ಕನ್ನಡಪ್ರಭ ವಾರ್ತೆ ಕುಣಿಗಲ್ ಕಳೆದ ಒಂದು ವಾರದ ಹಿಂದೆ ಕುಣಿಗಲ್ ನ ಮಾರ್ಕೋನಹಳ್ಳಿ ಜಲಾಶಯದ ಸ್ವಯಂ ಚಾಲಿತ ಸೈಫೋನ್ ನೀರಿಗೆ ಬಲಿಯಾಗಿದ್ದ ಆರು ಮಂದಿಯ ಪೈಕಿ ಒಂದು ವರ್ಷದ ಮಗು ಇದುವರೆವಿಗೂ ಪತ್ತೆ ಆಗಿರಲಿಲ್ಲ ಎಂಬ ಕಾರಣಕ್ಕೆ ಕುಣಿಗಲ್ ಶಾಸಕ ಡಾ. ರಂಗನಾಥ್ ಅಗ್ನಿಶಾಮಕ ಸಿಬ್ಬಂದಿ ಜೊತೆಯಲ್ಲಿ ಸ್ವತಃ ತಾವೇ ನೀರಿಗಿಳಿದು ಶೋಧ ಕಾರ್ಯ ನಡೆಸಿದರು. ಬೆಳಿಗ್ಗೆ 8:30 ಕ್ಕೆ ಕಾರ್ಯಾಚರಣೆಯ ಆರಂಭಿಸಿದ ಕುಣಿಗಲ್ ಶಾಸಕರು ಶ್ರೀರಂಗಪಟ್ಟಣ ನಾಗಮಂಗಲ ಹಾಗೂ ಕುಣಿಗಲ್ ನ 25 ಅಗ್ನಿಶಾಮಕ ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ನಡೆಸಿ ಸುಮಾರು ಎಂಟು ಕಿಲೋಮೀಟರ್ ಉದ್ದದ ಶಿಂಷಾ ಎಡ ಮತ್ತು ಬಲ ಭಾಗದ ಹಲವಾರು ಪೊದೆಗಳು ಕಲ್ಲು ಮರದ ಪೋಟರೆ ಸೇರಿದಂತೆ ಹಲವಾರು ಸಂದುಗಳಲ್ಲಿ ಶವವನ್ನು ಹುಡುಕುವ ಪ್ರಯತ್ನ ಮಾಡಿದರು. ಮೋಟಾರ್ ಚಾಲಿತ ಬೋಟ್ ನಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಹಾಗೂ ಆರು ಮಂದಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಕಳೆದ 8 ದಿನಗಳ ಹಿಂದೆ ಆರು ಜನ ನೀರಿನಲ್ಲಿ ಕೊಚ್ಚಿ ಹೋಗಿದ್ದು ನಂತರದ ದಿನಗಳಲ್ಲಿ ಐದು ಶವಗಳನ್ನು ಹಲವಾರು ಸ್ವಯಂಸೇವಕರು, ಅಗ್ನಿಶಾಮಕ ಸಿಬ್ಬಂದಿ ಹುಡುಕಿ ಶವ ಸಂಸ್ಕಾರ ನಡೆಸಲಾಗಿತ್ತು ಇದುವರೆಗೂ ಸಿಗದ ಒಂದು ವರ್ಷದ ಮಗುವಿನ ಪತ್ತೆಗಾಗಿ ಮಾಡಿದ ಪ್ರಯತ್ನಕ್ಕೆ ಫಲ ಸಿಗಲಿಲ್ಲ.
ಕಳೆದ ಮೂರು ದಿನಗಳಿಂದ ತುರುವೇಕೆರೆ ಭಾಗದಲ್ಲಿ ಹೆಚ್ಚು ನೀರು ಹೇಮಾವತಿ ಮತ್ತು ಮಳೆಯ ಆಶ್ರಿತವಾಗಿ ಪ್ರತಿದಿನ 1900 ಯು ಸೆಕ್ಸ್ ನೀರು ಹರಿಯುತ್ತಿದ್ದು ಈ ನೀರಿನ ತೀವ್ರತೆಗೆ ಶವ ಕಿಲೋಮೀಟರ್ ಗಟ್ಟಲೆ ಹೋಗಿರಬಹುದು ಎಂದು ಹಲವಾರು ಅನುಮಾನಗಳನ್ನು ಸಿಬ್ಬಂದಿಗಳು ವ್ಯಕ್ತಪಡಿಸಿದ್ದಾರೆ.ಕಾರ್ಯಾಚರಣೆ ನಂತರ ಮಾತನಾಡಿದ ಕುಣಿಗಲ್ ಶಾಸಕ ಡಾ.ರಂಗನಾಥ್ ಮೃತ ಕುಟುಂಬದ ನೋವನ್ನು ಒರೆಸುವ ಒಂದು ಪ್ರಯತ್ನವನ್ನು ಮಾಡಿದ್ದೇವೆ. ಹಲವು ಸಂದರ್ಭದಲ್ಲಿ ಎರಡು ಮೂರು ಅಥವಾ ವಾರದ ನಂತರ ಶವಗಳು ಸಿಕ್ಕ ಉದಾಹರಣೆಗಳು ಇವೆ. ಆದ್ದರಿಂದ ಈ ಪ್ರಯತ್ನ ಮಾಡಿದ್ದು ನಮಗೆ ಈ ದಿನ ಫಲಕಾರಿ ಆಗಲಿಲ್ಲ ಈ ಹಿಂದೆ ಹಲವಾರು ಮುಳುಗು ತಜ್ಞರು ಈಜು ಪಟುಗಳು ಹಾಗೂ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶವವನ್ನು ಹುಡುಕುವ ಪ್ರಯತ್ನವನ್ನು ನಿರಂತರವಾಗಿ ಮಾಡಿದ್ದಾರೆ. ಮುಂದಿನ ಪ್ರಯತ್ನವನ್ನು ನಾವು ಕೂಡ ಮಾಡುತ್ತೇವೆ ಎಂದರು. ಮೃತ ಕುಟುಂಬಕ್ಕೆ ಸರ್ಕಾರದಿಂದ ಹೆಚ್ಚಿನ ಪರಿಹಾರ ಕೊಡಿಸುವ ಸಂಬಂಧ ಈಗಾಗಲೇ ಮಾತುಕತೆ ನಡೆಸಿದ್ದೇವೆ. ತಕ್ಷಣ ಅದಕ್ಕೆ ಅಧಿಕಾರಿಗಳನ್ನು ಸ್ಪಂದಿಸುವಂತೆ ಉಪಮುಖ್ಯಮಂತ್ರಿಗಳ ಗಮನ ಸೆಳೆಯಲಾಗಿದೆ ಎಂದರು.