ಕುಂದಾಪುರ: ಮಕ್ಕಳಿಗೆ ಆಸ್ತಿಪಾಸ್ತಿ ನೀಡುವುದಕ್ಕಿಂತ ಉತ್ತಮ ಸಂಸ್ಕಾರ ನೀಡುವುದು ಅತ್ಯಂತ ಶ್ರೇಷ್ಠ. ಸಂಸ್ಕಾರವೇ ಮಕ್ಕಳ ಬದುಕಿನ ನಿಜವಾದ ಆಸ್ತಿ ಎಂದು ಯಡೂರು ಹೊಸನಗರ ತಾಲೂಕು ಸಮೂಹ ಸಂಪನ್ಮೂಲ ವ್ಯಕ್ತಿ, ಶಿಕ್ಷಕಿ ಹಾಗೂ ಸಾಹಿತಿ ರೇಖಾ ಪ್ರಭಾಕರ್ ಹೇಳಿದರು.ಅವರು ಇಲ್ಲಿನ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಯಡಾಡಿ- ಮತ್ಯಾಡಿ ವಿದ್ಯಾರಣ್ಯ ಕ್ಯಾಂಪಸ್‌ನಲ್ಲಿ ಆಯೋಜಿಸಿದ್ದ ‘ಸುಜ್ಞಾನ ದೀಪಾವಳಿ-2026’ ಸಂಭ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ತಂದೆ-ತಾಯಿಯ ತ್ಯಾಗ ಮತ್ತು ಪರಿಶ್ರಮವನ್ನು ಅರಿತು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಜೀವನದಲ್ಲಿ ಸಾಧನೆ ಮಾಡಬೇಕು. ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವುದರೊಂದಿಗೆ ಸಾಧಕ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕೂ ನೆರವಾಗುತ್ತಿರುವ ಸುಜ್ಞಾನ ಸಂಸ್ಥೆಯ ಸೇವೆ ಶ್ಲಾಘನೀಯ ಎಂದರು.ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದ ಸಂಸ್ಥೆಯ ಕೋಶಾಧಿಕಾರಿ ಭರತ್ ಶೆಟ್ಟಿ, ದೀಪಾವಳಿ ತ್ಯಾಗ, ಪ್ರೀತಿ, ಸಂಸ್ಕೃತಿ ಮತ್ತು ಜೀವನ ಮೌಲ್ಯಗಳನ್ನು ಸಾರುವ ಹಬ್ಬವಾಗಿದೆ. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಯೊಂದಿಗೆ ಹಬ್ಬ ಆಚರಿಸಲು ಈ ಬಾರಿ ರಜೆ ನೀಡಲಾಗಿದ್ದರೂ, ಕ್ಯಾಂಪಸ್‌ನ ದೀಪಾವಳಿ ಸಂಭ್ರಮದಿಂದ ಅವರು ವಂಚಿತರಾಗಬಾರದು ಎಂಬ ಉದ್ದೇಶದಿಂದ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಡಾ. ರಮೇಶ್ ಶೆಟ್ಟಿ ಮಾತನಾಡಿ, ಶಿಕ್ಷಣ ಸಂಸ್ಥೆಯ ಉದ್ದೇಶ ಕೇವಲ ಪಠ್ಯ ಶಿಕ್ಷಣ ನೀಡುವುದಕ್ಕೆ ಸೀಮಿತವಾಗಬಾರದು. ವಿದ್ಯಾರ್ಥಿಗಳಲ್ಲಿ ಉತ್ತಮ ಮನಸ್ಸು, ಸಂಸ್ಕಾರ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಅರಿವು ಬೆಳೆಸುವುದರ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವುದು, ಹಾಸ್ಟೆಲ್‌ನಲ್ಲಿ ವಾಸಿಸುವ ವಿದ್ಯಾರ್ಥಿಗಳಿಗೆ ಮನೆಯ ಹಬ್ಬದ ವಾತಾವರಣದ ಅನುಭವ ನೀಡುವುದೂ ಸಂಸ್ಥೆಯ ಉದ್ದೇಶವಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರತಾಪಚಂದ್ರ ಶೆಟ್ಟಿ, ಕೋಶಾಧಿಕಾರಿ ಭರತ್ ಶೆಟ್ಟಿ ಮತ್ತಿತರರಿದ್ದರು. ರಜತ್ ಭಟ್ ನಿರೂಪಿಸಿದರು.