ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಹೋರಾಟಗಾರರ ಮೇಲೆ ನಡೆದ ಪೊಲೀಸ್ ಲಾಠಿ ಪ್ರಹಾರ ಘಟನೆ ಖಂಡಿಸಿ, ಮೀಸಲಾತಿ ಹೋರಾಟ ಮುಂದುವರಿಸಲು ಡಿಸೆಂಬರ್ 10ರಂದು ಬೆಳಗಾವಿಯ ಸುವರ್ಣಸೌಧ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಹೋರಾಟಗಾರರ ಮೇಲೆ ನಡೆದ ಪೊಲೀಸ್ ಲಾಠಿ ಪ್ರಹಾರ ಘಟನೆ ಖಂಡಿಸಿ, ಮೀಸಲಾತಿ ಹೋರಾಟ ಮುಂದುವರಿಸಲು ಡಿಸೆಂಬರ್ 10ರಂದು ಬೆಳಗಾವಿಯ ಸುವರ್ಣಸೌಧ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.ಸದಾನಂದ ಬ್ಯಾಂಕಿನ ಸಭಾಭವನದಲ್ಲಿ ತಾಲೂಕು ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ 2024ರ ಡಿಸೆಂಬರ್ 10ರಂದು ನಡೆದ ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಲಾಠಿ ಪ್ರಹಾರ ಹಾಗೂ ಹೋರಾಟಗಾರರ ಮೇಲಿನ ದಬ್ಬಾಳಿಕೆಗೆ ಎರಡು ವರ್ಷ ಪೂರ್ಣಗೊಳ್ಳುತ್ತಿದೆ. ಈ ಘಟನೆ ನೆನಪಿನಲ್ಲಿ ಹಾಗೂ ಸಮಾಜದ ಮೀಸಲಾತಿ ಬೇಡಿಕೆಗೆ ಸರ್ಕಾರದ ಗಮನ ಸೆಳೆಯಲು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದರು.ಸಮಾಜದ ನ್ಯಾಯಯುತ ಬೇಡಿಕೆ ಈಡೇರುವವರೆಗೆ ಹೋರಾಟದ ಧ್ವನಿ ನಿಲ್ಲುವುದಿಲ್ಲ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಹೋರಾಟಗಾರರ ಮೇಲೆ ನಡೆದ ದೌರ್ಜನ್ಯ ಮರೆಯದೆ, ಶಾಂತಿಯುತ ಹೋರಾಟದ ಮೂಲಕ ಮತ್ತೊಮ್ಮೆ ಸರ್ಕಾರಕ್ಕೆ ತಮ್ಮ ಬೇಡಿಕೆ ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಏಗಪ್ಪ ಸವದಿ ಮಾತನಾಡಿ, ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಬೇಡಿಕೆ ಹಲವು ವರ್ಷಗಳಿಂದ ಹೋರಾಟದ ರೂಪದಲ್ಲಿ ಮುಂದುವರಿದಿದೆ. ಸಮುದಾಯದ ಜನರು ತಮ್ಮ ಹಕ್ಕಿಗಾಗಿ ವಿವಿಧ ಹಂತಗಳಲ್ಲಿ ಪ್ರತಿಭಟನೆ, ಸಮಾವೇಶ ಹಾಗೂ ಹೋರಾಟ ಬೆಂಬಲಿಸಿದ್ದು, ಈ ಉಪವಾಸ ಸತ್ಯಾಗ್ರಹ, ಮೀಸಲಾತಿ ಬೇಡಿಕೆಗೆ ಮತ್ತೆ ಒಗ್ಗಟ್ಟಿನ ಧ್ವನಿ ಮೊಳಗಲಿದೆ ಎಂದರು. ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾದೇವ ಇಟ್ಟಿ ಮಾತನಾಡಿದರು. ಈ ವೇಳೆ ಮುಖಂಡರಾದ ಕಾಶಿನಾಥ ಚನವೀರ, ಸುಭಾಸ ಕೊಪ್ಪದ, ಆನಂದ ಬಿರಾದಾರ, ವಕೀಲ ಶಿವಾನಂದ ಪಾರಶೆಟ್ಟಿ ಸೇರಿ ಇತರರು ಇದ್ದರು.