ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ನಿರಂತರವಾಗಿ ಬೆಲೆ ಏರಿಕೆ ಮಾಡುವ ಮೂಲಕ ಜನವಿರೋಧಿ ಸರ್ಕಾರವಾಗಿ ರೂಪುಗೊಂಡಿದೆ. ಪಂಚಭಾಗ್ಯ ಹೆಸರಿನಲ್ಲಿ ಜನರಿಂದ ಕಿತ್ತು ಜನರಿಗೆ ಕೊಡುಗೆ ನೀಡುವ ಮೂಲಕ ಜನರಿಗೆ ಮೋಸ ಮಾಡುತ್ತಿದೆ. ಇದರಿಂದ ಜನತೆ ಬೇಸತ್ತಿದ್ದಾರೆ ಎಂದರು.ಇದೀಗ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಹೆಚ್ಚಿಸುವ ಮೂಲಕ ಇದನ್ನು ಅವಲಂಬಿಸಿರುವ ಇತರೆ ಕ್ಷೇತ್ರಗಳಿಗೆ ಕೂಡ ಹೊರೆ ಉಂಟಾಗಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಕೂಡ ವಿದ್ಯುತ್ ಪೂರೈಸದೆ ಸತಾಯಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಹಳ್ಳಿಹಳ್ಳಿಗಳಲ್ಲಿ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಕೂಡಲೆ ಸರ್ಕಾರ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಗೌತಮ್ ಮಾತನಾಡಿ, ಬೆಲೆ ಏರಿಕೆಯಿಂದ ಮಧ್ಯಮ ಹಾಗೂ ಬಡ ವರ್ಗದ ಜನತೆಗೆ ಅನಾನುಕೂಲ ಉಂಟಾಗಿದೆ. ರಾಜ್ಯದ ಕಾಂಗ್ರೆಸ್ ಆಡಳಿತ ಆರ್ಥಿಕ ಸುವ್ಯವಸ್ಥೆ ಕಾಪಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಆರ್.ಕೆ.ಚಂದ್ರ, ಪ್ರಧಾನ ಕಾರ್ಯದರ್ಶಿ ಅಮೃತ್ ರಾಜ್, ನಗರ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಮಧುಸೂದನ್, ಯುವ ಮೋರ್ಚಾ ಅಧ್ಯಕ್ಷ ರಾಮನಾಥನ್, ಪ್ರಧಾನ ಕಾರ್ಯದರ್ಶಿ ಸಚಿನ್, ಪುರಸಭೆ ಸದಸ್ಯ ಜಯವರ್ಧನ್ ಸೇರಿದಂತೆ ಮುಖಂಡರಾದ ಎಂ.ಡಿ. ಕೃಷ್ಣಪ್ಪ, ವಿ ಡಿ ಪುಂಡರೀಕಾಕ್ಷ, ಚಿಲ್ಲನ ಗಣಿಪ್ರಸಾದ್, ಪ್ರವೀಣ್, ಚಂದ್ರಶೇಖರ್ ಹೇರೂರು, ಜಿ.ಎಲ್.ನಾಗರಾಜ್, ಸೋಮಶೇಖರ್, ಪ್ರಭಾಕರ್, ಮಹಿಳಾ ಘಟಕದ ಸರಳ ರಾಮಣ್ಣ, ಅನಿತಾ ಉತ್ತಪ್ಪ, ಗಂಗಮ್ಮ, ಶೋಭಾ, ಗೀತಾಂಜಲಿ ಮತ್ತಿತರರ ಕಾರ್ಯಕರ್ತರು ಇದ್ದರು.