ಸಂಜೆಯಾಗುತ್ತಲೇ ಕುಡುಕರ ತಾಣವಾಗುವ ಕುರುಗೋಡು ಸರ್ಕಾರಿ ಪಿಯು ಕಾಲೇಜು

KannadaprabhaNewsNetwork |  
Published : Jul 26, 2026, 02:45 AM IST
ಕುರುಗೋಡು 01  ಪಟ್ಟಣದ ಬಾದನಹಟ್ಟಿ ರಸ್ತೆಯ ಪದವಿ ಕಾಲೇಜು ಪಕ್ಕದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ ಹೊರ ನೋಟ. | Kannada Prabha

ಸಾರಾಂಶ

ರಕ್ಷಣಾ ಗೋಡೆ ಇಲ್ಲದ ಕಾರಣ ಕಾಲೇಜು ಆವರಣ ಸಂಜೆಯಾಗುತ್ತಲೇ ಕುಡುಕರ ಅಡ್ಡೆಯಾಗುತ್ತಿದೆ. ಎಲ್ಲೆಡೆ ಮದ್ಯದ ಬಾಟಲಿಗಳನ್ನು ಒಡೆದು ಬಿಸಾಡಲಾಗಿದೆ.

ಎನ್. ಪಂಪನಗೌಡ ಬಾದನಹಟ್ಟಿ

ಕುರುಗೋಡು: ಇಲ್ಲಿಯ ಎನ್.ಎಂ.ಎಂ. ಸರ್ಕಾರಿ ಪದವಿಪೂರ್ವ ಕಾಲೇಜು ಅವ್ಯವಸ್ಥೆಯ ತಾಣವಾಗಿದೆ. ಯಾವುದೇ ಸೌಲಭ್ಯ ಕೇಳಿದರೂ ಇಲ್ಲ ಎನ್ನುವ ಉತ್ತರ ಬರುತ್ತದೆ.

ರಕ್ಷಣಾ ಗೋಡೆ ಇಲ್ಲದ ಕಾರಣ ಕಾಲೇಜು ಆವರಣ ಸಂಜೆಯಾಗುತ್ತಲೇ ಕುಡುಕರ ಅಡ್ಡೆಯಾಗುತ್ತಿದೆ. ಎಲ್ಲೆಡೆ ಮದ್ಯದ ಬಾಟಲಿಗಳನ್ನು ಒಡೆದು ಬಿಸಾಡಲಾಗಿದೆ.

ಪಟ್ಟಣದ ಬಾದನಹಟ್ಟಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪಕ್ಕದಲ್ಲಿ 2018-19ನೇ ಸಾಲಿನಲ್ಲಿ ಎಚ್.ಕೆ.ಆರ್.ಡಿ.ಬಿ. ಯೋಜನೆ ಅಡಿ ₹1.86 ಕೋಟಿ ವೆಚ್ಚದಲ್ಲಿ 18 ಕೊಠಡಿಗಳನ್ನು ನಿರ್ಮಿಸಲಾಗಿದೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಸುರೇಶ್ ಬಾಬು ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಆದರೆ ಕಾಮಗಾರಿ ಕುಟುಂತ್ತ ಸಾಗಿತ್ತು. ಅಂತೂ ಇಂತು ಕಾಮಗಾರಿ ಮುಗಿದ ಬಳಿಕ ಶಾಸಕ ಜೆ.ಎನ್. ಗಣೇಶ ಕಾಲೇಜು ಕೊಠಡಿಗಳನ್ನು ಉದ್ಘಾಟಿಸಿದ್ದಾರೆ. ಆದರೆ ಉದ್ಘಾಟನೆ ವೇಳೆ ಅವರು ನೀಡಿದ್ದ ಭರವಸೆಗಳು ಈಡೇರಲಿಲ್ಲ.

ಭರವಸೆಗಳು ಹುಸಿ:

ಮೂರು ವರ್ಷಗಳ ಹಿಂದೆ ಕಾಲೇಜ್ ಕಟ್ಟಡವನ್ನು ಶಾಸಕ ಜೆ.ಎನ್. ಗಣೇಶ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಉದ್ಘಾಟಿಸಿ, ಮೂಲ ಸೌಕರ್ಯ ಕಲ್ಪಿಸುವ ಭರವಸೆ ನೀಡಿದ್ದರು. ಸಮಸ್ಯೆಗಳನ್ನು ಇತ್ಯರ್ಥ ಮಾಡುವ ಭರವಸೆ ನೀಡಿದ್ದರು. ಆದರೆ ಈ ವರೆಗೂ ಕಾಲೇಜಿಗೆ ಯಾವುದೇ ಸೌಲಭ್ಯ ಇಲ್ಲವಾಗಿದೆ.

ಮುಖ್ಯವಾಗಿ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣವಿಲ್ಲ. ಕಾಲೇಜಿಗೆ ಸಮರ್ಪಕ ರಸ್ತೆಯಾಗಲಿ, ಸಾರಿಗೆ ವ್ಯವಸ್ಥೆಯಾಗಲಿ ಇಲ್ಲ. ಪಿಯು ಕಾಲೇಜಿಗೆ 520 ವಿದ್ಯಾರ್ಥಿಗಳಿದ್ದಾರೆ. ಪಕ್ಕದ ಪದವಿ ಕಾಲೇಜಿನಲ್ಲಿ 850 ರಿಂದ 900 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಎರಡೂ ಕಾಲೇಜು ವಿದ್ಯಾರ್ಥಿಗಳು ಸುಮಾರು 3 ಕಿಮೀ ನಡೆದುಕೊಂಡು ಹೋಗಬೇಕಿದೆ.

ಕಾಲೇಜಿನಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲ, ಸಾಕಷ್ಟು ವಿದ್ಯಾರ್ಥಿಗಳಿಗೆ ನೆಲವೇ ಆಸನವಾಗಿದೆ. ಕಾಲೇಜ್ ಕಟ್ಟಡದ ಕಿಟಕಿ ಗ್ಲಾಸ್‌ಗಳು ಒಡೆದು ಹೋಗಿವೆ. ರಕ್ಷಣಾ ಗೋಡೆ ಇಲ್ಲ.

ಕೋಣೆಗಳಿಗೆ ವಿದ್ಯುತ್ ಸಂಪರ್ಕವೇ ಇರಲಿಲ್ಲ. ಲ್ಯಾಬ್, ಕಂಪ್ಯೂಟರ್ ತರಗತಿ, ಕಚೇರಿಯ ಕೆಲಸ ಕಾರ್ಯಗಳು ಸೇರಿದಂತೆ ಇತರ ಚಟುವಟಿಕೆ ನಡೆಸಲು ಸಮಸ್ಯೆ ಉಂಟಾಗುತ್ತಿತ್ತು. ಉಪನ್ಯಾಸಕರು ತಮ್ಮ ಸ್ವಂತ ಹಣದಲ್ಲೇ ವಿದ್ಯುತ್ ಸಂಪರ್ಕ ಅಳವಡಿಸಿದ್ದಾರೆ.

ವಿದ್ಯಾರ್ಥಿಗಳು, ಉಪನ್ಯಾಸಕರ ನಿತ್ಯದ ಗೋಳು ಕೇಳುವವರಿಲ್ಲ. ಕಾಲೇಜಿಗೆ ಮೂಲಭೂತ ಸೌಲಭ್ಯ ಕೊಡಿ ಎಂದು ತಾಲೂಕು ಆಡಳಿತ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ ಶಾಲಾ-ಕಾಲೇಜಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಪ್ರತಿ ವರ್ಷ ಕೋಟ್ಯಂತರ ರು. ವೆಚ್ಚ ಮಾಡುತ್ತಾರೆ. ಆದರೆ ಈ ಕಾಲೇಜಿಗೆ ರಸ್ತೆ, ರಕ್ಷಣಾ ಗೋಡೆ, ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು ಎನ್ನುತ್ತಾರೆ ಶಿಕ್ಷಣಪ್ರೇಮಿ ಕೆ. ವಿರೂಪಾಕ್ಷ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೈಜ ವಿದ್ಯಾರ್ಥಿಗಳು ಎಚ್ಚೆತ್ತುಕೊಳ್ಳಲಿ: ಪ್ರಭಾಕರ ಪ್ರಭು
ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರತಿಭಟನೆಗೆ ಸಿಪಿಐಎಂ ಬೆಂಬಲ