ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕುಪ್ಮಾ (ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ) ಸಮಿತಿ ಪದಗ್ರಹಣ ಸಮಾರಂಭ ಅ.19ರಂದು ಬೆಳಗ್ಗೆ 11ಕ್ಕೆ ನಗರದ ಕೊಡಿಯಾಲಬೈಲ್‌ನಲ್ಲಿರುವ ಓಷಿಯನ್ ಪರ್ಲ್ ಹೊಟೇಲ್‌ನಲ್ಲಿ ನಡೆಯಲಿದೆ ಎಂದು ಕುಪ್ಮಾ ದ.ಕ. ಜಿಲ್ಲಾ ಸಮಿತಿಯ ನಿಯೋಜಿತ ಅಧ್ಯಕ್ಷ ಯುವರಾಜ್ ಜೈನ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಭೋಜೆ ಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ರಾಜೇಶ್ವರಿ ಎಚ್.ಎಚ್., ರಾಜ್ಯ ಕುಪ್ಮಾ ಸಮಿತಿ ಗೌರವಾಧ್ಯಕ್ಷರಾದ ಕೆ. ರಾಧಾಕೃಷ್ಣ ಶೆಣೈ, ಡಾ.ಎಂ.ಬಿ. ಪುರಾಣಿಕ್, ಡಾ.ಕೆ.ಸಿ. ನಾಯ್ಕ್, ಕಾರ್ಯದರ್ಶಿ ಪ್ರೊ. ನರೇಂದ್ರ ಎಲ್. ನಾಯಕ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಪ್ಮಾ ರಾಜ್ಯ ಸಮಿತಿಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.2022ರ ಡಿ.9ರಂದು ಕುಪ್ಮಾ ಸಂಘಟನೆ ಉದ್ಘಾಟನೆಗೊಂಡು ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಕಾರ್ಯತತ್ಪರವಾಗಿದೆ. ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯಲ್ಲಿ ಕಳೆದ 3 ವರ್ಷಗಳಲ್ಲಿ ಸರ್ಕಾರದೊಂದಿಗೆ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಘಟನೆ ಕಾರ್ಯ ಪ್ರವೃತ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊಂಡ ಸಂಘಟನೆ ಇದೀಗ ರಾಜ್ಯವ್ಯಾಪಿ ತನ್ನ ಸದಸ್ಯತ್ವವನ್ನು ವಿಸ್ತರಿಸಿಕೊಂಡಿದೆ ಎಂದರು.
ಪದಗ್ರಹಣ ಕಾರ್ಯಕ್ರಮದಲ್ಲಿ ಹಾಜರಾಗಲು ಇಚ್ಛಿಸುವವರು ಇಮೇಲ್ email@kupma.org ಮೂಲಕ ಖಚಿತಪಡಿಸಬಹುದು. ಈ ವರ್ಷ ರಾಜ್ಯದ ಸುಮಾರು 1000 ಕಾಲೇಜುಗಳನ್ನು ಕುಪ್ಮಾ ಜತೆ ಜೋಡಣೆ ಮಾಡುವ ನಿಟ್ಟಿನಲ್ಲಿ ಕೆಲಸ ಸಾಗಿದೆ ಎಂದರು.
ಕುಪ್ಮಾ ನಿಯೋಜಿತ ಕಾರ್ಯದರ್ಶಿ ಡಾ. ಮಂಜುನಾಥ್ ಎಸ್. ರೇವಣ್ಕರ್, ಉಪಾಧ್ಯಕ್ಷ ರವೀಂದ್ರ ಪಿ., ಖಚಾಂಚಿ ರಮೇಶ್ ಕೆ., ಸಂಯೋಜಕ ಕರುಣಾಕರ ಬಳ್ಕೂರು ಇದ್ದರು.