ಜೀವನದಿ ಎಂದೇ ಖ್ಯಾತಿಯಾಗಿರುವ ಕೃಷ್ಣಾ ನದಿ ಕೂಡ ಈಗ ಬರಗಾಲಕ್ಕೆ ತತ್ತರಿಸಿ ಹೋಗಿದೆ. ಈ ಭಾಗದ ಜನರ, ರೈತರ ಜೀವನಾಡಿಯಾಗಿದ್ದ ಕೃಷ್ಣಾ ನದಿಯಲ್ಲಿ ನೀರಿನ ಸಂಗ್ರಹಮಟ್ಟದ ತೀವ್ರ ಕುಸಿದಿದೆ.
ಕೇಶವ ಕುಲಕರ್ಣಿ
ಕನ್ನಡಪ್ರಭ ವಾರ್ತೆ ಜಮಖಂಡಿಜೀವನದಿ ಎಂದೇ ಖ್ಯಾತಿಯಾಗಿರುವ ಕೃಷ್ಣಾ ನದಿ ಕೂಡ ಈಗ ಬರಗಾಲಕ್ಕೆ ತತ್ತರಿಸಿ ಹೋಗಿದೆ. ಈ ಭಾಗದ ಜನರ, ರೈತರ ಜೀವನಾಡಿಯಾಗಿದ್ದ ಕೃಷ್ಣಾ ನದಿಯಲ್ಲಿ ನೀರಿನ ಸಂಗ್ರಹಮಟ್ಟದ ತೀವ್ರ ಕುಸಿದಿದೆ. ಇದನ್ನೇ ನಂಬಿಕೊಂಡಿರುವ ಈ ಭಾಗದ ಜನರಿಗೆ ಕುಡಿಯುವ ನೀರಿಗೂ ತತ್ವಾರ ಅನುಭವಿಸುವ ಕಾಲ ಸನ್ನಿಹಿತವಾಗಿದೆ. ಎಂದೆಂದಿಗೂ ನೀರಿಗೆ ಹೆಚ್ಚು ಸಮಸ್ಯೆ ಅನುಭವಿಸದೇ ಇದ್ದ ಜನರು ಈ ಬಾರಿ ಹೆಚ್ಚು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳು ನಿಚ್ಚಳವಾಗಿವೆ.ಪ್ರಸಕ್ತ ಋತುಮಾನದಲ್ಲಿ ಬರಗಾಲ ಹೆಚ್ಚು ಆವರಿಸಿದ್ದು, ಮಳೆಗಾಲದಲ್ಲಿ ಹೆಚ್ಚು ಮಳೆಯಾಗದ ಕಾರಣ ಸಂಗ್ರಹವಾಗಿದ್ದ ನೀರು ಕೂಡ ಖಾಲಿಯಾಗುವತ್ತ ಸಾಗುತ್ತಿದೆ. ಹೀಗಾಗಿ ಕುಡಿಯುವ ನೀರಿಗೂ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠೋರವಾಗಲಿವೆ ಎಂಬುವುದರಲ್ಲಿ ಎರಡು ಮಾತಿಲ್ಲ. ಶ್ರಮಬಿಂದುವಿನಲ್ಲಿ ಸಂಗ್ರಹವಾಗಿರುವ ನೀರು ಈಗಾಗಲೇ ಅರ್ಧಕ್ಕಿಂತ ಹೆಚ್ಚು ಖಾಲಿಯಾಗಿದೆ. ಹೀಗಾಗಿ ಆದ್ರವಾಗಿರಬೇಕಿದ್ದ ನದಿ ಈಗ ಬಿಸಿಲಿನ ಬೇಗೆ ನೀರನ್ನು ಸಂಪೂರ್ಣ ಆಪೋಶನ ಮಾಡಿಕೊಳ್ಳುತ್ತಿದೆ. ಇದು ಜನರ ಆತಂಕಕ್ಕೆ ಕಾರಣ.
ತಾಲೂಕಿನ ಪ್ರಮುಖ ನೀರಿನ ಆಧಾರವಾಗಿರುವ ಕೃಷ್ಣಾ ನದಿಯಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆ ಆಗುತ್ತಿದೆ. ಹೀಗಾಗಿ ರೈತರು, ಸಾರ್ವಜನಿಕರನ್ನು ಆತಂಕಕ್ಕೆ ದೂಡಿದೆ. ಬೇಸಿಗೆಗೂ ಮುನ್ನವೇ ನೀರಿನ ಅಭಾವ ತಲೆ ಎತ್ತುವ ಎಲ್ಲಾ ಸಾಧ್ಯತೆಗಳಿವೆ. ಈಗಲೇ ಪರಿಸ್ಥಿತಿ ಹೀಗಿರುವಾಗ ಬೇಸಿಗೆಯ ಪರಿಸ್ಥಿತಿ ಜ್ಞಾಪಿಸಿಕೊಳ್ಳುವುದು ಕೂಡ ಕಷ್ಟವಾಸಾಧ್ಯವಾಗುತ್ತಿದೆ. ಕೃಷ್ಣಾ ನದಿಯಿಂದ ಜಮಖಂಡಿ, ರಬಕವಿ ಬನಹಟ್ಟಿ, ತೇರದಾಳ ಸೇರಿ ಹಲವು ತಾಲೂಕುಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ನಾಲ್ಕು ದಿನಗಳಿಗೊಮ್ಮೆ ನೀರು ಪೂರೈಸಲಾಗುತ್ತದೆ. ಇನ್ನೂ ಮಳೆಗಾಲ ಈಗಷ್ಟೇ ಮುಗಿದು ಚಳಿಗಾಲ ಆರಂಭವಾಷ್ಟೇ. ಮುಂದಿನ ಆರೇಳು ತಿಂಗಳ ಪರಿಸ್ಥಿತಿ ಏನು ಎಂಬ ಪ್ರಶ್ನೆ ಜನರಲ್ಲಿ ದಿಗ್ಭ್ರಮೆ ಮೂಡಿಸಿದೆ.ಎರಡು ತಿಂಗಳಲ್ಲಿ ನೀರು ಖಾಲಿ?: ನದಿಯ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಡಿಸೆಂಬರ್ ಕೊನೆಗೆ ಅಥವಾ ಜನವರಿಯಲ್ಲಿ ನದಿ ಸಂಪೂರ್ಣ ಬತ್ತಿಹೋಗುವ ಆತಂಕ ಎದುರಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಕೊಳವೆ ಬಾವಿಗಳಲ್ಲಿ ನೀರಿನ ಕೊರತೆ ಉಂಟಾಗಿದೆ. ಜಮಖಂಡಿ ನಗರದ ಹಲವು ಪ್ರದೇಶಗಳಲ್ಲಿ 80 ರಿಂದ 100 ಅಡಿಗಳಲ್ಲಿ ದೊರಕುತ್ತಿದ್ದ ಅಂತರ್ಜಲವೀಗ 500 ಅಡಿ ಕೊಳಬಾವಿ ತೋಡಿದರೂ ಸಿಗುತ್ತಿಲ್ಲ. ಮಳೆಗಾಲದಲ್ಲಿ ನದಿಯಲ್ಲಿ ಸಂಗ್ರಹವಾಗಿದ್ದ ನೀರಿನ ಶೇ.70ರಷ್ಟು ಖರ್ಚಾಗಿದೆ. ಶೇ.30ರಷ್ಟು ಉಳಿದಿರುವ ನೀರನ್ನು 7 ತಿಂಗಳ ಕಾಲ ಮಿತವಾಗಿ ಬಳಸಬೇಕಿದೆ.
ತಾಲೂಕಿನ ಚಿಕ್ಕಪಡಸಗಿ ಶ್ರಮಬಿಂದುಸಾಗರದಲ್ಲಿ ನೀರಿನ ಪ್ರಮಾಣ ಶೇ.50ಕ್ಕೂ ಅಧಿಕ ಪ್ರಮಾಣದಲ್ಲಿ ಕುಸಿದಿದ್ದು ರೈತರ ಆತಂಕಕ್ಕೆ ಕಾರಣವಾಗಿದೆ. ಮಳೆಗಾಲ ಇನ್ನೂ 6-7 ತಿಂಗಳು ದೂರವಿದ್ದು, ಕೃಷಿ ಚಟುವಟಿಕೆಗಳು ನಿಂತು ಹೋಗಲಿವೆ. ಕಬ್ಬು ಕಟಾವಿನ ನಂತರ ಉಳಿಯುವ ಕಬ್ಬಿನ ಕುಳಿ ಉಳಿಸಿಕೊಳ್ಳಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ಮುಂಬರುವ ವರ್ಷದಲ್ಲಿ ಕಬ್ಬಿನ ಬೆಳೆ ಬಹಳಷ್ಟು ಕಡಿಮೆಯಾಗುವ ಆತಂಕ ಕಾರ್ಖಾನೆಗಳನ್ನು ಕಾಡುತ್ತಿದೆ. ಬೇಸಿಗೆ ಕಳೆಯುವುದು ಅತ್ಯಂತ ಕಷ್ಟಕರವಾಗಲಿದ್ದು, ಪರಿಸ್ಥಿತಿ ಕೈಮೀರುವ ಮುನ್ನವೇ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂಬುದು ರೈತರ ಆಗ್ರಹ.57 ಸಾವಿರ ಹೆಕ್ಟೇರ್ ಬೆಳೆಹಾನಿ:ಮಳೆಯ ಕೊರತೆಯಿಂದಾಗಿ ತಾಲೂಕಿನ 57 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳು ನಾಶವಾಗಿದೆ. ಜತೆಗೆ ಹಿಂಗಾರು ಮಳೆಯಾಗದ ಕಾರಣ ಜೋಳ, ಗೋಧಿ, ಜವೆ ಗೋಧಿ ಮುಂತಾದ ಬೆಳೆಗಳ ಬಿತ್ತನೆಯಾಗಿಲ್ಲ. ನದಿಪಾತ್ರದ ಕೆಲ ಗ್ರಾಮಗಳಲ್ಲಿ ನೀರಿನ ವ್ಯವಸ್ಥೆ ಹೊಂದಿರುವ ರೈತರು ಹಿಂಗಾರು ಬಿತ್ತನೆ ಮಾಡಿದ್ದರೂ ಪ್ರಮಾಣ ಅತ್ಯಲ್ಪ. ಬೆಳೆ ಇಲ್ಲದ ಕಾರಣ ಪ್ರಮುಖ ಆಹಾರ ಧಾನ್ಯಗಳಾದ ಅಕ್ಕಿ, ಜೋಳ ಬೇಳೆ ಕಾಳುಗಳ ದರಗಳು ನೂರರ ಗಡಿ ದಾಟಿವೆ. ಜೋಳದ ಬೆಲೆ ನೂರು ರೂಪಾಯಿ ವರೆಗೆ ತಲುಪಿದ್ದು ಇತಿಹಾಸದಲ್ಲೇ ಇದೇ ಮೊದಲು.