ಕನ್ನಡಪ್ರಭ ವಾರ್ತೆ ಸಿರುಗುಪ್ಪ
ಸೇವಾ ನಿರ್ಲಕ್ಷ್ಯ ವಹಿಸುತ್ತಿರುವ ತಾಲೂಕಿನ ಕುರುವಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ವಿದ್ಯಾಶ್ರೀ ಅವರನ್ನು ಕೂಡಲೇ ಬೇರೆಡೆ ವರ್ಗಾವಣೆಗೊಳಿಸಬೇಕು ಎಂದು ಗ್ರಾಮಸ್ಥರು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಲು ಗ್ರಾಮಕ್ಕೆ ಆಗಮಿಸಿದ್ದ ವಿಚಾರಣಾಧಿಕಾರಿ ಡಾ. ಅಬ್ದುಲ್ಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ.ಇದೇ ವೇಳೆ ಮಾತನಾಡಿದ ಗ್ರಾಮದ ಮುಖಂಡ ಎಚ್.ರಾಘವೇಂದ್ರ ರೆಡ್ಡಿ ಮತ್ತಿತರರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿದ್ಯಾಶ್ರೀ ನಿತ್ಯ ಸರಿಯಾದ ಸಮಯಕ್ಕೆ ಕೆಲಸಕ್ಕೆ ಹಾಜರಾಗುವುದಿಲ್ಲ. ಆಸ್ಪತ್ರೆಗೆ ಬಂದ ರೋಗಿಗಳಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡದೇ ತಮ್ಮ ವಿಶ್ರಾಂತಿ ಕೊಠಡಿಯಲ್ಲಿ ಕುಳಿತುಕೊಂಡಿರುತ್ತಾರೆ. ಡಾ. ವಿದ್ಯಾಶ್ರೀ ಹೆಚ್ಚಿನ ಸಮಯವನ್ನು ತಮ್ಮ ಸ್ವಂತ ಖಾಸಗಿ ನರ್ಸಿಂಗ್ ಹೋಂನಲ್ಲಿಯೇ ಕಳೆಯುತ್ತಾರೇ ವಿನಃ ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚಾಗಿ ಇರುವುದಿಲ್ಲ. ಈ ಬಗ್ಗೆ ಅನೇಕ ಬಾರಿ ಅವರಿಗೆ ಮನವರಿಕೆ ಮಾಡಿದ್ದಾಗ್ಯೂ ಯಾವುದೇ ಪ್ರಯೋಜನವಾಗಿಲ್ಲ. ಆಸ್ಪತ್ರೆಯಲ್ಲಿರುವ ಲಕ್ಷಾಂತರ ಮೌಲ್ಯದ ಔಷಧಿಗಳನ್ನು ರೋಗಿಗಳಿಗೆ ನೀಡದೆ ಗ್ರಾಮ ಹೊರವಲಯದ ಹಳ್ಳದಲ್ಲಿ ಎಸೆಯಲಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಹಾಗೂ ಸಿಬ್ಬಂದಿಯ ನಿಷ್ಕಾಳಜಿಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಕುರುವಳ್ಳಿ ಆಸ್ಪತ್ರೆಗೆ ಬರುವ ಸುತ್ತಮುತ್ತಲಿನ ಗ್ರಾಮದ ಬಡ ಗರ್ಭಿಣಿಯರಿಗೆ ಸರಿಯಾಗಿ ತಪಾಸಣೆ ಮಾಡದೆ ಸಿರುಗುಪ್ಪ ನಗರದಲ್ಲಿರುವ ತಮ್ಮ ನರ್ಸಿಂಗ್ ಹೋಂಗೆ ಬಂದರೆ ಗುಣಮಟ್ಟದ ಚಿಕಿತ್ಸೆ ನೀಡುವುದಾಗಿ ಹೇಳುತ್ತಾರೆ. ಕುರುವಳ್ಳಿಯಲ್ಲಿ ತಿಂಗಳಿಗೆ ಮೂರರಿಂದ ನಾಲ್ಕು ಹೆರಿಗೆಗಳನ್ನು ಮಾತ್ರ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದು ದೂರಿದರು.ಇದೇ ವೇಳೆ ಗ್ರಾಮಸ್ಥರು ಡಾ. ವಿದ್ಯಾಶ್ರೀ ಅವರ ಸೇವಾ ನಿರ್ಲಕ್ಷ್ಯದ ಬಗ್ಗೆ ಲಿಖಿತ ರೂಪದಲ್ಲಿ ದೂರನ್ನು ವಿಚಾರಣಾಧಿಕಾರಿ ಡಾ. ಅಬ್ದುಲ್ಲಾ ಅವರಿಗೆ ನೀಡಿದರಲ್ಲದೆ, ಕೂಡಲೇ ವೈದ್ಯೆಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗ್ರಾಮ ಹಾಗೂ ಸುತ್ತಮುತ್ತಲ ಗ್ರಾಮಸ್ಥರ ಹಿತ ದೃಷ್ಟಿಯಿಂದ ಅವರನ್ನು ಬೇರೆಡೆ ವರ್ಗಾಯಿಸಿ, ಉತ್ತಮವಾಗಿ ಕಾರ್ಯನಿರ್ವಹಿಸುವ ವೈದ್ಯರನ್ನು ನಿಯೋಜಿಸಬೇಕು ಎಂದು ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಚಾರಣಾ ಅಧಿಕಾರಿ ಡಾ. ಅಬ್ದುಲ್ಲಾ, ಗ್ರಾಮಸ್ಥರ ಅಭಿಪ್ರಾಯ ಹಾಗೂ ಆರೋಪಗಳ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಬಳಿಕ ಮುಂದಿನ ಹಂತದ ಕ್ರಮವಾಗಲಿದೆ ಎಂದು ಭರವಸೆ ನೀಡಿದರು.ಡಾ. ವಿದ್ಯಾಶ್ರೀ ಅವರ ಸೇವಾ ನಿರ್ಲಕ್ಷ್ಯ ಕುರಿತು ಗ್ರಾಮದ ನೂರಾರು ಜನರು ಸಹಿ ಮಾಡಿ ಜಿಲ್ಲಾಧಿಕಾರಿಗಳು, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಕಳೆದ ಫೆ.10ರಂದು ದೂರು ಸಲ್ಲಿಸಿದ್ದು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಗ್ರಾಮಸ್ಥರ ಆರೋಪದ ಹಿನ್ನೆಲೆ ಆಯುಕ್ತರಿಗೆ ಪತ್ರ ಬರೆದು ಮುಂದಿನ ಕ್ರಮಕ್ಕಾಗಿ ಕೋರಿದ್ದಾರೆ. ಜು. 25 ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ಇಷ್ಟಾಗಿಯೂ ಕುರುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯನ್ನು ಬೇರೆಡೆಗೆ ವರ್ಗಾಯಿಸದಿರುವುದು ಅಚ್ಚರಿ ಮೂಡಿಸಿದೆ.