ಕುಂದಾಪುರ: ನ್ಯಾಯ ತೀರ್ಮಾನ ವಿಚಾರದಲ್ಲಿ ಅಘೋಷಿತ ತೀರ್ಪುಗಾರರಾಗಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರಲ್ಲಿ ಸರ್ವ ಸಮ್ಮತ ಸಮಾಜ ಕಟ್ಟಬಲ್ಲ ಶಕ್ತಿ ಇತ್ತು. ಸಮಾಜದ ಕಟ್ಟಕಡೆಯ ಮನುಷ್ಯರಿಗೂ ನ್ಯಾಯ ದೊರಕಬೇಕು ಎನ್ನುವುದು ಅವರ ಧ್ಯೇಯವಾಗಿತ್ತು. ರಾಜಕೀಯ ಹಾಗೂ ಅಧಿಕಾರವನ್ನು ಸ್ವಂತಕ್ಕೆ ಬಳಸದ ಆದರ್ಶ ವ್ಯಕ್ತಿತ್ವ ಅವರದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, ಅವಿಭಜಿತ ದ.ಕ. ಜಿಲ್ಲೆಯಲ್ಲಿ ಅಪ್ಪಣ್ಣ ಹೆಗ್ಡೆಯವರದು ದೊಡ್ಡ ಹೆಸರು. ಎಲ್ಲ ರಂಗದಲ್ಲೂ ಪರಿಪೂರ್ಣ ಕೆಲಸ ಮಾಡಿದ ವ್ಯಕ್ತಿತ್ವ ಅವರದ್ದು. ನುಡಿದಂತೆ ನಡೆದು ಆದರ್ಶ ಬದುಕು ಬದುಕಿದ ಅವರು, ಎಲ್ಲರೊಂದಿಗೆ ಅವಿನಾಭಾವ ಸಂಬಂಧ ಇರಿಸಿಕೊಂಡಿದ್ದರು ಎಂದರು.
ಉದ್ಯಮಿ ಬಂಜಾರ ಪ್ರಕಾಶ್ ಶೆಟ್ಟಿ ಮಾತನಾಡಿ, ಸಣ್ಣ ವಯಸ್ಸಿನಿಂದಲೇ ಅಪ್ಪಣ್ಣ ಹೆಗ್ಡೆ ಅವರ ಗುಣ ಸ್ವಭಾವಗಳನ್ನು ಅರ್ಥೈಸಿಕೊಂಡಿದ್ದ ಹಲವರು ಅವರಂತೆ ಜೀವನ ಕಟ್ಟಿಕೊಳ್ಳುವ ಪ್ರಯತ್ನ ಮಾಡಿದ್ದರು. ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವುದು ಹೇಗೆ ಎನ್ನುವುದಕ್ಕೆ ಹೆಗ್ಡೆ ಅವರು ಪ್ರೇರಣೆಯಾಗಿದ್ದರು ಎಂದರು.ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ರಾಜಕೀಯ, ಧಾರ್ಮಿಕ, ಸಹಕಾರಿ, ಶೈಕ್ಷಣಿಕ ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕದಾಗಿದ್ದ ಅವರ ಕಾರ್‍ಯವೈಖರಿಯನ್ನು ಚಿಕ್ಕಂದಿನಿಂದ ನೋಡಿದ್ದೇನೆ. ಎಲ್ಲ ವಯಸ್ಸಿನವರೊಂದಿಗೆ ಆತ್ಮೀಯತೆ ಇತ್ತು. ಎಲ್ಲ ಕೆಲಸಕ್ಕೂ ಅವರದೇ ನೇತೃತ್ವ. ಯಾರ ವಿರೋಧವೂ ಇಲ್ಲದೇ ನೈಜ ಅಜಾತಶತ್ರುವಾಗಿದ್ದ ಅವರ ಜೀವನವೇ ನಮಗೆಲ್ಲ ಸ್ಫೂರ್ತಿ ಎಂದರು.ಬಾರ್ಕೂರು ಮಹಾಸಂಸ್ಥಾನ ಮಠದ ಸ್ವಾಮೀಜಿ ಸಂತೋಷ ಗುರೂಜಿ ಅವರು, ಧರ್ಮಸ್ಥಳದ ಮಂಜಯ್ಯ ಹೆಗ್ಗಡೆ, ಟಿ.ಎಂ.ಎ.ಪೈ, ಮೂಲ್ಕಿ ಸುಂದರಾಮ್ ಶೆಟ್ಟಿ, ಯಡ್ತರೆ ಮಂಜಯ್ಯ ಶೆಟ್ಟರ ಸಾಲಿನಲ್ಲಿ ಗುರುತಿಸಿಕೊಂಡಿರುವ ಅಪ್ಪಣ್ಣ ಹೆಗ್ಡೆ ಅವರು ಕೂಡ ತಾನು ಬೆಳಗಿ, ಊರಿಗೂ ಬೆಳಕಾದವರು. ಎಲ್ಲ ವರ್ಗದವರಿಗೂ ಬೇಕಾದವರಾಗಿದ್ದವರು. ಜಾತಿ- ಧರ್ಮದ ಬೇದ ಭಾವ ಇಲ್ಲದ ಜೀವನ ನಡೆಸಿದವರು. ಐತಿಹಾಸಿಕ ಬಸ್ರೂರು ಹಾಗೂ ಬಾರ್ಕೂರಿಗೂ ಮತ್ತೆ ಸಂಬಂಧ ಬೆಸೆದವರು ಕೂಡ ಇವರೇ. ಬಾರ್ಕೂರು ಸಂಸ್ಥಾನ ಹುಟ್ಟುವಲ್ಲಿ ಕಾರಣಕರ್ತರಾಗಿದ್ದರು ಎಂದರು.ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಶ್ರೀ ಕ್ಷೇತ್ರ ಧರ್ಮಸ್ಥಳ ಜನಜಾಗೃತಿ ವೇದಿಕೆಯ ವಿವೇಕ್ ವಿನ್ಸೆಂಟ್ ಪಾಯಸ್, ವೈದ್ಯ ಡಾ. ಶಶಿಕರಣ ಉಡುಪಿ ನುಡಿ ನಮನ ಸಲ್ಲಿಸಿದರು.ಮೂಡುಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಯು. ಮೋಹನ್ ಆಳ್ವ, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಬಿ.ಎಂ. ಸುಕುಮಾರ್ ಶೆಟ್ಟಿ, ಡಾ. ಶಾಂತಾರಾಮ ಶೆಟ್ಟಿ ಮೊಳಹಳ್ಳಿ, ಕಾಂಗ್ರೆಸ್ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೊಲ್ಲೂರು ದೇಗುಲದ ಆಡಳಿತ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ, ಮಂದಾರ್ತಿ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಧನಂಜಯ ಶೆಟ್ಟಿ,ಉದ್ಯಮಿಗಳಾದ ಯು.ಬಿ. ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ವಿಜಯ ಹೆಗ್ಡೆ ಬಾರಾಳಿ, ಯು. ಸೀತಾರಾಮ ಶೆಟ್ಟಿ, ಸುರೇಂದ್ರ ಶೆಟ್ಟಿ ಸಹನಾ, ಬೆಂಗಳೂರು ಕಾಂಗ್ರೆಸ್ ಮುಖಂಡ ಶಂಕರ ಶೆಟ್ಟಿ ಕಾಳಾವರ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜನಸೇವಾ ಟ್ರಸ್ಟ್ ನ ವಸಂತ ಗಿಳಿಯಾರು, ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಅಧ್ಯಕ್ಷ ಗೌತಮ್ ಶೆಟ್ಟಿ, ಯುವ ಬಂಟರ ಸಂಘದ ಅಧ್ಯಕ್ಷ ನಿತೀಶ್ ಶೆಟ್ಟಿ ಬಸ್ರೂರು, ಕಲಾ ಕ್ಷೇತ್ರದ ಕಿಶೋರ್ ಕುಮಾರ್ ಕುಂದಾಪುರ, ಬೆಂಗಳೂರಿನ ಕುಂದಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಉದಯ ಕುಮಾರ್ ಹೆಗ್ಡೆ ಗಿಳಿಯಾರು, ಸೌಕೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಳ್ಳಿ ಕಿಶನ್ ಹೆಗ್ಡೆ, ಪ್ರಮುಖರಾದ ಕೆ. ವಿಕಾಸ ಹೆಗ್ಡೆ, ಆವರ್ಸೆ ಸುಧಾಕರ ಶೆಟ್ಟಿ, ವಸಂತಿ ಎಂ. ಶೆಟ್ಟಿ ಹುಣ್ಸೆಮಕ್ಕಿ, ಬುದ್ಧರಾಜ ಶೆಟ್ಟಿ ಮಾರ್ಕೋಡು, ದೀಪಕ್ ಕುಮಾರ್ ಶೆಟ್ಟಿ ಬೈಂದೂರು ಮತ್ತಿತರರು ಇದ್ದರು.
ಮನೆಯವರಾದ ರಾಮ್‌ರತನ್ ಹೆಗ್ಡೆ, ರಾಮ್‌ಕಿಶನ್, ಅನುಪಮಾ ಎಸ್.ಶೆಟ್ಟಿ, ನಿರೂಪಮಾ ಶೆಟ್ಟಿ, ಪ್ರೀತಮಾ ಎಸ್.ರೈ, ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಸುಶಾಂತ್ ರೈ, ದಿವ್ಯಾ ಆರ್.ಹೆಗ್ಡೆ, ಮಮತಾ ಕೆ. ಹೆಗ್ಡೆ, ಜಯಶ್ರೀ ಅಮರನಾಥ ಶೆಟ್ಟಿ, ಜಯಂತಿ ಶೆಟ್ಟಿ ಮುಂಬಯಿ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು. ಪತ್ರಕರ್ತ ಕೆ.ಸಿ. ರಾಜೇಶ್ ಕಾರ್‍ಯಕ್ರಮ ನಿರೂಪಿಸಿದರು.