರವೇರಿಸಿದ್ದ ಅವರು ಮೊದಲಿಗೆ ಶಿಲಾನ್ಯಾಸ ಕಲ್ಲನ್ನು ಅನಾವರಣಗೊಳಿಸಿ ಪವಿತ್ರ ತೀರ್ಥ, ಪ್ರೋಕ್ಷಣೆಯಿಂದ ದೇವಾಲಯವನ್ನು ಪವಿತ್ರಿಕರಿಸಿದರು. ಬಲಿಅರ್ಪಣ ಪೀಠವನ್ನು ಧೂಪಗಳಿಂದ ತೀರ್ಥಗಳನ್ನು ಪ್ರೋಕ್ಷಿಸಿ ಆಶೀರ್ವಚಿಸಿ, ನಂತರ ನೂತನ ಬಲಿಪೀಠದಲ್ಲಿ ಡಾ. ಬರ್ನಾಡ್ ಮೊರಾಸ್ ಹಾಗೂ ಸಹಗುರುಗಳು ಬಲಿಆರ್ಪಣೆಯನ್ನು ಸಲ್ಲಿಸಿದರು.
ಕುಂಬೂರು, ಮಾದಾಪುರ, ಹಟ್ಟಿಹೊಳೆ, ಸೋಮವಾರಪೇಟೆ, ಸುಂಟಿಕೊಪ್ಪ ಸೇರಿದಂತೆ ವಿವಿಧ ಭಾಗಗಳಿಂದ ನೂರಾರು ಕ್ರೈಸ್ತಭಾಂದವರು ಭಾಗವಹಿಸಿದ್ದರು.ನಂತರ ಮಾತನಾಡಿದ ಅವರು, ಮಡಿಕೇರಿ ವಲಯದ ಶ್ರದ್ಧಾ ಕೇಂದ್ರಗಳಲ್ಲಿ ಒಂದಾಗಿರುವ ಕುಂಬೂರುವಿನ ಪವಿತ್ರ ಕುಟುಂಬ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಇಂದು ಕಾಣುತ್ತಿರುವ ಭವ್ಯ ದಿವ್ಯ ನವೀನ ದೇವಾಲಯಕ್ಕೆ 10 ಹಲವು ಧರ್ಮಗುರುಗಳು ಮತ್ತು ಭಕ್ತರ ತ್ಯಾಗ ಪರಿಶ್ರಮ ಮತ್ತು ಭಕ್ತಿಯ ಸಮರ್ಪಣೆಯಾಗಿದೆ ಎಂದರು.
ನೂತನ ದೇವಾಲಯ ಅಂದಾಜು ಸುಮಾರು 56 ಕುಟುಂಬಗಳನ್ನು ಹೊಂದಿರುವ ಹಿನ್ನಲೆಯಲ್ಲಿ ಸಾಕಷ್ಟು ಉತ್ತಮ ರೀತಿಯಲ್ಲಿ ಪ್ರಾರ್ಥನೆ ಬಲಿಪೂಜೆ ನಡೆದು ಭಕ್ತರು ತಮ್ಮ ಕೋರಿ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಲ್ಲಿ ಪರಮ ಪೀತನು ಆಶೀರ್ವದಿಸಲಿ ಎಂದು ಹಾರೈಸಿದರು.ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ದೇಶ ನಮ್ಮದಾಗಿದ್ದು ವಿವಿಧ ಧಾರ್ಮಿಕ ನಂಬಿಕೆಗಳು, ಆಚಾರ ವಿಚಾರಗಳು, ವೇಷಭೂಷಣಗಳು ಬೇರೆ ಬೇರೆಯಾಗಿದ್ದರೂ ಕೂಡ ಎಲ್ಲಾ ಧರ್ಮ ಗಳ ಸಾರ ಒಂದೇ ಎಂದರು.
ಪ್ರಾಸ್ತಾವಿಕ ಮಾತನಾಡಿದ ಧರ್ಮಕೇಂದ್ರದ ಧರ್ಮಗುರು ರೆ.ಫಾ.ರಾಜೇಶ್, ಹುಲ್ಲುಹಾಸಿನ ಕಟ್ಟಡದಿಂದ ಪವಿತ್ರ ಕುಟುಂಬ ದೇವಾಲಯದ ಪರಿಶ್ರಮ ವನ್ನು ವಿವರಿಸಿದರು.ಮೈಸೂರು ಧರ್ಮ ಕ್ಷೇತ್ರದ ರೇ.ಫಾ.ಜಾನ್ ಅಲ್ಬರ್ಟ್ ಮೆಂಡೋನ್ಸಾ, ಹಟ್ಟಿಹೊಳೆ ಧರ್ಮಕೇಂದ್ರದ ಧರ್ಮ ಗುರು ಗಿಲ್ಬರ್ಟ್ ಡಿಸಿಲ್ವ, ಜಿಲ್ಲೆ ಸೇರಿದಂತೆ ವಿವಿಧ ದರ್ಮಕೇಂದ್ರಗಳಿಂದ ಆಗಮಿಸಿದ ಧರ್ಮಗುರುಗಳು, ಲಕ್ಷ್ಮೀಜಾಲ ತೋಟದ ಮಾಲೀಕ ಕೊಂಗಡ ವಿನಯ್ ಸೋಮಯ್ಯ, ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿದ್ದಪ್ಪ, ಉಪಾಧ್ಯಕ್ಷ ಸುರೇಶ್, ಸದಸ್ಯರಾದ ಅಂತೋಣಿ, ದಮಯಂತಿ ಮತ್ತಿತರರು ಇದ್ದರು.
ದೇವಾಲಯದ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡ ದಾನಿಗಳು ಹಾಗೂ ಸಂಘಟಕರನ್ನು ಸನ್ಮಾನಿಸಲಾಯಿತು.