ಧಾರವಾಡ:
ಕರಡಿಕೊಪ್ಪ, ಕುರಡಿಕೇರಿ, ಕಂಪ್ಲಿಕೊಪ್ಪ, ವೀರಾಪೂರ ಇನ್ನಿತರ ಗ್ರಾಮಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಸರ್ಕಾರವು 2015ರ ಡಿಸೆಂಬರ್ 15ರಂದು ಕುರಡಿಕೇರಿಯಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಅಡಿ ಉನ್ನತೀಕರಿಸಲಾದ ಸರ್ಕಾರಿ ಪ್ರೌಢಶಾಲೆಗೆ ಪೂರ್ವಾನುಮೋದನೆ ನೀಡಿತ್ತು. ಈ ಆಧಾರದ ಮೇಲೆ ಜಿಲ್ಲಾಧಿಕಾರಿ ಗ್ರಾಮದಲ್ಲಿ 3 ಎಕರೆ ಜಮೀನನ್ನು ಪ್ರೌಢಶಾಲೆ ನಿರ್ಮಾಣಕ್ಕಾಗಿ ಅಧಿಕೃತವಾಗಿ ಮಂಜೂರು ಮಾಡಿದ್ದರು. ನಂತರ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಅಗತ್ಯ ಅನುದಾನವ ಸಹ ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ, ಜಾಗ ಮಂಜೂರಾಗಿ ಹತ್ತು ವರ್ಷ ಕಳೆದಿದ್ದರೂ ಕಂದಾಯ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳ ನಡುವಿನ ಸಮನ್ವಯದ ಕೊರತೆಯಿಂದ ಇಂದಿಗೂ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಂಜೂರಾದ ಜಾಗದ ಕಂದಾಯ ದಾಖಲಾತಿಗಳನ್ನು ಕಾನೂನುಬದ್ಧವಾಗಿ ಸರಿಪಡಿಸದ ಕಾರಣ ಸರ್ಕಾರದಿಂದ ಬಿಡುಗಡೆಯಾಗಿದ್ದ ಕೋಟ್ಯಂತರ ರೂಪಾಯಿ ಅನುದಾನವು ಮೂರು ಬಾರಿ ಬಳಕೆಯಾಗದೆ ಸರ್ಕಾರಕ್ಕೆ ಮರುಳಿದೆ. ಇದು ಸಾರ್ವಜನಿಕ ಹಣದ ಅಪವ್ಯಯ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಕರ್ತವ್ಯಲೋಪ ಮತ್ತು ಆಡಳಿತಾತ್ಮಕ ವೈಫಲ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಶಾಲಾ ಕಟ್ಟಡ ನಿರ್ಮಾಣ ವಿಳಂಬವಾಗಿದ್ದರಿಂದ ಈ ಭಾಗದ ಬಡ ವಿದ್ಯಾರ್ಥಿಗಳು ದೂರದ ಖಾಸಗಿ ಶಾಲೆಗಳಿಗೆ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಅಲ್ಲದೇ ಸುರಕ್ಷತಾ ಸಮಸ್ಯೆಗಳಿಂದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುವ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.ಮಂಜೂರಾದ ಪ್ರೌಢಶಾಲೆಯ ಜಾಗದ ಕಂದಾಯ ದಾಖಲಾತಿಗಳನ್ನು 15 ದಿನಗಳೊಳಗಾಗಿ ಸರಿಪಡಿಸಿ ಶಾಲಾ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದರು.