ಕುಂದಾಪುರ, ಬೈಂದೂರು: ಆಫ್ರಿಕನ್ ಸ್ವೈನ್ ಫಿವರ್ ದೃಢ

KannadaprabhaNewsNetwork |  
Published : Aug 10, 2026, 03:00 AM IST
ಹಂದಿ ಜ್ವರ | Kannada Prabha

ಸಾರಾಂಶ

ಕಳೆದ ಒಂದು ತಿಂಗಳಿನಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡು ಮತ್ತು ಸಾಕು ಹಂದಿಗಳಲ್ಲಿ ಕಂಡುಬಂದ ಸಾವಿನ ಪ್ರಕರಣಗಳ ಮಾದರಿಗಳ ಪರೀಕ್ಷೆಯಲ್ಲಿ ಆಫ್ರಿಕನ್ ಸ್ವೈನ್ ಫಿವರ್ (ಎಎಸ್ಎಫ್) ಸೋಂಕು ದೃಢಪಟ್ಟಿದೆ.

ಕುಂದಾಪುರ: ಕಳೆದ ಒಂದು ತಿಂಗಳಿನಿಂದ ಕುಂದಾಪುರ ಹಾಗೂ ಬೈಂದೂರು ತಾಲೂಕಿನ ವಿವಿಧ ಭಾಗಗಳಲ್ಲಿ ಕಾಡು ಮತ್ತು ಸಾಕು ಹಂದಿಗಳಲ್ಲಿ ಕಂಡುಬಂದ ಸಾವಿನ ಪ್ರಕರಣಗಳ ಮಾದರಿಗಳ ಪರೀಕ್ಷೆಯಲ್ಲಿ ಆಫ್ರಿಕನ್ ಸ್ವೈನ್ ಫಿವರ್ (ಎಎಸ್ಎಫ್) ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೇನಾಪುರ ಗ್ರಾಮದ ಸುತ್ತಮುತ್ತ 1 ಕಿ.ಮೀ. ವ್ಯಾಪ್ತಿಯನ್ನು ರೋಗಪೀಡಿತ ವಲಯ ಹಾಗೂ 10 ಕಿ.ಮೀ. ವ್ಯಾಪ್ತಿಯನ್ನು ಸರ್ವೇಕ್ಷಣಾ ವಲಯ ಎಂದು ಘೋಷಿಸಲಾಗಿದೆ ಎಂದು ಉಡುಪಿ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ರೆಡ್ಡಪ್ಪ ತಿಳಿಸಿದ್ದಾರೆ.

ಶುಕ್ರವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ‌ ನಡೆದ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಮಾತನಾಡಿದರು.ರೋಗಪೀಡಿತ ಹಾಗೂ ಸರ್ವೇಕ್ಷಣಾ ವಲಯಗಳಲ್ಲಿ 90 ದಿನಗಳ ಕಾಲ ಕಟ್ಟುನಿಟ್ಟಿನ ನಿಗಾ ವಹಿಸಲಾಗುವುದು. ರೋಗಪೀಡಿತ 1 ಕಿ.ಮೀ. ವ್ಯಾಪ್ತಿಯಲ್ಲಿರುವ ಹಂದಿಗಳನ್ನು ಸ್ಟಾಂಪಿಂಗ್ ಔಟ್ (ಕಲ್ಲಿಂಗ್) ವಿಧಾನದಡಿ ವೈಜ್ಞಾನಿಕವಾಗಿ ನಾಶಪಡಿಸಲಾಗುವುದು. ಇದಕ್ಕಾಗಿ ಎಲೆಕ್ಟ್ರಿಕ್ ಸ್ಟನ್ನಿಂಗ್ ಯಂತ್ರವನ್ನು ಕುಂದಾಪುರಕ್ಕೆ ಒದಗಿಸಲಾಗಿದ್ದು, ಕಲ್ಲಿಂಗ್ ವೇಳೆ ನಾಶಪಡಿಸುವ ಹಂದಿಗಳಿಗೆ ಸರ್ಕಾರದಿಂದ ಪರಿಹಾರ ಧನ ನೀಡಲಾಗುವುದು. ಸೋಂಕು ದೃಢವಾಗುವ ಮುನ್ನ ಮೃತಪಟ್ಟ ಹಂದಿಗಳಿಗೆ ಪರಿಹಾರ ಇರುವುದಿಲ್ಲ. ಸೋಂಕು ನಿಯಂತ್ರಣಕ್ಕಾಗಿ ಮುಖ್ಯ ಪಶು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು, ಕಲ್ಲಿಂಗ್, ಮಾದರಿ ಸಂಗ್ರಹ ಹಾಗೂ ಆರೋಗ್ಯ ನಿಗಾ ಸೇರಿದಂತೆ ಅಗತ್ಯ ನಿಯಂತ್ರಣ ಕ್ರಮಗಳನ್ನು ವಿವಿಧ ಇಲಾಖೆಗಳ ಸಮನ್ವಯದಲ್ಲಿ ಕೈಗೊಳ್ಳಲಾಗುತ್ತಿದೆ ಎಂದರು.

ಮಂಗಳೂರಿನ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ಪ್ರಾದೇಶಿಕ ಸಂಶೋಧನಾ ಅಧಿಕಾರಿ ವಸಂತ ಕುಮಾರ್ ಶೆಟ್ಟಿ ಮಾತನಾಡಿ, ಕುಂದಾಪುರ ಸುತ್ತಮುತ್ತ ಕಾಡು ಹಂದಿಗಳ ಸಾವಿನ ಪ್ರಕರಣಗಳ ಹಿನ್ನೆಲೆಯಲ್ಲಿ ಸಂಗ್ರಹಿಸಿದ ಮಾದರಿಗಳಲ್ಲಿ ಆಫ್ರಿಕನ್ ಸ್ವೈನ್ ಫಿವರ್ (ಎಎಸ್ಎಫ್) ಸೋಂಕು ಬೆಂಗಳೂರಿನ ಹೆಬ್ಬಾಳದ ಪ್ರಯೋಗಾಲಯದ ಬಳಿಕ ಭೋಪಾಲ್‌ನ ರಾಷ್ಟ್ರೀಯ ಉಲ್ಲೇಖ ಪ್ರಯೋಗಾಲಯದಲ್ಲೂ ದೃಢಪಟ್ಟಿದೆ. ರಾಷ್ಟ್ರೀಯ ಮಾರ್ಗಸೂಚಿಯಂತೆ ಮುಂದಿನ ಮೂರು ತಿಂಗಳು ಜಿಲ್ಲಾಡಳಿತ, ಪಶುಸಂಗೋಪನೆ, ಅರಣ್ಯ ಹಾಗೂ ಇತರ ಇಲಾಖೆಗಳು ಸಮನ್ವಯದಿಂದ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಿವೆ. ವೈಜ್ಞಾನಿಕ ಕ್ರಮಗಳಿಂದ ಸೋಂಕನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ದ.ಕ. ಜಿಲ್ಲೆಯಲ್ಲಿ ಈ ಹಿಂದೆ ಮೂರು ಬಾರಿ ಎಎಸ್ಎಫ್ ಸೋಂಕು ಕಾಣಿಸಿಕೊಂಡಿದ್ದರೂ, ಸೋಂಕಿತ ಹಂದಿಗಳನ್ನು ಮಾತ್ರ ಕಲ್ಲಿಂಗ್ ಮಾಡುವ ಮೂಲಕ ಯಶಸ್ವಿಯಾಗಿ ನಿಯಂತ್ರಿಸಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಕಾಡು ಹಂದಿಗಳಲ್ಲಿ ಸೋಂಕು ದೃಢಪಟ್ಟಿರುವುದು ಇದೇ ಮೊದಲ ಪ್ರಕರಣವಾಗಿದೆ. ಕಾಡು ಹಂದಿಗಳಲ್ಲಿ ಸೋಂಕು ನಿಯಂತ್ರಿಸುವುದು ಸವಾಲಿನ ಕೆಲಸವಾಗಿದ್ದು, ಸಾರ್ವಜನಿಕರು ಸತ್ತ ಅಥವಾ ಅಸ್ವಸ್ಥ ಹಂದಿಗಳು ಕಂಡುಬಂದರೆ ತಕ್ಷಣ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದ ಅವರು, ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ವಾರಕ್ಕೊಮ್ಮೆ ಮಾದರಿ ಸಂಗ್ರಹಿಸಿ ನಿರಂತರ ನಿಗಾ ವಹಿಸಲಾಗುತ್ತಿದೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.‌ ಪ್ರೇಮಾನಂದ ಮಾತನಾಡಿ, ಆಫ್ರಿಕನ್ ಸ್ವೈನ್ ಫಿವರ್ ಹಂದಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ ವೈರಸ್ ಕಾಯಿಲೆಯಾಗಿದ್ದು, ಮನುಷ್ಯರಿಗೆ ಹರಡುವುದಿಲ್ಲ. ಯಾವುದೇ ಹಂದಿ ಮೃತಪಟ್ಟರೆ ಅದು ಎಎಸ್ಎಫ್ ನಿಂದಲೇ ಎಂದು ಭಾವಿಸದೆ ಗ್ರಾಪಂ, ಪಶು ಸಂಗೋಪನೆ, ಆರೋಗ್ಯ ಅಥವಾ ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡಬೇಕು. ಅಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯವಿದ್ದರೆ ಮಾದರಿ ಸಂಗ್ರಹಿಸಿ ವೈಜ್ಞಾನಿಕವಾಗಿ ಮೃತದೇಹ ವಿಲೇವಾರಿ ಮಾಡಲಿದ್ದಾರೆ. ಮೃತಪಟ್ಟ ಹಂದಿಗಳನ್ನು ನೇರವಾಗಿ ಮುಟ್ಟಬಾರದು. ಅಗತ್ಯವಿದ್ದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಆರೋಗ್ಯ ಇಲಾಖೆ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಎಎಸ್ಎಫ್ ನಿಂದ ಸಾರ್ವಜನಿಕರಿಗೆ ಯಾವುದೇ ಅಪಾಯ ಇಲ್ಲ. ಆದ್ದರಿಂದ ಅನಗತ್ಯ ಆತಂಕ ಬೇಡ ಎಂದು ಮನವಿ ಮಾಡಿದರು‌.ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆ.ಜಿ., ಶಂಕರನಾರಾಯಣ ವಲಯದ ಆರ್ ಎಫ್ ಒ ಸಂದೇಶ್, ಕುಂದಾಪುರ ಪಶು ಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಅರುಣ್ ಕುಮಾರ್ ಹೆಗ್ಡೆ, ಬೈಂದೂರಿನ ಡಾ. ಅರುಣ್ ಕುಮಾರ್, ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಗ್ರಾಪಂಗಳ‌ ಪಿಡಿಒಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದ.ಕ.: ಪಶುಪಾಲನಾ ಇಲಾಖೆಗೆ ತೀವ್ರ ಸಿಬ್ಬಂದಿ ಕೊರತೆ!
ಚೌಕಿ ರಂಗಶಾಲೆಯೂ ಆಗಿತ್ತು: ದಿವಾಣ ಶಿವಶಂಕರ ಭಟ್