ಕುಂದಾಪುರ: ಆರಿದ್ರಾ ಮಳೆ ಅಬ್ಬರಕ್ಕೆ ನಲುಗಿದ ನದಿತೀರದ ಜನತೆ!

KannadaprabhaNewsNetwork | Published : Jul 5, 2024 12:45 AM

ಸಾರಾಂಶ

ಧಾರಕಾರ ಮಳೆಗೆ ಸೌಪರ್ಣಿಕಾ ನದಿ ತುಂಬಿ ಹರಿದ ಕಾರಣ ಸಾಲ್ಬುಡ, ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ ಮೊದಲಾದೆಡೆ ವ್ಯಾಪಕ ನೆರೆಯಾಗಿದ್ದು, ಸುಮಾರು 80ಕ್ಕೂ ಅಧಿಕ ಮನೆಗಳಿಗೆ ನದಿ ನೀರು ನುಗ್ಗಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ನದಿತೀರದ ಪ್ರದೇಶಗಳು ಗುರುವಾರ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.ಧಾರಕಾರ ಮಳೆಗೆ ಸೌಪರ್ಣಿಕಾ ನದಿ ತುಂಬಿ ಹರಿದ ಕಾರಣ ಸಾಲ್ಬುಡ, ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಪಡುಕೋಣೆ ಮೊದಲಾದೆಡೆ ವ್ಯಾಪಕ ನೆರೆಯಾಗಿದ್ದು, ಸುಮಾರು 80ಕ್ಕೂ ಅಧಿಕ ಮನೆಗಳಿಗೆ ನದಿ ನೀರು ನುಗ್ಗಿದೆ. ಅಗ್ನಿಶಾಮಕದಳ ಸ್ಥಳದಲ್ಲಿ ಮೊಕ್ಕಾಂ ಹೂಡಿದೆ. ನೆರೆ ಪ್ರಮಾಣ ಹೆಚ್ಚಾದರೆ ಜನರನ್ನು ಸ್ಥಳಾಂತರಿಸಲು ಸನ್ನದ್ಧರಾಗಿದ್ದಾರೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಸುರಿದ ಪರಿಣಾಮ ಭಾರಿ ನೆರೆಯ ವಾತಾವರಣ ನಿರ್ಮಾಣವಾಗಿದೆ. ಮನೆಗಳಲ್ಲಿರುವ ಜನರಿಗೆ, ಜಾನುವಾರುಗಳಿಗೆ ಜಲದಿಗ್ಬಂಧನವಾಗಿದೆ. ಜಾನುವಾರುಗಳನ್ನು ಬಿಟ್ಟು ಮನೆಯಿಂದ ಹೊರಬರಲು ಗ್ರಾಮಸ್ಥರ ನಿರಾಕರಿಸಿದ್ದು, ದೋಣಿಯ ಮೂಲಕ ಜನರು ಓಡಾಟ ನಡೆಸುತ್ತಿದ್ದಾರೆ. ಸಂಜೆ ವೇಳೆ ನೆರೆ ಸ್ವಲ್ಪ ಪ್ರಮಾಣದಲ್ಲಿ ಇಳಿದಿದೆ.

* ಅಧಿಕಾರಿಗಳ ವಿರುದ್ದ ಆಕ್ರೋಶ:

ನಾವುಂದ-ಸಾಲ್ಬುಡ ನೆರೆಪೀಡಿತ ಪ್ರದೇಶಗಳಿಗೆ ತಹಸೀಲ್ದಾರ್ ಪ್ರದೀಪ್, ತಾ.ಪಂ ಇಒ ಭಾರತಿ, ತಾ.ಪಂ. ಮಾಜಿ ಅಧ್ಯಕ್ಷ ಮಹೇಂದ್ರ ಪೂಜಾರಿ, ನಾವುಂದ ಗ್ರಾ.ಪಂ. ಅಧ್ಯಕ್ಷ ನರಸಿಂಹ ದೇವಾಡಿಗ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಜನರು ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ನೆರೆ ಹಾವಳಿ ತಡೆಯಲು ಶಾಶ್ವತ ಯೋಜನೆಗ ಮುಂದಾಗದೆ ಪ್ರತಿಬಾರಿಯೂ ನೆರೆ ಬಂದಾಗ ಮುಖ ತೋರಿಸಿ ಹೋಗುವ ನಾಟಕ ಯಾಕೆ ಮಾಡುತ್ತೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.* ಸೌಕೂರು ಜಲಾವೃತ:

ವಾರಾಹಿ ನದಿಯೂ ತುಂಬಿ ಹರಿದ ಪರಿಣಾಮ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾ.ಪಂ. ವ್ಯಾಪ್ತಿಯ ಸೌಕೂರಿನ ಕುದ್ರು, ಕುಚ್ಚಟ್ಟು ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 15ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಸೌಕೂರು ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪುನರ್ವಸತಿ ಕೇಂದ್ರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಂಜೆಯ ವೇಳೆ ನೆರೆ ಇಳಿಮುಖಗೊಂಡಿದೆ. ಅನೇಕ ಮನೆಗಳು, ಕೃಷಿಗದ್ದೆ, ತೋಟಗಳು ಮುಳುಗಡೆಯಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.ನೆರೆ ಪೀಡಿತ ಸೌಕೂರು ಪ್ರದೇಶಕ್ಕೆ ಎಸಿ ರಶ್ಮಿ ಎಸ್.ಆರ್., ತಹಸೀಲ್ದಾರ್ ಎಚ್.ಎಸ್. ಶೋಭಾಲಕ್ಷ್ಮೀ, ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮ ಕರಣಿಕ ಪ್ರಕಾಶ್ ನಾಯ್ಕ್, ಪಂಚಾಯಿತಿ ಪಿಡಿಓ ವನಿತಾ ಶೆಟ್ಟಿ, ಗ್ರಾ.ಪಂ ಸದಸ್ಯರಾದ ಸುದೀಶ್ ಶೆಟ್ಟಿ, ಸುರೇಂದ್ರ, ಹಂಝ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

* ಶಾಲೆಗಳಿಗೆ ರಜೆ ಗೊಂದಲ: ಪೋಷಕರು ಬೇಸರ

ವ್ಯಾಪಕ ಮಳೆಯ ಹಿನ್ನೆಲೆ ಗುರುವಾರ ಬೈಂದೂರು ವಲಯ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ರಜೆ ಘೋಷಣೆ ಮಾಡಿದ್ದರು. ರಜೆ ಘೋಷಣೆ ವಿಳಂಬವಾದ ಹಿನ್ನೆಲೆ ಕೆಲ ವಿದ್ಯಾರ್ಥಿಗಳು ಶಾಲೆಗೆ ತೆರಳಿ ಪುನಃ ಮನೆಗೆ ಬಂದ ಪ್ರಸಂಗವೂ ನಡೆಯಿತು. ರಜೆ ನೀಡುವಲ್ಲಿ ಜಿಲ್ಲಾಡಳಿತ ವಿಳಂಬ ನೀತಿ ವಿರೋಧಿಸಿ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಮಳೆ ವಾತಾವರಣ ಇದ್ದಾಗ ಮೊದಲೇ ರಜೆ ಘೋಷಿಸಬೇಕೆಂದು ಆಗ್ರಹ ವ್ಯಕ್ತವಾಗಿದೆ.

Share this article