ಕುಶಾಲನಗರ: ವಕ್ಫ್‌ ಕಾಯ್ದೆ ರದ್ದು ಆಗ್ರಹಿಸಿ ಬಿಜೆಪಿ ಪ್ರತಿಭಟನೆ

KannadaprabhaNewsNetwork | Published : Nov 7, 2024 11:48 PM

ಸಾರಾಂಶ

ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕುಶಾಲನಗರ

ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು, ಮುಖಂಡರು ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ನೇತೃತ್ವದಲ್ಲಿ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಿದರು.

ಕುಶಾಲನಗರ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ವಕ್ಫ್‌ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರೈತರ, ಬಡವರ ಹಾಗೂ ಮಠಗಳ ಭೂಮಿ ಕಬಳಿಸಲು ವಕ್ಫ್ ಬೋರ್ಡ್ ಹುನ್ನಾರ ನಡೆಸುತ್ತಿದೆ ಎಂದು ರಾಜ್ಯ ಸರ್ಕಾರ, ವಕ್ಫ್ ಬೋರ್ಡ್ ಸಚಿವ ಜಮೀರ್ ಅಹಮ್ಮದ್ ವಿರುದ್ಧ ಹರಿಹಾಯ್ದರು.

ಕಾಂಗ್ರೆಸ್ ಮುಸ್ಲಿಂ ಓಲೈಕೆ ರಾಜಕಾರಣಕ್ಕೆ ಧಿಕ್ಕಾರ, ಜಮೀರ್‌ಗೆ ಧಿಕ್ಕಾರ, ವಕ್ಫ್ ಬೋರ್ಡ್ ಕಾಯ್ದೆ ರದ್ದುಪಡಿಸಿ ಎಂಬಿತ್ಯಾದಿ ಘೋಷಣೆಗಳನ್ನು ಪ್ರತಿಭಟನಾಕಾರರು ಕೂಗಿದರು.

ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಮಾಜಿ ಸಚಿವ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ವಕ್ಫ್ ಕಾಯ್ದೆ ವಿರೋಧಿಸಿ ಬಿಜೆಪಿ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ ‌ನಡೆಸಲಾಗುತ್ತಿದೆ ಎಂದು ಟೀಕಿಸಿದರು.

ಕರ್ನಾಟಕ ಒಡೆಯುವ ಕೆಲಸವನ್ನು ಜಮೀರ್ ಅಹಮ್ಮದ್ ಮಾಡುತ್ತಿದ್ದಾರೆ. ಬಡವರ ರೈತರ ಹಾಗೂ ಮಠಗಳ ಜಮೀನು ದಾಖಲೆಯಲ್ಲಿ ವಕ್ಫ್ ಬೋರ್ಡ್ ಹೆಸರು ದಾಖಲಿಸುವ‌ ಕೆಲಸ ಮಾಡುತ್ತಿದ್ದಾರೆ. ಮೊದಲು ಬೆಂಗಳೂರಿನಲ್ಲಿರುವ ಐಷಾರಾಮಿ ಹೊಟೇಲ್‌ಗಳನ್ನು ಬಿಡಿಸಿ ಸರ್ಕಾರಕ್ಕೆ ಕೊಡುವ ಕೆಲಸ ಮಾಡಲಿ ಎಂದು ಸವಾಲು ಹಾಕಿದರು.

ಮಡಿಕೇರಿಯಲ್ಲಿ 15 ಮಂದಿಗೆ ವಕ್ಫ್‌ ಆಸ್ತಿ ವಿಚಾರದಲ್ಲಿ ನೋಟಿಸ್ ನೀಡಲಾಗಿದೆ. ಸೋಮವಾರಪೇಟೆ 11 ಎಕರೆ ವಕ್ಫ್ ಹೆಸರಿಗೆ ಆರ್.ಟಿ.ಸಿಯಲ್ಲಿ ದಾಖಲಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ. ಆದ್ದರಿಂದ ಸರ್ಕಾರ ಈ ಕೂಡಲೇ ವಕ್ಫ್ ಬೋರ್ಡ್ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಕೆಲಸ ಮಾಡುತ್ತಿದೆ ಎಂದು ದೂರಿದರು. ರಾಜ್ಯದಲ್ಲಿ ಸಂವಿಧಾನದ ಅಡಿಯಲ್ಲಿರುವ ಸರ್ಕಾರವೊ ಅಥವಾ ತುಘಲಕ್ ಸರ್ಕಾರವೊ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 1.5 ಲಕ್ಷ ಎಕರೆ ಜಮೀನು ವಕ್ಫ್ ಬೋರ್ಡ್ ಗೆ ಸೇರಿದೆ ಎಂದು ಹೇಳುತ್ತಿದ್ದಾರೆ. ಮೊದಲು ಕಾಂಗ್ರೆಸ್ ನಾಯಕರು ಒತ್ತುವರಿ ಮಾಡಿರುವ ವಕ್ಫ್ ಜಾಗವನ್ನು ತೆರವುಗೊಳಿಸಲಿ ಎಂದ ತಾಕೀತು ಮಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೋಟಿಸ್ ಹಿಂಪಡೆಯುವುದಾಗಿ ಘೋಷಣೆ ಮಾಡಿದ್ದಾರೆ. ಶಾಶ್ವತವಾಗಿ ವಾಪಸು ಪಡೆಯಲಿ. ಈ ಸಂಬಂಧ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಲಿ ಎಂದು ಒತ್ತಾಯಿಸಿದರು. ವಕ್ಫ್ ಬೋರ್ಡ್ ನಿಂದ ನೋಟಿಸ್ ನೀಡುವುದು,ಬೆದರಿಕೆ ಹಾಕುವುದನ್ನು ಬಿಜೆಪಿ ಸಹಿಸುವುದಿಲ್ಲ ಇದರ ವಿರುದ್ಧ ಉಗ್ರ ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಎಂ.ಚರಣ್, ಕಾರ್ಯದರ್ಶಿ ಎಚ್.ಎಂ. ಮಧುಸೂದನ್,ಮಂಡಲ ಅಧ್ಯಕ್ಷ ಗೌತಮ್, ಜಿಲ್ಲಾ ಯುವ ಘಟಕದ ಉಪಾಧ್ಯಕ್ಷ ನವನೀತ್, ತಾಲೂಕು ಘಟಕದ ಉಪಾಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಯುವ ಮೋರ್ಚ್ ಅಧ್ಯಕ್ಷ ರಮಾನಾಥನ್, ಪ್ರಧಾನ ಕಾರ್ಯದರ್ಶಿ ಸಚಿನ್, ಪುರಸಭೆ ಸದಸ್ಯ ಡಿ.ಕೆ.ತಿಮ್ಮಪ್ಪ, ಮುಖಂಡರಾದ ಜಿ.ಎಲ್.ನಾಗರಾಜು, ಎಂ.ವಿ.ನಾರಾಯಣ, ಎಂ.ಎನ್.ಕುಮಾರಪ್ಪ, ಎಂ.ಎಸ್.ಚಿಣ್ಣಪ್ಪ, ಶಿವಕುಮಾರ್, ಗಣಪತಿ, ಕೆ.ವರದ, ಕೆ.ಜಿ.ಮನು,ಮಹೇಶ್ ಪ್ರವೀಣ್, ವೈಶಾಖ್, ಮಣಿ, ಸುಮನ್ , ಶಶಿಕುಮಾರ್, ನಿತ್ಯಾನಂದ, ಗೀತಾ ಧರ್ಮಪ್ಪ, ಗೀತಾಂಜಲಿ ಮತ್ತಿತರರು ಪಾಲ್ಗೊಂಡಿದ್ದರು.

Share this article