ಬ್ರಹ್ಮಾವರ: ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಬ್ರಹ್ಮಾವರ ಸಹಯೋಗದಲ್ಲಿ ದ್ವಿತೀಯ ಸೋಪಾನ ಪರೀಕ್ಷಾ ಪಟಲಾಂ ನಾಯಕರ ತರಬೇತಿ ಶಿಬಿರ ಹಾಗೂ ವಿತೇಶ್ ಕಾಂಚನ್ ನಾಯಕತ್ವದ ಪ್ರಾಯೋಜಕತ್ವದಲ್ಲಿ ಉಚಿತ ಯುನಿಟ್ ಕಿಟ್ ವಿತರಣೆ ಕಾರ್‍ಯಕ್ರಮ ನಡೆಯಿತು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪಡೆದುಕೊಂಡ ಅನುಭವಗಳನ್ನು ಜೀವನದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಶಿಸ್ತು, ಸಹಬಾಳ್ವೆ, ಪರೋಪಕಾರ ಮುಂತಾದ ಸದ್ಗುಣಗಳನ್ನು ಇಂತಹ ತರಬೇತಿಯಿಂದ ಕಲಿತು ಉತ್ತಮ ಪ್ರಜೆಗಳಾಗಬೇಕು ಎಂದರು.ಸ್ಥಳೀಯ ಸಂಸ್ಥೆ ಅಧ್ಯಕ್ಷ ಕೆ. ಅಶೋಕ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿತೇಶ್ ಕಾಂಚನ್ ಅವರು ಸ್ಕೌಟ್ ಮತ್ತು ಗೈಡ್ಸ್ ಚಟುವಟಿಕೆಗಳ ಮಹತ್ವ ಹಾಗೂ ಶಿಬಿರದ ಉದ್ದೇಶಗಳ ಕುರಿತು ಮಾಹಿತಿ ನೀಡಿದರು.
ಸಂಜೆಯ ಭವ್ಯ ಶಿಬಿರಾಗ್ನಿ ಕಾರ್‍ಯಕ್ರಮವನ್ನು ಶಾಲೆಯ ಆಡಳಿತ ನಿರ್ದೇಶಕ ಪ್ರಣವ್ ಶೆಟ್ಟಿ ಉದ್ಘಾಟಿಸಿದರು ಹಾಗೂ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಪ್ರದರ್ಶಿಸಿದರು.ಶಿಬಿರದ ಎರಡನೇ ದಿನ ಅಗ್ನಿಶಾಮಕ ದಳದವರು ಅಗ್ನಿ ದುರಂತದ ಸಂದರ್ಭದಲ್ಲಿನ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿ, ಪ್ರಾತ್ಯಕ್ಷಿಕೆ ನಡೆಸಿದರು. ಎರಡು ದಿನಗಳ ಕಾಲ ನಡೆದ ಕೌಶಲ್ಯಾಧರಿತ ಶಿಬಿರದಲ್ಲಿ ಶಿಸ್ತು, ನಾಯಕತ್ವ, ತಂಡ ಕಾರ್‍ಯ ಮತ್ತು ಸ್ವಾವಲಂಬನೆ ಕುರಿತು ತರಬೇತಿ ನೀಡಲಾಯಿತು. ಶಿಬಿರವು ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವಲ್ಲಿ ಸಹಾಯಕವಾಯಿತು. ಶಿಬಿರದಲ್ಲಿ ೩೦೦ಕ್ಕೂ ಅಧಿಕ ಶಿಬಿರಾರ್ಥಿಗಳು ಭಾಗವಹಿಸಿದ್ದರು. 15 ಶಿಕ್ಷಕ, ಶಿಕ್ಷಕಿಯರು ಭಾಗವಹಿಸಿದ್ದರು.