ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ತಾಲೂಕು ವಿವಿಧ ಗ್ರಾಮಗಳಲ್ಲಿ ದಲಿತರು, ಬಡವರ ಅಕ್ರಮ ಸಾಗುವಳಿ 57 ಮತ್ತು 94ಸಿ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಬಲಾಢ್ಯರ ಅರ್ಜಿಗಳು ಮಾತ್ರ ವಿಲೇವಾರಿಯಾಗಿವೆ. ದಲಿತರ ಜಾಗ ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ದಲಿತರ ಕೃಷಿ ಭೂಮಿಯ ಮೇಲೆ ಉಳ್ಳವರಿಗೆ, ಬಲಿಷ್ಠರಿಗೆ ರಸ್ತೆ ಬಿಡಿಸಿಕೊಡುವ ಬಗ್ಗೆ ದಲಿತರಿಗೆ ಕಿರುಕುಳ ದೌರ್ಜನ್ಯ ನಡೆಸಲಾಗುತ್ತಿದೆ. ಇನ್ನು ಕೆಲವು ಗ್ರಾಮದಲ್ಲಿ ದಲಿತರಿಗೆ ಸೂಕ್ತ ತಿರುಗಾಡಲು ರಸ್ತೆ ಇಲ್ಲ. ಸತ್ತಾಗ ಹೂಳಲು ಸ್ಮಶಾನ ಇಲ್ಲ ಎಂದು ಆರೋಪಿಸಲಾಯಿತು.
ಸರ್ಕಾರ ಬಡವರ ತುಂಡು ಭೂಮಿಯನ್ನು ಪೈಸಾರಿ ಸೇರಿಸಿ ಯಾವುದೇ ಸಾಲ ಸೌಲಭ್ಯಗಳು ಸಿಗದಂತೆ ಮಾಡಿದೆ. ಉಳ್ಳವರು ಅಕ್ರಮಿಸಿಕೊಂಡಿರುವ 25 ಎಕರೆ ವರೆಗೆ 30 ವರ್ಷ ಗುತ್ತಿಗೆ ನೀಡಲಾಗುತ್ತಿದೆ. ಬಡವರು, ದಲಿತ, ಆದಿವಾಸಿಗಳಿಗೆ ಸ್ವಂತ ನಿವೇಶನ ಕೃಷಿ ಭೂಮಿ ನೀಡದೆ ಸರ್ಕಾರ ವಂಚನೆ ಮಾಡಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರೈತ ಸಂಘದ ಪ್ರಮುಖ ನಿರ್ವಾಣಪ್ಪ ಹೇಳಿದರು.ಪ್ರತಿಭಟನೆಯಲ್ಲಿ ಈ ಕೆಳಗಿನ ಹಕ್ಕೊತ್ತಾಯಗಳ ಬಗ್ಗೆ ತಹಸೀಲ್ದಾರ್ ಗಮನಕ್ಕೆ ತರಲಾಯಿತು.
-ಬಡವರ ತುಂಡುಭೂಮಿಯನ್ನು ಪೈಸಾರಿ ಎಂದು ಆರ್.ಟಿ.ಸಿ.ಗೆ ಸೇರಿಸುವುದನ್ನು ರದ್ದುಗೊಳಿಸಬೇಕು.
-ಭುವನಗಿರಿ ಮತ್ತು ಸೀಗೆ ಹೊಸೂರು ಸರ್ವೆ ನಂ.35 ಮತ್ತು 2/10ರ ದಲಿತರ ಭೂಮಿಯ ಮೇಲೆ ಉಳ್ಲವರಿಗೆ ರಸ್ತೆ ಬಿಡಿಸಿಕೊಡುವುದನ್ನು ಕೈಬಿಡಬೇಕು.
-ಸರ್ಕಾರಿ ಭೂಮಿಯನ್ನು ಉಳ್ಳವರು ಅಕ್ರಮಿಸಿಕೊಂಡಿರುವುದನ್ನು ತೆರವುಗೊಳಿಸಿ ಬಡವರಿಗೆ ಹಂಚಬೇಕು ಎನ್ನುವ ಹಕ್ಕೊತ್ತಾಯ ಈಡೇರಿಸಬೇಕಾಗಿ ಮನವಿ ಸಲ್ಲಿಸಲಾಯಿತು.