ಶ್ರೀಕಾಂತ ಹೆಮ್ಮಾಡಿ
ಕನ್ನಡಪ್ರಭ ವಾರ್ತೆ ಕುಂದಾಪುರತೀವ್ರ ಕುತೂಹಲ ಕೆರಳಿಸಿದ್ದ ಎರಡನೇ ಅವಧಿಯ ಕುಂದಾಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಕೊನೆಗೂ ಮೀಸಲಾತಿ ಪ್ರಕಟಗೊಂಡಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಒಲಿದು ಬಂದಿದೆ.ಕುಂದಾಫುರ ಪುರಸಭೆಯಲ್ಲಿ ಬಿಜೆಪಿ ಬೆಂಬಲಿತ 14, ಕಾಂಗ್ರೆಸ್ ಬೆಂಬಲಿತ 8 ಹಾಗೂ 1ಪಕ್ಷೇತರ ಅಭ್ಯರ್ಥಿ ಇದ್ದು, ಅಧಿಕಾರದ ಗದ್ದುಗೆ ಹಿಡಿಯಲು ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಬಿಜೆಪಿಯಲ್ಲಿ 6 ಮಹಿಳೆಯರು, 8 ಪುರುಷರು ಇದ್ದು ಅಷ್ಟೂ ಮಂದಿ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ6 ಮಂದಿ ಮೀಸಲಾತಿ ಪ್ರಕಾರ ಅರ್ಹರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಯಾರು ಆಯ್ಕೆಯಾಗುತ್ತಾರೆ ಎನ್ನುವ ತೀವ್ರ ಕುತೂಹಲ ಬಿಜೆಪಿ ಪಾಳಯದಲ್ಲಿದೆ.
* ಜಾತಿ ಲೆಕ್ಕಾಚಾರ: ಇಬ್ಬರೊಳಗೆ ಪೈಪೋಟಿಈಗಿರುವ 14 ತಿಂಗಳ ಅವಧಿಗೆ ಹೊಸ ಸದಸ್ಯರ ಆಯ್ಕೆಯಿಂದ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯಗಳು ಬಾರದೇ ವ್ಯವಸ್ಥಿತವಾಗಿ ಆಯ್ಕೆ ಪ್ರಕ್ರಿಯೆ ನಡೆಸುವ ಇರಾದೆಯಿಂದ ಅಧ್ಯಕ್ಷ ಗಾದಿಗೆ ಬಿಜೆಪಿ ಹಿರಿಯ ಸದಸ್ಯ ಮೋಹನ್ದಾಸ್ ಶೆಣೈ ಅವರ ಹೆಸರು ಮತ್ತೊಮ್ಮೆ ಚಾಲ್ತಿಯಲ್ಲಿದೆ. ಶೆಣೈ ಈ ಹಿಂದೆ ಎರಡು ಅವಧಿಗೆ 5 ವರ್ಷ ಅಧ್ಯಕ್ಷರಾಗಿದ್ದು, ಅವರ ಅಧಿಕಾರವಧಿಯಲ್ಲಿ ಪುರಸಭೆಗೆ ರಾಷ್ಟ್ರೀಯ ಪ್ರಶಸ್ತಿಯ ಮನ್ನಣೆಯೂ ದೊರಕಿತ್ತು.
ಜಾತಿ ಲೆಕ್ಕಾಚಾರಗಳನ್ನು ಪಕ್ಷ ಗಣನೆಗೆ ತೆಗೆದುಕೊಂಡರೆ ಈ ಮೂರು ಸಮುದಾಯದ ಸದಸ್ಯರಾದ ಗಿರೀಶ್ ದೇವಾಡಿಗ, ಸಂತೋಷ್ ಶೆಟ್ಟಿ, ಪ್ರಭಾಕರ ವಿ. ಅವರಲ್ಲಿ ಯಾರು ಆಯ್ಕೆಯಾಗುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆ. ಪ್ರಭಾಕರ ವಿ. ಕಾರಣಾಂತರಗಳಿಂದ ಈಗಾಗಲೇ ಅಧ್ಯಕ್ಷ ಸ್ಥಾನದ ಪೈಪೋಟಿಯಿಂದ ಹಿಂದೆ ಸರಿದಿದ್ದಾರೆ ಎನ್ನುವುದು ಅವರ ಆಪ್ತ ವಲಯದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಜಾತಿ ಲೆಕ್ಕಾಚಾರಕ್ಕೆ ಹೋದರೆ ಗಿರೀಶ್ ದೇವಾಡಿಗ ಹಾಗೂ ಸಂತೋಷ ಶೆಟ್ಟಿ ಇಬ್ಬರಲ್ಲಿ ಯಾರಿಗೆ ಪಕ್ಷ ಒಲವು ತೋರಲಿದೆ ಎನ್ನುವುದು ತೀವ್ರ ಕುತೂಹಲ ಕೆರಳಿಸಿದೆ.* ಏನೆಲ್ಲಾ ಸಾಧ್ಯತೆಗಳಿವೆ?:ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಈ ಹಿಂದೆ ಅಧ್ಯಕ್ಷ, ಉಪಾಧ್ಯಕ್ಷರಾಗಿದ್ದವರನ್ನು ಪರಿಗಣನೆಗೆ ತೆಗೆದುಕೊಳ್ಳದಿದ್ದರೆ ಓರ್ವ ಪುರುಷ ಹಾಗೂ ಓರ್ವ ಮಹಿಳಾ ಸದಸ್ಯರನ್ನು ಕೈಬಿಡಬೇಕಾಗುತ್ತದೆ. ಉಳಿದ 12 ಮಂದಿ ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗುತ್ತಾರೆ. ಪುರುಷ ಸದಸ್ಯರಲ್ಲಿ ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದವರನ್ನು ಹೊರತುಪಡಿಸಿ ಮೋಹನ್ ದಾಸ್ ಶೆಣೈ, ಗಿರೀಶ್ ದೇವಾಡಿಗ, ಸಂತೋಷ್ ಶೆಟ್ಟಿ, ಪ್ರಭಾಕರ್ ವಿ., ಶ್ರೀಕಾಂತ್, ರಾಘವೇಂದ್ರ ಖಾರ್ವಿ, ಶೇಖರ ಪೂಜಾರಿ ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿದ್ದಾರೆ.
ಉಪಾಧ್ಯಕ್ಷ ಸ್ಥಾನ ಮಹಿಳೆಗೆ ಮೀಸಲಾಗಿರುವುದರಿಂದ ಈ ಹಿಂದೆ ಅಧ್ಯಕ್ಷರಾಗಿದ್ದವರನ್ನು ಹೊರತುಪಡಿಸಿ ಉಳಿದ 5 ಮಂದಿಯನ್ನು ಆಯ್ಕೆಗೆ ಪರಿಗಣಿಸಿದರೆ ಅಶ್ವಿನಿ ಪ್ರದೀಪ್, ರೋಹಿಣಿ ಉದಯ್, ಶ್ವೇತಾ ಸಂತೋಷ್, ವನಿತಾ ಬಿಲ್ಲವ, ಪ್ರೇಮಲತಾ ಹೆಸರು ಅರ್ಹರ ಸಾಲಿನಲ್ಲಿದೆ. ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದ ಅಶ್ವಿನಿ, ವನಿತಾ ಹಾಗೂ ಶ್ವೇತಾ ಅವರ ಹೆಸರು ಮುಂಚೂಣಿಯಲ್ಲಿದ್ದು, ಅಶ್ವಿನ್ ಪ್ರದೀಪ್ ಅವರಿಗೆ ಪಕ್ಷ ಅವಕಾಶ ಕೊಡಲಿದೆ ಎನ್ನುವುದು ರಾಜಕೀಯ ಲೆಕ್ಕಾಚಾರ.-----ಗಿರೀಶ್ ಮೇಲೆ ಪಕ್ಷಾತೀತ ಒಲವು:
ಹಿಂದಿನ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯೊಳಗಿನ ನಾನಾ ಸಮಸ್ಯೆಗಳನ್ನು ಸಾಕಷ್ಟು ಅಧ್ಯಯನ ನಡೆಸಿ ದಾಖಲೆಗಳ ಮೂಲಕ ಸಭೆಯ ಮುಂದಿಟ್ಟು ಕೆಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮಿಸಿದ ಗಿರೀಶ್ ದೇವಾಡಿಗ ಅವರು ಈ ಬಾರಿ ಅಧ್ಯಕ್ಷರಾಗಬೇಕು ಎನ್ನುವುದು ಪಕ್ಷಾತೀತವಾಗಿ ಸಾರ್ವಜನಿಕ ವಲಯದ ಅಭಿಪ್ರಾಯ. ಅಧ್ಯಕ್ಷರಾದವರು ಕುಡಿಯುವ ನೀರು, ರಾಷ್ಟ್ರೀಯ ಹೆದ್ದಾರಿ, ರಿಕ್ಷಾ ನಿಲ್ದಾಣ, ತ್ಯಾಜ್ಯ ವಿಲೇವಾರಿ, ರಿಂಗ್ ರಸ್ತೆ, ನೆಹರು ಮೈದಾನ, ಯುಜಿಡಿ ಮುಂತಾದ ಮೂಲಭೂತ ಸಮಸ್ಯೆಗಳ ಪರಿಹಾರಕ್ಕೆ ಗಮನ ನೀಡಬೇಕು. ಆಡಳಿತವಿಲ್ಲದೇ ಇತ್ತೀಚೆಗೆ ಪುರಸಭೆ ಲಂಚದ ಕೂಪವಾಗಿದೆ ಎನ್ನುವ ಸಾರ್ವಜನಿಕ ಆರೋಪಗಳ ಮಧ್ಯೆ ಹೊಸ ಮುಖ್ಯಾಧಿಕಾರಿಯ ಜೊತೆ ಜನಸ್ನೇಹಿ ಕಚೇರಿಯನ್ನಾಗಿಸುವ ಸವಾಲು ಹಾಗೂ ಗುರಿಗಳಿದ್ದು, ಈ ಎಲ್ಲ ಜವಾಬ್ದಾರಿಗಳನ್ನು ಗಿರೀಶ್ ವ್ಯವಸ್ಥಿತವಾಗಿ ನಿಭಾಯಿಸುತ್ತಾರೆ ಎನ್ನುವುದು ಪಕ್ಷಾತೀತವಾದ ಜನಾಭಿಪ್ರಾಯ.------ಅಧ್ಯಕ್ಷಗಾದಿಗೆ ಬಿಜೆಪಿಯೊಳಗೆ ತೀವ್ರ ಪೈಪೋಟಿ ಇದೆ. ಅವರ ತಿಕ್ಕಾಟವನ್ನು ನಾವು ಸದುಪಯೋಗಪಡಿಸಿಕೊಳ್ಳಲು ಹೋಗುವುದಿಲ್ಲ. ಅವರ ಅವಕಾಶಗಳನ್ನು ಅವರೇ ಪಡೆದುಕೊಳ್ಳಲಿ. ಬೋರ್ಡ್ ಇಲ್ಲದೇ ಒಂದು ವರ್ಷಕ್ಕೂ ಹೆಚ್ಚು ಕಾಲ ಕಳೆದಿರುವುದು ಬೇಸರವಿದೆ. ಆದಷ್ಟು ಬೇಗ ಆಯ್ಕೆ ಪ್ರಕ್ರಿಯೆ ನಡೆದು ಜನಸಾಮಾನ್ಯರ ಕೆಲಸಗಳಾಗಬೇಕು. ಸಾಮಾನ್ಯ ಸಭೆಯಲ್ಲಿ ಜನರ ಧ್ವನಿಯನ್ನು ಆಡಳಿತ ಪಕ್ಷಗಳಿಗೆ ಮುಟ್ಟಿಸುವ ಜವಾಬ್ದಾರಿ ನಮ್ಮ ಮೇಲಿದೆ. ವಿರೋಧ ಪಕ್ಷವಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇವೆ.। ಚಂದ್ರಶೇಖರ ಖಾರ್ವಿ, ಕಾಂಗ್ರೆಸ್ ಸದಸ್ಯ------ಜಿಲ್ಲಾ ಮುಖಂಡರೆಲ್ಲರೂ ಪಾದಯಾತ್ರೆಯಲ್ಲಿದ್ದು, ಇದುವರೆಗೂ ಪಕ್ಷದೊಳಗೆ ಯಾವುದೇ ಮಾತುಕತೆ ನಡೆಸಿಲ್ಲ. ಆಕಾಂಕ್ಷಿಗಳು ಹಲವರಿದ್ದಾರೆ. ಕುಂದಾಪುರದಂತೆಯೇ ಕಾಪು ಪುರಸಭೆ, ಉಡುಪಿ ನಗರಸಭೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಎಲ್ಲವೂ ಇದೆ. ಎಲ್ಲವನ್ನೂ ಜಿಲ್ಲಾ ಸಮಿತಿಯಲ್ಲಿ ತೀರ್ಮಾನ ಮಾಡುತ್ತೇವೆ. ಎಲ್ಲರ ಅಭಿಪ್ರಾಯ ಪಡೆದು ಪಕ್ಷದೊಳಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ಆದಷ್ಟು ಬೇಗ ಈ ಬಗ್ಗೆ ಪಕ್ಷ ತೀರ್ಮಾನಿಸಲಿದೆ.
। ಕಿಶೋರ್ ಕುಮಾರ್ ಕುಂದಾಪುರ, ಬಿಜೆಪಿ ಜಿಲ್ಲಾಧ್ಯಕ್ಷ