ಜಮಖಂಡಿ ತಾಲೂಕಿನ ಕವಟಗಿ ಬಳಿಯಿರುವ ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ಪ್ರಾದೇಶಿಕ ಆಯುಕ್ತರ ಆದೇಶದಂತೆ 0.7 ಟಿಎಂಸಿ ನೀರು ಹರಿಸಬೇಕೆಂದು ಸಾವಳಗಿ ಭಾಗದ ಗೋಠೆ, ಗದ್ಯಾಳ, ಕಲಬೀಳಗಿ, ಕಾಜಿಬೀಳಗಿ ಗ್ರಾಮಗಳ ರೈತ ಮುಖಂಡರು ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಕವಟಗಿ ಬಳಿಯಿರುವ ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ಪ್ರಾದೇಶಿಕ ಆಯುಕ್ತರ ಆದೇಶದಂತೆ 0.7 ಟಿಎಂಸಿ ನೀರು ಹರಿಸಬೇಕೆಂದು ಸಾವಳಗಿ ಭಾಗದ ಗೋಠೆ, ಗದ್ಯಾಳ, ಕಲಬೀಳಗಿ, ಕಾಜಿಬೀಳಗಿ ಗ್ರಾಮಗಳ ರೈತ ಮುಖಂಡರು ಆಗ್ರಹಿಸಿದ್ದಾರೆ. ನಗರದ ರಮಾ ನಿವಾಸ ನಿರೀಕ್ಷಣಾ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಜಿಪಂ ಸದಸ್ಯ ಶಿವಾನಂದ ಪಾಟೀಲ ಜಮಖಂಡಿ ತಾಲೂಕಿನ 12 ಗ್ರಾಮಗಳು, ಅಥಣಿ ತಾಲೂಕಿನ 4 ಹಾಗೂ ಬಬಲೇಶ್ವರ ತಾಲೂಕಿನ 12 ಗ್ರಾಮಗಳ ಜನ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವಂತೆ ಆಗ್ರಹಿಸಿದರು. ಭೀಕರ ಬರಗಾಲವಿದೆ. ನೀರಿಗಾಗಿ ಎಲ್ಲೆಡೆ ಹಾಹಾಕಾರ ಉಂಟಾಗಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಮಳೆಗಾಲದಲ್ಲಿ ಮಾತ್ರ ನೀರು ಹರಿಸಬೇಕೆಂಬ ಆದೇಶವಿದೆ. ಈ ಭಾಗದ ರೈತರಿಗೆ ನೀರಿನ ಕೊರತೆ ಉಂಟಾಗುತ್ತದೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಭಾಗಕ್ಕೆ ಬೆಳೆಗಳಿಗೆ ನಾವು ನೀರು ಕೇಳುತ್ತಿಲ್ಲ. ಕೇವಲ ಕುಡಿಯುವ ನೀರಿಗಾಗಿ ಕೃಷ್ಣಾ ಹಿನ್ನೀರಿನಲ್ಲಿ 0.7 ಟಿಎಂಸಿ ನೀರು ಕೇಳುತ್ತಿದ್ದೇವೆ. ಗಲಗಲಿ ಬ್ಯಾರೇಜ್‌ ಬಾಗಿಲು ತೆರೆದರೆ, ಚಿಕ್ಕಪಡಸಲಗಿ ಬ್ಯಾರೇಜ್‌ ವರೆಗೆ ಹಿನ್ನೀರು ಹಿಮ್ಮುಖವಾಗಿ ಹರಿದುಬರುತ್ತದೆ. ಅದನ್ನು ಮಾತ್ರ ನಮಗೆ ಕುಡಿಯಲು ಬಿಡಿ ಎಂದು ಮನವಿ ಮಾಡಿದರು.

ಹೋರಾಟದ ಎಚ್ಚರಿಕೆ ;ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ರೈತ ಮುಖಂಡರು ನೀರು ಹರಿಸಲು ಆಗ್ರಹಿಸಿ ಹೋರಾಟ ನಡೆಸ ಬೇಕಾದ ಅನಿವಾರ್ಯತೆ ಎದುರಾಗಿದೆ. ಮೂರ್ನಾಲ್ಕು ದಿನಗಳಲ್ಲಿ ಸರಿಯಾದ ನಿರ್ಧಾರವಾಗದೇ ಹೋದಲ್ಲಿ ಬೆಂಗಳೂರು ಚಲೋ ನಡೆಸಲಾಗುವುದು ಎಂದು ಕಲಬೀಳಗಿ ರಾಜುಗೌಡ ಪಾಟೀಲ ತಿಳಿಸಿದರು.

ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರು ಹಾಗೂ ಜನ ಪ್ರತಿನಿಧಿಗಳು ಮಹರಾಷ್ಟ್ರದ ಕೋಯ್ನಾ ಡ್ಯಾಂನಿಂದ ನೀರು ಬಿಡಿಸಿ ಕೊಳ್ಳಲು ಪಕ್ಷಾತೀತವಾಗಿ ಪ್ರಯತ್ನಿಸಬೇಕು. ಸಮರೋಪಾದಿಯಲ್ಲಿ ಕೆಲಸ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು. ಸರ್ಕಾರ ದೀರ್ಘಾವಧಿ ಬೆಳೆಗಳಾದ ದ್ರಾಕ್ಷಿ, ದಾಳಿಂಬೆ ಬೆಳೆಗಳನ್ನು ಉಳಿಸಿಕೊಳ್ಳಲು ಕೂಡಲೇ ಕ್ರಮ ಜರುಗಿಸಬೇಕು ಎಂದು ಹೇಳಿದರು.

ದುಂಡುರಾವ ಪವಾರ, ಶ್ರೀಶೈಲ ಕಾಜೀಬಿಳಗಿ, ಸಿದ್ದಪ್ಪ ಬಡಿಗೇರ, ಕಾಶೀನಾಥ ಬಡಿಗೇರ, ಸದಾಶಿವ ಕಂಬಾಗಿ, ಇತರರಿದ್ದರು.