ಕುಂದಗೋಳ ಶಿತಿಕಂಠೇಶ್ವರ ಶಿವಾಚಾರ್ಯರ ಹೇಳಿಕೆ ಸತ್ಯಕ್ಕೆ ದೂರವಾದುದು: ಕಾಶೀ ಶ್ರೀ

KannadaprabhaNewsNetwork |  
Published : Apr 29, 2026, 02:00 AM IST
ಉಡುಪಿಯ ಭಾರತೀಯ ರತ್ನ ಮತ್ತು ಆಭರಣ ಸಂಸ್ಥೆ (ಐಐಜಿಜೆ)ಯ ನೂತನ ಕಟ್ಟಡ ಕೇಂದ್ರ ಸರ್ಕಾರದ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ವೀರಶೈವ ಧರ್ಮದಲ್ಲಿ ಒಂದು ಉತ್ಕೃಷ್ಟ ಪರಂಪರೆ- ಸಂಪ್ರದಾಯವಿದೆ. ಕುಂದಗೋಳ ಪಂಚಗೃಹ ಹಿರೇಮಠ ಕಾಶೀ ಮಹಾಪೀಠದ ಶಾಖಾ ಮಠವಾಗಿದೆ.

ಹುಬ್ಬಳ್ಳಿ:

ಕುಂದಗೋಳ ಪಂಚಗೃಹ ಹಿರೇಮಠದ ಶಿತಿಕಂಠೇಶ್ವರ ಶಿವಾಚಾರ್ಯರು ಮಠದ ಆಸ್ತಿ ಮಾರಾಟ ಮಾಡುವ ಭರಾಟೆಯಲ್ಲಿ ಸತ್ಯ ಸಂಗತಿಗಳನ್ನು ಅಲ್ಲಗಳೆದಿರುವುದು ಅವರ ಹತಾಶ ಮನೋಭಾವನೆಗೆ ಸಾಕ್ಷಿಯಾಗಿದೆ. ಅವರ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಕಾಶೀಪೀಠದ ಡಾ. ಚಂದ್ರಶೇಖರ ಶ್ರೀ ಸ್ಪಷ್ಟಪಡಿಸಿದರು.

ಅವರು ಮಂಗಳವಾರ ವಿದ್ಯಾನಗರದ ಜ. ರಂಭಾಪುರಿ ವೀರಗಂಗಾಧರ ಸಮುದಾಯ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವೀರಶೈವ ಧರ್ಮದಲ್ಲಿ ಒಂದು ಉತ್ಕೃಷ್ಟ ಪರಂಪರೆ- ಸಂಪ್ರದಾಯವಿದೆ. ಕುಂದಗೋಳ ಪಂಚಗೃಹ ಹಿರೇಮಠ ಕಾಶೀ ಮಹಾಪೀಠದ ಶಾಖಾ ಮಠವಾಗಿದೆ. ನಾವೇ ಸಾನ್ನಿಧ್ಯ ವಹಿಸಿ ಅವರಿಗೆ ಪಟ್ಟಾಧಿಕಾರ ಮಾಡಿದ್ದನ್ನು ಅವರು ಇಷ್ಟು ಬೇಗನೇ ಮರೆತಿರುವುದು ಖೇದದ ಸಂಗತಿ. ಆಯಾ ಮಠಗಳ ಸ್ಥಿರ, ಚರ ಆಸ್ತಿಗಳಿಗೆ ಆಯಾ ಮಠಗಳ ಶ್ರೀಗಳವರಿಗೆ ಸಂಬಂಧಿಸಿದ್ದರೂ ಕೆಲವು ಸಂದರ್ಭದಲ್ಲಿ ಮಠದ ಪದ್ಧತಿ, ಪರಂಪರೆಯಂತೆ ನಡೆಯದೇ ಇದ್ದಾಗ ಸ್ವೇಚ್ಛಾಚಾರಿಗಳಾಗಿ ಮಠದ ಆಸ್ತಿ ಪರಭಾರೆ ಮತ್ತು ಮಾರಾಟ ಮಾಡುವ ಸಂದರ್ಭದಲ್ಲಿ ಅದನ್ನು ತಡೆಗಟ್ಟುವ ಅಧಿಕಾರ ಮೂಲ ಪೀಠಗಳಿಗೆ ಇದ್ದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಪದಚ್ಯುತಿಗೊಳಿಸುವ ಎಚ್ಚರಿಕೆ:

ಈಗಾಗಲೇ ಶ್ರೀಗಳು ಧಾರವಾಡ ಮತ್ತು ಕುಂದಗೋಳದಲ್ಲಿದ್ದ ಮಠದ ಆಸ್ತಿಗಳನ್ನು ಮಾರಾಟ ಮಾಡಿ ಹಣವನ್ನು ಅಪವ್ಯಯ ಮಾಡಿದ್ದಾರೆ. ಆದರೂ ಪೀಠ ಮತ್ತು ಭಕ್ತರು ಯಾರೂ ವಿರೋಧಿಸಿಲ್ಲ. ಇದೀಗ ಮಠಕ್ಕೆ ಉಳಿದಿರುವ 52 ಎಕರೆ ಫಲವತ್ತಾದ ಭೂಮಿಯನ್ನು ಎನ್.ಎ. ಆಗಿ ಪರಿವರ್ತಿಸಲು ಮುಂದಾಗಿ ಮಾರಾಟ ಮಾಡುವ ಹುನ್ನಾರ ಹೊಂದಿರುವುದು ತಿಳಿದು ಬಂದಿದೆ. ಈ ನಿರ್ಧಾರದಿಂದ ಶ್ರೀಗಳು ಹಿಂದೆ ಸರಿಯದಿದ್ದರೆ ಅವರನ್ನು ಮಠದಿಂದ ಪದಚ್ಯುತಗೊಳಿಸಿ ಮತ್ತೊಬ್ಬ ನೂತನ ಪಟ್ಟಾಧ್ಯಕ್ಷರಿಗೆ ಅಧಿಕಾರ ವಹಿಸಿ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದು ಕಾಶೀ ಶಾಖಾ ಮಠ:

ಕುಂದಗೋಳ ಪಂಚಗೃಹ ಹಿರೇಮಠ ಪುತ್ರ ವರ್ಗ ಮಠವಲ್ಲ. ಇದು ಶಿಷ್ಯ ವರ್ಗ ಪರಂಪರೆಯ ಕಾಶೀ ಮಹಾಪೀಠದ ಶಾಖಾ ಮಠವಾಗಿದೆ. ಲಿಂ. ಸಿದ್ಧಲಿಂಗ ಶಿವಾಚಾರ್ಯರು ನಮ್ಮ ವಂಶಕ್ಕೆ ಇನ್ನೊಂದು ಅವಕಾಶ ಕೊಡಬೇಕೆಂದು ಭಿನ್ನವಿಸಿದಾಗ ಅದಕ್ಕೆ ಸಮ್ಮತಿಸಿ ಶಿತಿಕಂಠೇಶ್ವರ ಶಿವಾಚಾರ್ಯರಿಗೆ ಪಟ್ಟಾಭಿಷೇಕ ಮಾಡಲಾಗಿದೆ. ಶ್ರೀಗಳು ತಮ್ಮ ನಡೆ-ನುಡಿಗಳನ್ನು ತಿದ್ದಿಕೊಳ್ಳದೇ ಇದ್ದರೆ ಮುಂದಿನ ಕ್ರಮ ಕೈಕೊಳ್ಳಬೇಕಾಗುತ್ತದೆ ಎಂದು ಕಾಶೀ ಜಗದ್ಗುರುಗಳು ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶ್ರೀಗಳು ಮತ್ತು ಉಜ್ಜಯಿನಿ ಪೀಠದ ಸಿದ್ಧಲಿಂಗ ಜಗದ್ಗುರುಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಪಿಎಂಇ ನೋಂದಣಿ ಇಲ್ಲದೆ ಕ್ಲಿನಿಕ್ ಆರಂಭಿಸಿದರೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್
ಮೋದಿ ಭಯೋತ್ಪಾದ ಹೇಳಿಕೆ: ಕಾಂಗ್ರೆಸ್ ಕಚೇರಿ ಮುತ್ತಿಗೆ ಯತ್ನ