ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಗೋಪಾಲಕೃಷ್ಣ ಕುಪ್ಪಾಳು ಮುರಾರ್ಜಿ ವಸತಿ ಶಾಲೆಗೆ ಭೇಟಿ
ಕನ್ನಡಪ್ರಭ ವಾರ್ತೆ, ಕಡೂರುವಸತಿ ಶಾಲೆಯ ಮಕ್ಕಳ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ಸಿಡಿದು ಬಿದ್ದಿದ್ದ ಪೋಷಕರು ಹಾಗೂ ಗ್ರಾಮಸ್ಥರ ಆಗ್ರಹದಿಂದಾಗಿ ಕುಪ್ಪಾಳು ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಶೈಲಾ ಕೆ.ಪಿ. ಅವರನ್ನು ಶೃಂಗೇರಿಗೆ ವರ್ಗಾವಣೆ ಮಾಡಿ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ.
ಗುರುವಾರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ.ಗೋಪಾಲಕೃಷ್ಣ ಕುಪ್ಪಾಳು ಮುರಾರ್ಜಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ, ಶಾಲೆಯ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೊಡನೆ ಸಭೆ ನಡೆಸಿ,ನಂತರ ಮಾತನಾಡಿದರು. ಈ ಶಾಲೆಗೆ ಒಳ್ಳೆಯ ಹೆಸರಿದೆ. ಪ್ರತೀ ವರ್ಷ ಅತ್ಯುತ್ತಮ ಫಲಿತಾಂಶ ಬರುತ್ತಿದೆ. ಅದೇ ಫಲಿತಾಂಶ ಮುಂದುವರೆಯಬೇಕು ಎಂಬ ಧ್ಯೇಯ ನಿಮ್ಮೆಲ್ಲರದ್ದಾಗ ಬೇಕು. ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸಬೇಕು. ಯಾವುದೇ ರೀತಿ ಬೇಜಾವಾಬ್ದಾರಿ ನಡವಳಿಕೆ ಸಹಿಸುವುದಿಲ್ಲ ಎಂದ ಅವರು ಶನಿವಾರ ಪೋಷಕರ ಸಭೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.ನಮ್ಮ ಮೊದಲ ಆದ್ಯತೆ ಇಲ್ಲಿರುವ ಭಯದ ವಾತಾವರಣ ದೂರ ಮಾಡಿ ವಿದ್ಯಾರ್ಥಿಗಳಿಗೆ ಭಯ ಮುಕ್ತ ವಾತಾವರಣದಲ್ಲಿ ನಿರಾತಂಕವಾಗಿ ಓದಿನ ಕಡೆ ಗಮನ ಹರಿಸುವಂತೆ ಮಾಡುವುದಾಗಿದೆ. ಇಲ್ಲಿ ಕೆಲ ಕಹಿ ಘಟನೆಗಳು ನಡೆದಿದ್ದು, ತನಿಖೆ ನಡೆಯಲಿದೆ .ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಯಾರನ್ನೂ ರಕ್ಷಿಸುವ ಪ್ರಶ್ನೆಯಿಲ್ಲ. ಈ ಶಾಲೆಯಲ್ಲಿ ಹೊರಗುತ್ತಿಗೆ ನೌಕರರ ಪಾರುಪತ್ಯಇದೆಯೆಂಬ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಕೂಡಲೇ ಅವರನ್ನು ಇಲ್ಲಿನ ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶಿಸಲಾಗಿದೆ. ಪ್ರಾಂಶುಪಾಲರನ್ನು ಸಹ ಇಲ್ಲಿಂದ ವರ್ಗ ಮಾಡುವ ಮೂಲಕ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಇಲ್ಲಿನ ಘಟನೆಗಳ ಬಗ್ಗೆ ಕೂಲಂಕಶ ತನಿಖೆ ನಡೆಯುತ್ತಿದೆ. ನೊಂದವರಿಗೆ ನ್ಯಾಯ ದೊರೆಯುವುದರಲ್ಲಿ ಯಾವ ಅನುಮಾನವೂ ಬೇಡ ಎಂದರು.
ಅಂಬೇಡ್ಕರ್ ವಸತಿ ನಿಲಯ ಶೃಂಗೇರಿಗೆ ಶೈಲಾ ಕೆ.ಪಿ. ಅವರನ್ನು ವರ್ಗಾವಣೆ ಮಾಡಲಾಗಿದ್ದು, ಇವರ ಸ್ಥಾನದಲ್ಲಿ ಶಂಕರಗೌಡ ಗಂಗನಗೌಡ್ರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂಬ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ವರ್ಗಗಳ ಉಪ ನಿರ್ದೇಶಕ ಸೋಮಶೇಖರ್, ಪೋಷಕರು, ಸಿಬ್ಬಂದಿ ಮತ್ತಿತರರು ಇದ್ದರು.16ಕೆಕೆಡಿಯು1.
ಕಡೂರು ತಾಲೂಕು ಕುಪ್ಪಾಳು ಮುರಾರ್ಜಿ ವಸತಿ ಶಾಲೆಗೆ ಜಿಲ್ಲಾ ಪಂಚಾಯ್ತಿಯ ಕಾಯ ನಿರ್ವಾಹಕ ಅಧಿಕಾರಿ ಡಾ.ಗೋಪಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು.