ಕುಂದಾಪುರ ಯುಜಿಡಿಗೆ 56.54 ಕೋಟಿ ರು. ಮಂಜೂರು: ಬಾಲಕೃಷ್ಣ

KannadaprabhaNewsNetwork |  
Published : Oct 15, 2026, 02:45 AM IST
ಪೌರಾಡಳಿತ ಸಚಿವ ಬಾಲಕೃಷ್ಣ ಪ್ರಗತಿ ಪರಿಶೀಲನೆ ನಡೆಸಿದರು. | Kannada Prabha

ಸಾರಾಂಶ

ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 11 ವರ್ಷಗಳು ಕಳೆದರೂ ಅನುದಾನದ ಕೊರತೆ, ಭೂಸ್ವಾಧೀನ ಮತ್ತಿತರ ಕಾರಣಗಳಿಂದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಈಗ ಒಳಚರಂಡಿ ನಿರ್ಮಾಣಕ್ಕೆ 56.54 ಕೋಟಿ ರು ಸರ್ಕಾರದಿಂದ ಅನುಮೋದನೆಗೊಂಡಿದೆ.

ಕುಂದಾಪುರ: ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 11 ವರ್ಷಗಳು ಕಳೆದರೂ ಅನುದಾನದ ಕೊರತೆ, ಭೂಸ್ವಾಧೀನ ಮತ್ತಿತರ ಕಾರಣಗಳಿಂದ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಈಗ ಒಳಚರಂಡಿ ನಿರ್ಮಾಣಕ್ಕೆ 56.54 ಕೋಟಿ ರು ಸರ್ಕಾರದಿಂದ ಅನುಮೋದನೆಗೊಂಡಿದೆ. ಸಹಾಯಕ ಕಮಿಷನರ್ ಅವರು ತನಿಖೆ ನಡೆಸಿ, ಕಾಮಗಾರಿ ವಿಳಂಬಕ್ಕೆ ಕಾರಣರಾದವರ ವಿವರ, ಕಾಮಗಾರಿ ಕೈಗೊಳ್ಳಲು ಉಂಟಾದ ಅಡಚಣೆಯ ಮಾಹಿತಿ, ಕಾಮಗಾರಿ ಮುಂದುವರೆಸಲು ಬೇಕಾದ ಅನುದಾನ ಮತ್ತಿತರ ವರದಿ ನೀಡಬೇಕು ಎಂದು ಪೌರಾಡಳಿತ ಸಚಿವರಾದ ಹೆಚ್.ಸಿ ಬಾಲಕೃಷ್ಣ ಸೂಚಿಸಿದ್ದಾರೆ.

ಅವರು ಮಂಗಳವಾರ ಕುಂದಾಪುರ ಪುರಸಭೆಯಲ್ಲಿ ಪುರಸಭೆಯ ಒಳಚರಂಡಿ (ಯುಜಿಡಿ) ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯೋಜನೆಯ ವಿಳಂಬಕ್ಕೆ ಕಾರಣಗಳ ವರದಿ ಬಗ್ಗೆ ಬೆಂಗಳೂರಿನಲ್ಲಿ ಪ್ರತ್ಯೇಕ ಸಭೆ ಕರೆದು ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು.ನಗರದಲ್ಲಿ ಪೌರ ಕಾರ್ಮಿಕರುಗಳಿಗೆ ಖಾಯಂ ವಸತಿಗೃಹ ನಿರ್ಮಾಣಕ್ಕೆ 2 ಎಕರೆ ಭೂಮಿ ಗುರುತಿಸುವಂತೆ ಸೂಚಿಸಿದ ಸಚಿವರು, ತೆರಿಗೆ, ನಳ್ಳಿ ನೀರಿನ ಶುಲ್ಕ ವಸೂಲಿಯ ಗುರಿ ಸಾಧನೆಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು, ಸ್ವಚ್ಛ ಭಾರತ್ ಮಿಷನ್ ನಗರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು, ದಾರಿದೀಪ ಅಳವಡಿಕೆ, ನಿರ್ವಹಣೆ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದರು.ಪುರಸಭೆಗಳ ಮುಖ್ಯಾಧಿಕಾರಿಗಳು ಬೆಳಗ್ಗೆ 6 ಕ್ಕೆ ಕಚೇರಿಯಲ್ಲಿ ಹಾಜರಿದ್ದು, ಹಾಜರಾತಿ ದಾಖಲಿಸಬೇಕು. 6 ರಿಂದ 9 ರ ವರೆಗೆ ಸ್ಥಳ ಪರಿಶೀಲನೆ ಕೈಗೊಳ್ಳಬೇಕು. ಎಲ್ಲಾ ಅಧಿಕಾರಿಗಳು ಮಧ್ಯಾಹ್ನ 3.30 ರಿಂದ 5.30 ರವರೆಗೆ ಕಚೇರಿಗಳಲ್ಲಿ ಹಾಜರಿದ್ದು, ಸಾರ್ವಜನಿಕರ ಭೇಟಿಗೆ ಅವಕಾಶ ಮಾಡಿಕೊಡಬೇಕು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮಧ್ಯಾಹ್ನದ ಅವಧಿಯಲ್ಲಿ ಸಾರ್ವಜನಿಕರಿಂದ ಸಲ್ಲಿಕೆಯಾಗುವ ಅಹವಾಲು / ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.ಸಭೆಯಲ್ಲಿ ಕುಂದಾಪುರ ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ, ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ, ಸಹಾಯಕ ಕಮಿಷನರ್ ರಶ್ಮಿ ಎಸ್.ಆರ್, ಜಿಲ್ಲಾ ನಗರಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಶೆಟ್ಟಿ, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಆನಂದ್ ಜೆ. ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಹಾಗೂ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪುನರೂರು ಕ್ಷೇತ್ರ ಬ್ರಹ್ಮಕಲಶ ಲಾಂಛನ ಬಿಡುಗಡೆ
ಕುಂಟಿಕಾನಮಠ ದೇವಸ್ಥಾನದಲ್ಲಿ ನವರಾತ್ರಿ ಆಚರಣೆ