ಉತ್ತಮ ಕೆಲಸ ಮಾಡುವ ಪೌರ ಕಾರ್ಮಿಕರ ಪರ ನಾವಿದ್ದೇವೆ: ಪುರಸಭೆ ಅಧ್ಯಕ್ಷ ಪರಮೇಶ್

KannadaprabhaNewsNetwork | Published : Nov 17, 2023 6:45 PM

ಸಾರಾಂಶ

ಉತ್ತಮ ಕೆಲಸ ಮಾಡುವ ಪೌರ ಕಾರ್ಮಿಕರ ಪರ ನಾವಿದ್ದೇವೆ: ಪುರಸಭೆ ಅಧ್ಯಕ್ಷ ಪರಮೇಶ್

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ಸ್ವಚ್ಛತೆಗೆ ಪೌರ ಕಾರ್ಮಿಕರ ಜೊತೆ ಜನ ಪ್ರತಿನಿಧಿಗಳಾದ ನಾವು ಇದ್ದೇವೆ ಎಂದು ಪುರಸಭಾ ಅಧ್ಯಕ್ಷ ಪರಮೇಶ್ ಹೇಳಿದರು,

ಗುರುವಾರ ಪಟ್ಟಣದ ಕನಕ ಕಲಾ ಭವನದಲ್ಲಿ ಏರ್ಪಡಿಸಿದ್ದ ಪೌರ ಕಾರ್ಮಿಕರ ಕುಂದು ಕೊರತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೌರ ಕಾರ್ಮಿಕರೆಲ್ಲರೂ ಉತ್ತಮ ರೀತಿಯಲ್ಲಿ ಕೆಲಸ ಮಾಡಿರಿ ನಿಮ್ಮ ಪರವಾಗಿ ನಾವಿದ್ದೇವೆ ಎಂದರು. ವಿಶೇಷ ಆಹ್ವಾನಿತರಾದ ಜಿಲ್ಲಾ ಸಫಾಯಿ ಕರ್ಮಚಾರಿ ಮತ್ತು ಮ್ಯಾನುವಲ್ ಸ್ಕ್ಯಾವೆಂಜರ್ಸ್ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ಎನ್. ವೆಂಕಟೇಶ್ ಮಾತನಾಡಿ ಮನೆ, ನಿವೇಶನ ರಹಿತ ಪೌರ ಕಾರ್ಮಿಕರಿಗೆ ಮನೆ, ನಿವೇಶನಗಳನ್ನು ಕೊಡಬೇಕು. ಅನಾರೋಗ್ಯದಿಂದ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಪುರಸಭೆ ಶೇ 24.10 ಅನುದಾನದಲ್ಲಿ ತುರ್ತು ಆರ್ಥಿಕ ವ್ಯವಸ್ಥೆ ಮಾಡಬೇಕು. ಪೌರ ಕಾರ್ಮಿಕ ಕುಟುಂಬದ ಹೆಣ್ಣು ಮಕ್ಕಳ ವಿವಾಹಕ್ಕೆ ಕನಿಷ್ಠ 1ಲಕ್ಷ ರು. ಧನ ಸಹಾಯ ಮಾಡಬೇಕು, ಪುರಸಭಾ ವಸತಿ ಗೃಹಗಳು ಮತ್ತು ಶೌಚಾಲಯಗಳು ಶಿಥಿಲಾವಸ್ಥೆಯಲ್ಲಿದ್ದು ದುರಸ್ತಿ ಮಾಡಿಸಬೇಕು. ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು.

ಜಿಲ್ಲಾ ಸಫಾಯಿ ಕರ್ಮಚಾರಿ ಮತ್ತು ಮ್ಯಾನುವಲ್ ಸ್ಕ್ಯಾವೆಂಜರ್ಸ್ ಜಾಗೃತಿ ಸಮಿತಿ ಸದಸ್ಯರಾದ ಆರುಂಧತಿ ಜಿ ಹಗ್ಗಡೆ ಮಾತನಾಡಿ ಸಫಾಯಿ ಕರ್ಮಚಾರಿ ಗುರುತಿನ ಚೀಟಿ ಇರುವವರು ಸರ್ಕಾರಿ ಸವಲತ್ತು ಪಡೆಯಲು ಅರ್ಜಿ ಸಲ್ಲಿಸಿ ಪಡೆದುಕೊಳ್ಳಿರಿ ಹಾಗೂ ಪೌರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡಿ, ಪೌರ ಕಾರ್ಮಿಕರಿಗೆ ಕೆಲಸದ ಬಗ್ಗೆ ಯಾವುದೇ ರೀತಿ ತಾರತಮ್ಯ ತೊರದೆ ರೊಟೇಷನ್ ಪದ್ಧತಿಯಲ್ಲಿ ಕೆಲಸ ಮಾಡಿಸಬೇಕು ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್ ಮಾತನಾಡಿ ನಮ್ಮ ಪುರಸಭೆ ಸ್ವಚ್ಛತೆಯಲ್ಲಿ ರಾಜ್ಯದಲ್ಲಿ ಹೆಸರುವಾಸಿ ಮಾಡಿದೆ, ಇನ್ನು ಉತ್ತಮ ಸ್ಥಿತಿ ಬರಬೇಕು. ಪುರಸಭೆಯಲ್ಲಿ ಎಲ್ಲರೂ ಟೀಂ ವರ್ಕ್ ಮಾಡುವುದರಿಂದ ಅಭಿವೃದ್ಧಿ ಸಾಧ್ಯ, ಮಾನವೀಯ ಸಂಬಂಧಗಳಿಗೆ ಬೆಲೆ ಕೊಡಿ, ಕುಂದು ಕೊರತೆ ಗಳಿದ್ದರೆ ಜನಪ್ರತಿನಿಧಿಗಳು, ಅಧಿಕಾರಿಗಳ ಸಮಕ್ಷಮದಲ್ಲಿ ಬಗೆಹರಿಸಿಕೊಳ್ಳಿರಿ ಎಂದು ಹೇಳಿದರು. ವೈದ್ಯಕೀಯ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ಕೊಡುತ್ತಿದ್ದೇವೆ. ಹೃದಯ ಸಂಬಂಧಿ ಕಾಯಿಲೆಗಳಿಗೆ ಸ್ಪಂಧಿಸಿದ್ದೇವೆ. ಇಎಸ್ಐ ಕಾರ್ಡ್, ಜೀವ ವಿಮೆ, ಮಾಡಿಸಿಕೊಳ್ಳಬೇಕು ನೇರಪಾವತಿ ಕಾರ್ಮಿಕರಿಗೆ ಇಎಸ್ಐ ಸೌಲಭ್ಯ ಸಿಗುತ್ತದೆ. ಖಾಯಂ ಪೌರ ಕಾರ್ಮಿಕರು ಮೆಡಿಕಲ್ ರಿಯಾಮರ್ಬರ‍್ಸ್ಮೆಂಟ್ ಮಾಡಿಕೊಳ್ಳಬಹುದು ಎಂದು ಹೇಳಿದರು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ಕುಮಾರಪ್ಪ, ಕಚೇರಿ ಅಧೀಕ್ಷಕ ವಿಜಯ್ ಕುಮಾರ್, ಪರಿಸರ ಅಭಿಯಾಂತರರಾದ ತಾಹೇರಾ ತಸ್ಮೀನ್, ಪ್ರಥಮ ದರ್ಜೆ ಸಹಾಯಕ ಕಿರಣ್, ಪೌರ ಸೇವಾ ನೌಕರರ ಸಂಘದ ಪ್ರಭಾರಿ ಅಧ್ಯಕ್ಷ ಪ್ರಕಾಶ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಪೌರ ಕಾರ್ಮಿಕರೆಲ್ಲರೂ ತಮ್ಮ ಕುಂದು ಕೊರತೆಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ ಆರೋಗ್ಯ ನಿರೀಕ್ಷಕ ಮಹೇಶ್ ಸ್ವಾಗತಿಸಿ, ವಂದಿಸಿದರು. 16ಕೆಟಿಆರ್.ಕೆ.1ಃ

ತರೀಕೆರೆಯಲ್ಪಿ ಪುರಸಭಾ ಕಾರ್ಯಾಲಯದಿಂದ ಏರ್ಪಡಿಸಿದ್ದ ಪೌರ ಕಾರ್ಮಿಕರ ಕುಂದುಕೊರತೆ ಸಭೆ ಯಲ್ಲಿ ಪುರಸಭೆ ಅಧ್ಯಕ್ಷ ಪರಮೇಶ್, ಜಿಲ್ಲಾ ಸಫಾಯಿ ಕರ್ಮಚಾರಿ ಮತ್ತು ಮ್ಯಾನುವಲ್ ಸ್ಕ್ಯಾವೆಂಜರ್ಸ್ ಜಾಗೃತಿ ಸಮಿತಿ ಸದಸ್ಯರಾದ ತರೀಕೆರೆ ಎನ್. ವೆಂಕಟೇಶ್, ಪುರಸಭೆ ಮುಖ್ಯಾಧಿಕಾರಿ ಎಚ್. ಪ್ರಶಾಂತ್ ಮತ್ತಿತರರು ಇದ್ದರು.

Share this article